ದೆಹಲಿಗೆ ಕರೆಸಿಕೊಂಡೂ ಭೇಟಿಯಾಗದ ಅಮಿತ್ ಶಾ | ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧೆ ಫಿಕ್ಸ್?

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, "ತಾವು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುಶಃ ಅಮಿತ್‌ ಶಾ ಅವರಿಗೂ ಬೇಕಿದೆ. ಹಾಗಾಗಿ ಅವರು ನನ್ನ ಭೇಟಿಗೆ ಸಮಯ ಕೊಟ್ಟಿಲ್ಲ. ಆದ್ದರಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಖಚಿತ" ಎಂದಿದ್ದಾರೆ.;

Update: 2024-04-04 06:15 GMT

ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಂಡಾಯ ಎದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಮಾಡಲು ದೆಹಲಿಗೆ ತೆರಳಿದ್ದರು. ಆದರೆ ಅಮಿತ್‌ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿಲ್ಲ.

ಆ ಹಿನ್ನೆಲೆಯಲ್ಲಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ತಾವು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುಶಃ ಅಮಿತ್‌ ಶಾ ಅವರಿಗೂ ಬೇಕಿದೆ. ಹಾಗಾಗಿ ಅವರು ನನ್ನ ಭೇಟಿಗೆ ಸಮಯ ಕೊಟ್ಟಿಲ್ಲ. ಆದ್ದರಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಖಚಿತ ಎಂದು ಹೇಳಿದ್ದಾರೆ.

ʻʻಬುಧವಾರ ರಾತ್ರಿ 10 ಗಂಟೆಯ ನಂತರ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಅಮಿತ್ ಶಾ ಅವರು ಭೇಟಿಗೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎನ್ನುವ ಅಪೇಕ್ಷೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಇರಬಹುದುʼʼ ಎಂದು ಹೇಳಿದರು.

ಈ ವೇಳೆ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಈಶ್ವರಪ್ಪ ತಿಳಿಸಿದರು.

ʻʻಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಸೋಲಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈ ಬಲಪಡಿಸಲಾಗುವುದು. ಬಿಜೆಪಿ ಹೈಕಮಾಂಡ್, ತಾವು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಮತ್ತೆ ಮಾತುಕತೆಗೆ ಕರೆದರೆ ಹೋಗುವುದಿಲ್ಲʼʼ ಎಂದು ಹೇಳಿದರು.

ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ ಇ ಕಾಂತೇಶ್‌ ಅವರಿಗೆ ಟಿಕೆಟ್‌ ಕೊಡಿಸುವುದಾಗಿಯೂ ಮತ್ತು ಅವರ ಗೆಲುವಿಗೆ ಸಂಪೂರ್ಣ ಪ್ರಯತ್ನಿಸುವುದಾಗಿಯೂ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಿರಾಕರಿಸಿದಾಗಲೂ ತಮ್ಮ ಪುತ್ರನಿಗೆ ಲೋಕಸಭಾ ಟಿಕೆಟ್‌ ಕೊಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದೀಗ ಚುನಾವಣೆ ಬಂದಾಗ ಯಡಿಯೂರಪ್ಪ ಮತ್ತು ಮಕ್ಕಳು ತಮ್ಮನ್ನು ತುಳಿದಿದ್ದಾರೆ. ಯಡಿಯೂರಪ್ಪ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತೊಬ್ಬರ ಮಕ್ಕಳನ್ನು ಬಲಿ ಕೊಡುತ್ತಿದ್ದಾರೆ. ಪಕ್ಷಕ್ಕಿಂತ ಅವರಿಗೆ ಕುಟುಂಬವೇ ಮುಖ್ಯ. ಅವರ ಕಪಿಮುಷ್ಠಿಯಲ್ಲಿ ಸಿಲುಕಿರುವ ಪಕ್ಷವನ್ನು ಪಾರು ಮಾಡಿ, ಪಕ್ಷದ ಶುದ್ಧೀಕರಣಕ್ಕಾಗಿಯೇ ತಾವು ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ ಎಂದು ಈಶ್ವರಪ್ಪ ಈ ಮೊದಲು ಹೇಳಿದ್ದರು.

ಬಿಜೆಪಿ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಿದ ದಿನದಿಂದಲೇ ಬಂಡಾಯ ಸಾರಿರುವ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಶುದ್ಧೀಕರಣದ ಹೆಸರಿನಲ್ಲಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಘೋಷಣೆಯೊಂದಿಗೆ ಪ್ರಚಾರ ನಡೆಸುತ್ತಿರುವ ಈಶ್ವರಪ್ಪ, ಸಂಘಪರಿವಾರ ಮತ್ತು ಹಿಂದುತ್ವದ ಮತಗಳನ್ನು ಗುರಿಯಾಗಿಸಿಕೊಂಡು ತಮ್ಮ ಚುನಾವಣಾ ತಂತ್ರ ಹೆಣೆಯುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದ ಹಲವು ಸಂಘಪರಿವಾರದ ನಾಯಕರು ಮತ್ತು ಬಿಜೆಪಿ ಮುಖಂಡರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಹಾಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಕಾಣಿಸುತ್ತಿದೆ.

Tags:    

Similar News