ವಿವೇಕನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: 5.6 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶ
ಆಗಸ್ಟ್ 25ರಂದು, ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ವನ್ನಾರಪೇಟೆ ರಸ್ತೆಯ ಎಎಸ್‌ಸಿ ಸೆಂಟರ್ ಕಾಂಪೌಂಡ್ ಬಳಿಯ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.;
ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ವಿವೇಕನಗರ ಠಾಣಾ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 5.6 ಲಕ್ಷ ರೂಪಾಯಿ ಮೌಲ್ಯದ 13 ಕಿಲೋಗ್ರಾಂಗಿಂತಲೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 25ರಂದು, ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ವನ್ನಾರಪೇಟೆ ರಸ್ತೆಯ ಎಎಸ್‌ಸಿ ಸೆಂಟರ್ ಕಾಂಪೌಂಡ್ ಬಳಿಯ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಒಡಿಶಾ ರಾಜ್ಯದ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ. ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯಿಂದ 11 ಕೆ.ಜಿ 150 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಗಾಂಜಾ ಮಾರಿದ್ದ ಆರೋಪಿಯ ಬಂಧನ
ಮತ್ತೊಂದು ಪ್ರಕರಣದಲ್ಲಿ, ಆಗಸ್ಟ್ 26ರಂದು, ನೀಲಸಂದ್ರದ ಪಾರ್ಕ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಿಹಾರ ಮೂಲದವನಾಗಿದ್ದು, ತನ್ನ ಸಹಚರನೊಂದಿಗೆ ಸೇರಿ ಬಿಹಾರದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ರೈಲಿನ ಮೂಲಕ ಬೆಂಗಳೂರಿಗೆ ಸಾಗಿಸಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ 2 ಕೆ.ಜಿ 270 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 60,000 ರೂಪಾಯಿ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.