ಪತ್ನಿ ಜತೆ ಮುನಿಸು; ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ
ಪ್ರಶಾಂತ್ ತಂದೆ ಆತನ ಪ್ಲಾಟ್‌ಗೆ ಬಂದು ಪರಿಶೀಲಿಸಿದಾಗ ಪ್ರಶಾಂತ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.;
ಪ್ರಶಾಂತ್ ನಾಯರ್
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿ ಜತೆಗಿನ ವಿರಸದಿಂದಾಗಿ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಶಾಂತ್ ನಾಯರ್ (40) ಆತ್ಮಹತ್ಯೆಗೆ ಶರಣಾದವರು. ಪ್ರಶಾಂತ್ ಖಾಸಗಿ ಟೆಕ್ ಸಂಸ್ಥೆಯೊಂದರ ಹಿರಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಶಾಂತ್ ನಾಯರ್ ತಂದೆ ಭಾನುವಾರ ಮಗನಿಗೆ ಪದೇ ಪದೇ ಕರೆ ಮಾಡಿದ್ದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗಾಬರಿಗೊಂಡು ಪ್ಲಾಟ್‌ಗೆ ಬಂದು ಪರಿಶೀಲಿಸಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವ ಕಂಡು ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಗ ಮತ್ತು ಸೊಸೆ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಅವರ ನಡುವೆ ಜಗಳವಿತ್ತು ಅವರು ಆರೋಪಿಸಿದ್ದಾರೆ.
ಪ್ರಶಾಂತ್ ನಾಯರ್ 12 ವರ್ಷಗಳ ಹಿಂದೆ ಪೂಜಾ ಎಂಬುವರನ್ನು ಮದುವೆಯಾಗಿದ್ದರು. ಅವರಿಗೆ ಎಂಟು ವರ್ಷದ ಮಗಳಿದ್ದಾಳೆ. ಇಬ್ಬರೂ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳು. ನಾಯರ್ ತಂದೆ ನೀಡಿದ ದೂರಿನ ಆಧಾರದ ಮೇಲೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಶಾಂತ್ ನಾಯರ್ ಪತ್ನಿಯ ವಿರುದ್ಧ ಕಿರುಕುಳ ಅಥವಾ ದೌರ್ಜನ್ಯದ ಯಾವುದೇ ಆರೋಪಗಳಿಲ್ಲ. ದಂಪತಿ ಸ್ವಲ್ಪ ಸಮಯದಿಂದ ಬೇರ್ಪಟ್ಟಿದ್ದರು. ಚಿತ್ರಹಿಂಸೆ ಅಥವಾ ದೌರ್ಜನ್ಯದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸೈದುಲು ಅಡವತ್ ಸ್ಪಷ್ಟನೆ ನೀಡಿದ್ದಾರೆ.