ಮಂಡ್ಯ ಸಾಹಿತ್ಯ ಸಮ್ಮೇಳನ | ನುಡಿಜಾತ್ರೆಗೆ ನಾಳೆ ಚಾಲನೆ: ಸಕ್ಕರೆ ನಗರಿ ಮಂಡ್ಯ ಸಜ್ಜು

ಗುರುವಾರ ಸಂಜೆಯೇ ಸಮ್ಮೇಳನಾಧ್ಯಕ್ಷರು ಪುರಪ್ರವೇಶ ಮಾಡಿದ್ದಾರೆ. ಡಿ.20ರಂದು ಬೆಳಿಗ್ಗೆ ಏಳು ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ವಿವಿಧ ಜಾನಪದ ಕಲಾತಂಡಗಳು, 300ಮಹಿಳೆಯಿಂದ ಪೂರ್ಣಕುಂಭಗಳ ಮೆರವಣಿಗೆ ಮೂಲಕ ಅಧ್ಯಕ್ಷರನ್ನು ವೇದಕೆಗೆ ಕರೆತರಲಾಗುವುದು.

Update: 2024-12-19 13:58 GMT
ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ದ್ವಾರ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಗರಿ ಮಂಡ್ಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಮೂರನೇ ಬಾರಿಗೆ ಆತಿಥ್ಯ ವಹಿಸಿಕೊಂಡಿರುವ ಮಂಡ್ಯದಲ್ಲಿ ನಾಳೆ (ಡಿ.20) ಯಿಂದಲೇ ನುಡಿಜಾತ್ರೆ ಗರಿಗೆದರಲಿದೆ. ಜಾನಪದ ವಿದ್ವಾಂಸ ಹಾಗೂ ಸಾಹಿತಿ ಗೋ.ರು ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಹಬ್ಬವು ಶುಕ್ರವಾರ ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ವಿದ್ಯುಕ್ತ ಚಾಲನೆ ಪಡೆಯಲಿದೆ.

ಗುರುವಾರ ಸಂಜೆಯೇ ಸಮ್ಮೇಳನಾಧ್ಯಕ್ಷರು ಪುರಪ್ರವೇಶ ಮಾಡಿದ್ದಾರೆ. ಡಿ.20ರಂದು ಬೆಳಿಗ್ಗೆ ಏಳು ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಸುಗ್ಗಿಕುಣಿತ, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, 300ಮಹಿಳೆಯಿಂದ ಪೂರ್ಣಕುಂಭಗಳ ಮೆರವಣಿಗೆ ಮೂಲಕ ಅಧ್ಯಕ್ಷರನ್ನು ವೇದಕೆಗೆ ಕರೆತರಲಾಗುವುದು. 

ಮೈಸೂರು ರಾಜ ಮನೆತನದ ಪ್ರಮೋದಾದೇವಿ ಒಡೆಯ‌ರ್ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ಸಲುವಾಗಿ ಜಿಲ್ಲೆಯಾದ್ಯಂತ ಪ್ರತಿ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವಂತೆ ಮನವಿ ಮಾಡಲಾಗಿದೆ.  

ಸಾಹಿತ್ಯ ಸಮ್ಮೇಳನದ ಸ್ವಾಗತ ಕಮಾನು

20 ವೇದಿಕೆಗಳಲ್ಲಿ ಕಾರ್ಯಕ್ರಮ

ಮಂಡ್ಯ ಹೊರವಲಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕಾಗಿ ಒಟ್ಟು 20 ವೇದಿಕೆಗಳನ್ನು ನಿರ್ಮಿಸಲಾಗಿದೆ. 70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ ನಿರ್ಮಿಸಲಾಗಿದೆ. ಗೋಷ್ಠಿಗಳಿಗೆ ಪ್ರತ್ಯೇಕ ವೇದಿಕೆಗಳಿವೆ. 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಸ್ವಚ್ಛತೆ ಕಾಪಾಡಲು 250 ಸಿಬ್ಬಂದಿ ನೇಮಿಸಲಾಗಿದೆ. ಸಾಹಿತ್ಯಾಸಕ್ತರಿಗಾಗಿ ಪುಸ್ತಕ ಮಳಿಗೆ, ಆಹಾರ ಮಳಿಗೆಗಳನ್ನೂ ತೆರೆಯಲಾಗಿದೆ. 150ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.   

350 ವಾಣಿಜ್ಯ, 450 ಪುಸ್ತಕ ಮಳಿಗೆ

ಸಮ್ಮೇಳನದಲ್ಲಿ ಸಾಹಿತ್ಯ ಪ್ರಿಯರ ಅಕ್ಷರ ದಣಿವು ನೀಗಿಸಲು 450 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲದೇ 350 ವಾಣಿಜ್ಯ ಮಳಿಗೆಗಳು ಇರಲಿವೆ. ಸಮ್ಮೇಳನಕ್ಕೆ ಬರುವವರಿಗೆ 140 ಕೌಂಟರ್​ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್‌ ತೆರೆಯಲಾಗಿದೆ. ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ. ಗಣ್ಯರು, ಅತಿ ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳಗಳಲ್ಲಿ ಊಟ ವಿತರಿಸಲಾಗುವುದು.ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಟೂತ್ ಬ್ರಷ್, ಪೇಸ್ಟ್, ಸೋಪು, ಬೆಡ್ ಶೀಟ್ ಒಳಗೊಂಡ ಲೆದರ್‌ ಬ್ಯಾಗ್ ಕಿಟ್‌ ನೀಡಲಾಗುವುದು ಎಂದು ಸಮ್ಮೇಳದನ ಸಮಿತಿ ತಿಳಿಸಿದೆ. 

ಸಮ್ಮೇಳನಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೆ ಭರ್ಜರಿ ಭೋಜನ ತಯಾರಿ 

ಜಿಲ್ಲೆಯಿಂದ ಉಚಿತ ಬಸ್ ವ್ಯವಸ್ಥೆ

ಮಂಡ್ಯ ಜಿಲ್ಲೆಯ ವಿವಿಧ ಭಾಗದಿಂದ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗಾಗಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 15 ಬಸ್​ಗಳನ್ನು ನಿಯೋಜಿಸಲಾಗಿದೆ. ಇತರೆ ಕಡೆಗಳಿಂದ ಬರುವ ಸಾರ್ವಜನಿಕರಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವವರಿಗಾಗಿ ಒಟ್ಟು 105 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ  ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗಾಗಿ ಮೈಸೂರು, ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗ ಬದಲಾವಣೆ

ಸಮ್ಮೇಳನಕ್ಕೆ ಬರುವವರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ 20ರ ಬೆಳಗ್ಗೆ 5 ಗಂಟೆಯಿಂದ ಡಿ.23ರ ಬೆಳಗ್ಗೆ 6 ಗಂಟೆಯವರೆಗೆ ಮಾರ್ಗ ಬದಲಾವಣೆಯಾಗಲಿದೆ. ಬೆಂಗಳೂರು, ರಾಮನಗರ, ತುಮಕೂರು, ಮದ್ದೂರು, ಮಳವಳ್ಳಿಯಿಂದ ಎಕ್ಸ್ ಪ್ರೆಸ್ ವೇನಲ್ಲಿ ಬರುವವರು ಹೊಸಬೂದನೂರು ಬಳಿ ನಿರ್ಗಮನ ಪಡೆದು, ಸರ್ವಿಸ್ ರಸ್ತೆ, ಬ್ಯಾಂಕರ್ಸ್ ಕಾಲೋನಿ ರಸ್ತೆ ಮೂಲಕ ಸಮ್ಮೇಳನ ಸ್ಥಳ ತಲುಪಬಹುದು.

ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರದಿಂದ ಎಕ್ಸ್ ಪ್ರೆಸ್ ವೇನಲ್ಲಿ ಬರುವವರು ಶಶಿಕಿರಣ ಕನ್ವೆನ್ ಷನ್ ಹಾಲ್ ಎದುರು ನಿರ್ಗಮನ ಪಡೆದು, ಸರ್ವಿಸ್ ರಸ್ತೆ, ಹೊಸಬೂದನೂರು ಅಂಡರ್ ಪಾಸ್ ಮೂಲಕ ಯೂ ಟರ್ನ್ ಪಡೆದು ಮತ್ತೆ ಸರ್ವಿಸ್ ರಸ್ತೆಯಲ್ಲೇ ಬ್ಯಾಂಕರ್ಸ್ ಕಾಲೋನಿ ಮೂಲಕ ಸಮ್ಮೇಳನ ಸ್ಥಳ ತಲುಪಬಹುದು.

ಸಾಹಿತ್ಯ ಸಮ್ಮೇಳನದ ಸಿದ್ದತಾ ಕಾರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಚೆಲುವರಾಯಸ್ವಾಮಿ ಪರಿಶೀಲನೆ ನಡೆಸಿದರು. 

ಕೆಆರ್​ಎಸ್ ಡ್ಯಾಂ ಮಾದರಿ ಪ್ರವೇಶದ್ವಾರ

ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಕೆ.ಆರ್.ಎಸ್ ಅಣೆಕಟ್ಟು ಮಾದರಿಯ ಆಕರ್ಷಕ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯ ಈ ಪ್ರವೇಶ ದ್ವಾರದ ವಿನ್ಯಾಸವು 40 ಅಡಿ ಎತ್ತರ ಮತ್ತು ಬರೋಬ್ಬರಿ 300 ಅಡಿ ಅಗಲ ಇದೆ.

ಶಾಲೆ - ಕಾಲೇಜುಗಳಿಗೆ ರಜೆ ಘೋಷಣೆ

ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ವಿದ್ಯಾರ್ಥಿಗಳಿಗೂ ಕನ್ನಡ ಹಿರಿಮೆ, ವೈಭವ ತಿಳಿಯಲು ಇದೊಂದು ಉತ್ತಮ ವೇದಿಕೆಯಾಗಿರುವ ಕಾರಣ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಸಾರ್ವಜನಿಕ ರಜೆ ನೀಡಿ ಆದೇಶಿಸಿದ್ದಾರೆ.

ಬಾಡೂಟಕ್ಕೆ ಕೋಳಿ ಸಂಗ್ರಹಣೆ ಆರಂಭ 

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕುಪಿತಗೊಂಡಿರುವ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮನೆ ಮನೆಗೆ ತೆರಳಿ ಕೋಳಿ ಸಂಗ್ರಹ ಮಾಡುವ ಮೂಲಕ ಪ್ರತ್ಯೇಕವಾಗಿ ಬಾಡೂಟ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಜಾರಿಯಾಗಿರುವ ಅಘೋಷಿತ ಮಾಂಸಾಹಾರ ನಿಷೇಧ ವಿರೋಧಿಸಿ ಅತಿಥಿಗಳಿಗೆ ಬಾಡೂಟ ಬಡಿಸಲೆಂದೇ ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಮಾಂಸಾಹಾರದ ಬೇಡಿಕೆಯನ್ನೇ ತಪ್ಪು ಎಂದು ಬಿಂಬಿಸಲಾಗುತ್ತಿದೆ. ಆಹಾರ ಆಯ್ಕೆಯಲ್ಲಿ ಮಾಂಸಾಹಾರಕ್ಕೂ ಅವಕಾಶವಿದೆ. ಈ ನೆಲದ ಆಹಾರ ಪದ್ಧತಿ ಬಾಡು. ಹಾಗಾಗಿ ಕೋಳಿ ಹಾಗೂ ಕುರಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಸಾಹಿತ್ಯ ಸಮ್ಮೇಳನದ ಬಾಡೂಟಕ್ಕೆ ಮಂಡ್ಯದ ಹಳ್ಳಿಗಳಲ್ಲಿ ಕೋಳಿ ಸಂಗ್ರಹಣೆ ಶುರುವಾಗಿದೆ.

ಸಾಹಿತ್ಯದ ಜೊತೆಗೆ ಸಂಗೀತದ ರಸದೌತಣ 

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ರಸದೌತಣ ಉಣಬಡಿಸಲು ಸಮ್ಮೇಳನ ಸಮಿತಿ ನಿರ್ಧರಿಸಿದೆ. ಡಿ.20ರಂದು ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತು ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತಂಡವು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದೆ. ಕನ್ನಡದ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. ಡಿ.21ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಕಾರ್ಯಕ್ರಮ ನಡೆಯಲಿದೆ.

ಎರಡೂ ದಿನ ಸಂಗೀತ ಕಾರ್ಯಕ್ರಮದಲ್ಲಿ 'ಸರಿಗಮಪ' ಖ್ಯಾತಿಯ ಇಂದು ನಾಗರಾಜ್, ಸಾಕ್ಷಿ ಕಲ್ಲೂರ್, ಉಷಾ ಕೋಕಿಲ, ನದೀರಾ ಬಾನು, ಅನನ್ಯಾ ಪ್ರಕಾಶ್, ಕಂಬದ ರಂಗಯ್ಯ, ದಿವ್ಯಾ ರಾಮಚಂದ್ರ, ಸಂತೋಷ್ ಕನ್ನಡದ ಗೀತೆಗಳನ್ನು ಹಾಡಲಿದ್ದಾರೆ. ಅಂಬೇಡ್ಕ‌ರ್ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರ, ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 11ಕ್ಕೆ ಸಮ್ಮೇಳನ ಉದ್ಘಾಟನೆ

ಡಿ.20 ರಂದು ಬೆಳಿಗ್ಗೆ 6 ಗಂಟೆಗೆ ಕನ್ನಡದ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಸಚಿವರು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಖ್ಯಾತ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಬಾರಿ ಸಮ್ಮೇಳನದಲ್ಲಿ ಅಮೆರಿಕದ ಅಕ್ಕ ಸಮ್ಮೇಳನ ಆಯೋಜಕ ಅಮರನಾಥ್ ಕೂಡ ಭಾಗಿಯಾಗಲಿದ್ದಾರೆ. ಉದ್ಘಾಟನೆ ವೇಳೆ ಮಂಡ್ಯ ಜಿಲ್ಲೆಯ ಸುಮಾರು 87 ಕಲಾವಿದರು ನಾಡಗೀತೆ, ರೈತಗೀತೆ ಹಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 45 ಮಂದಿಗೆ ಮೊದಲ ದಿನ, 46 ಸಾಧಕರಿಗೆ ಎರಡನೇ ದಿನ ಹಾಗೂ ಕೊನೆಯ ದಿನ 47 ಗಣ್ಯರನ್ನು ಸನ್ಮಾನಿಸಲಾಗುವುದು. 

ಸಾಹಿತ್ಯಗೋಷ್ಠಿಯ ಮಹತ್ವವೇನು? 

ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಪ್ರಥಮ ಬಾರಿಗೆ ʻಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯʼ ಕುರಿತು ಚರ್ಚೆ ನಡೆಯಲಿದೆ. ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು, ಸೃಜನಶೀಲತೆ-ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು, ಕರ್ನಾಟಕ-ಪ್ರಕೃತಿ ವಿಕೋಪದ ಆತಂಕಗಳು, ಶತಮಾನೋತ್ಸವ ವರ್ಷದ ಕನ್ನಡ ಲೇಖಕರು, ದಲಿತ ಸಾಹಿತ್ಯದ ನೆಲೆಗಳು, ಪುನಶ್ವೇತನವಾಗಬೇಕಿರುವ ಸಾಹಿತ್ಯ ಪ್ರಕಾರಗಳು, ಕನ್ನಡ ಭಾಷಾ ಸಾಮಗ್ರ ಅಭಿವೃದ್ಧಿ ಅಧಿನಿಯಮ-2022: ಪರಿಣಾಮಕಾರಿ ಅನುಷ್ಠಾನ, ರಂಗಭೂಮಿ, ಚಲನಚಿತ್ರ ಕಿರುತೆರೆ ಕ್ಷೇತ್ರದ ಸವಾಲುಗಳು, ಕೃಷಿ ಮತ್ತು ಕೃಷಿಕರ ಸಂಕಷ್ಟ ಸವಾಲುಗಳು ಮತ್ತು ಪರಿಹಾರಗಳು, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ, ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ. ಒಟ್ಟ 26 ಗೋಷ್ಠಿಗಳು ನಡೆಯಲಿವೆ.

ನಾಲ್ಕು ಕವಿಗೋಷ್ಠಿಗಳಲ್ಲಿ ಕವನಗಳ ವಾಚನ ನಡೆಯಲಿದೆ. ನುಡಿಜಾತ್ರೆಯಲ್ಲಿ ಒಟ್ಟು 87 ಪುಸ್ತಕಗಳು ಬಿಡುಗಡೆಯಾಗಲಿವೆ. ಸಮ್ಮೇಳನದ ಸ್ಮರಣ ಸಂಚಿಕೆ 'ಬೆಲ್ಲದಾರತಿ' ಕೃತಿಯನ್ನೂ ಬಿಡುಗಡೆ ಮಾಡಲಾಗುವುದು.

Tags:    

Similar News