The Federal Special Series -1 | ದಂತಚೋರನ ಸೆರೆಯಲ್ಲಿದ್ದ 'ಬಂಗಾರದ ಮನುಷ್ಯ': ರಾಜ್‌ಕುಮಾರ್ ಅಪಹರಣಕ್ಕೆ 25 ವರ್ಷ
ತಮಿಳುನಾಡು ಗಡಿಯ ಗಾಜನೂರಿನ ತಮ್ಮ ತೋಟದ ಮನೆಯಲ್ಲಿ ಕುಟುಂಬದೊಂದಿಗೆ ವಿಶ್ರಾಂತಿಯಲ್ಲಿದ್ದ ಡಾ. ರಾಜ್‌ಕುಮಾರ್ ಅವರ ಬದುಕಿನಲ್ಲಿ, ವೀರಪ್ಪನ್ ಬಂದೂಕಿನ ರೂಪದಲ್ಲಿ ಬಂದೆರಗಿದ್ದ.;
ಇಂದಿಗೆ ಸರಿಯಾಗಿ ಕಾಲು ಶತಮಾನದ ಹಿಂದೆ ಅಂದರೆ 2000ರ ಜುಲೈ 30ರ ಆ ಕರಾಳ ರಾತ್ರಿ ಇಡೀ ಕರುನಾಡನ್ನು ಸ್ತಬ್ಧಗೊಳಿಸಿತ್ತು. ಕನ್ನಡಿಗರ ಮನೆಮಗ, ವರನಟ ಡಾ. ರಾಜ್‌ಕುಮಾರ್ ಅವರನ್ನು ಕುಖ್ಯಾತ ದಂತಚೋರ ವೀರಪ್ಪನ್ ಅಪಹರಿಸಿದ ಸುದ್ದಿ, ರಾಜ್ಯದ ಮೂಲೆ ಮೂಲೆಗೆ ಕಾಳ್ಗಿಚ್ಚಿನಂತೆ ಹಬ್ಬಿ, ಅಭೂತಪೂರ್ವ ಆತಂಕ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿತ್ತು. ಆ ಘಟನೆ ನಡೆದು 25 ವರ್ಷಗಳು ಕಳೆದರೂ, ಆ 108 ದಿನಗಳ ನೋವಿನ ಅಧ್ಯಾಯ ಕನ್ನಡಿಗರ ಮನದಲ್ಲಿ ಇನ್ನೂ ಹಸಿರಾಗಿದೆ.
ತಮಿಳುನಾಡು ಗಡಿಯ ಗಾಜನೂರಿನ ತಮ್ಮ ತೋಟದ ಮನೆಯಲ್ಲಿ ಕುಟುಂಬದೊಂದಿಗೆ ವಿಶ್ರಾಂತಿಯಲ್ಲಿದ್ದ ಡಾ. ರಾಜ್‌ಕುಮಾರ್ ಅವರ ಬದುಕಿನಲ್ಲಿ, ವೀರಪ್ಪನ್ ಬಂದೂಕಿನ ರೂಪದಲ್ಲಿ ಬಂದೆರಗಿದ್ದ. ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿದ ಆತ, ಅಣ್ಣಾವ್ರು ಸೇರಿದಂತೆ ನಾಲ್ವರನ್ನು ಒತ್ತೆಯಾಳಾಗಿ ದಟ್ಟ ಕಾಡಿನತ್ತ ಕರೆದೊಯ್ದಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯವೇ ಆಘಾತಕ್ಕೆ ಒಳಗಾಯಿತು. ಅಭಿಮಾನಿಗಳ ಆಕ್ರಂದನ, ಆಕ್ರೋಶ ಮುಗಿಲುಮುಟ್ಟಿತು. ಆಡಳಿತ ಯಂತ್ರವೇ ಸ್ಥಗಿತಗೊಂಡು, ಕರ್ನಾಟಕ ಹಿಂದೆಂದೂ ಕಾಣದಂತಹ ಬಿಕ್ಕಟ್ಟನ್ನು ಎದುರಿಸಿತು. ಅಣ್ಣಾವ್ರ ಬಿಡುಗಡೆಗಾಗಿ ನೂರಾರು ಪ್ರತಿಭಟನೆಗಳು, ಚಳುವಳಿಗಳು ನಡೆದವು.
108 ದಿನಗಳ ಅಗ್ನಿಪರೀಕ್ಷೆ ಮತ್ತು ಸಂಧಾನ ಪ್ರಯತ್ನಗಳು
ಮುಂದಿನ 108 ದಿನಗಳು ಕೇವಲ ರಾಜ್ ಕುಟುಂಬಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಅಗ್ನಿಪರೀಕ್ಷೆಯಾಗಿತ್ತು. ಕಾಡಿನಿಂದ ವೀರಪ್ಪನ್ ಕಳುಹಿಸುತ್ತಿದ್ದ ಆಡಿಯೋ, ವಿಡಿಯೋ ಕ್ಯಾಸೆಟ್‌ಗಳು ಸರ್ಕಾರಗಳ ಎದೆಬಡಿತವನ್ನು ಹೆಚ್ಚಿಸುತ್ತಿದ್ದವು. ಟಾಡಾ ಕೈದಿಗಳ ಬಿಡುಗಡೆಯಂತಹ ಕಠಿಣ ಬೇಡಿಕೆಗಳನ್ನು ಮುಂದಿಟ್ಟು, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ. ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಅಣ್ಣಾವ್ರ ಸುರಕ್ಷಿತ ಮರಳುವಿಕೆಗೆ ನಿರಂತರ ಪ್ರಾರ್ಥನೆಗಳು ನಡೆದವು. ಪತ್ರಕರ್ತ 'ನಕ್ಕೀರನ್' ಗೋಪಾಲ್ ನೇತೃತ್ವದಲ್ಲಿ ಸಂಧಾನ ಮಾತುಕತೆಗಳು ನಡೆದರೂ, ಸುಪ್ರೀಂ ಕೋರ್ಟ್‌ನ ಕಾನೂನು ತೊಡಕುಗಳಿಂದ ಬಿಕ್ಕಟ್ಟು ಮತ್ತಷ್ಟು ಜಟಿಲವಾಯಿತು. ಈ ಅವಧಿಯಲ್ಲಿ ರಾಜ್ಯದಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಿಡುಗಡೆಯ ಸಂಭ್ರಮ ಮತ್ತು ಅಣ್ಣಾವ್ರ ದೊಡ್ಡತನದ ಸಂದೇಶ
ಅಸಂಖ್ಯಾತ ಪ್ರಾರ್ಥನೆ ಮತ್ತು ನೂರಾರು ಸುತ್ತಿನ ಮಾತುಕತೆಗಳ ಫಲವಾಗಿ, ನವೆಂಬರ್ 15, 2000ರಂದು ಡಾ. ರಾಜ್‌ಕುಮಾರ್ ಅವರು ಸುರಕ್ಷಿತವಾಗಿ ಬಿಡುಗಡೆಯಾದರು. ಆ ಸುದ್ದಿ ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ದೀಪಾವಳಿಯ ಸಂಭ್ರಮ ಮನೆಮಾಡಿತ್ತು. ಅಭಿಮಾನಿಗಳು, ಸಾರ್ವಜನಿಕರು ಬೀದಿಗಿಳಿದು ಸಂಭ್ರಮಿಸಿದರು. ಕಾಡಿನಿಂದ ಮರಳಿದ ಬಳಿಕ ನಡೆಸಿದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ, ಅಣ್ಣಾವ್ರು ತಮ್ಮನ್ನು ಅಪಹರಿಸಿದ್ದ ವೀರಪ್ಪನ್ ಬಗ್ಗೆಯೂ ದ್ವೇಷ ಕಾರದೆ, "ಅವನೂ ಮನುಷ್ಯನೇ" ಎಂದು ಉದ್ಗರಿಸುವ ಮೂಲಕ ತಮ್ಮ ದೊಡ್ಡತನ ಮತ್ತು ಮಾನವೀಯತೆಯನ್ನು ಮೆರೆದಿದ್ದರು. ಈ ಹೇಳಿಕೆಯು ಇಂದಿಗೂ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಈ ಘಟನೆ ನಡೆದು 25 ವರ್ಷಗಳಾಗಿವೆ. ಡಾ. ರಾಜ್‌ಕುಮಾರ್ ಮತ್ತು ವೀರಪ್ಪನ್ ಇಬ್ಬರೂ ಇಂದು ಇತಿಹಾಸದ ಪುಟ ಸೇರಿದ್ದಾರೆ. ಆದರೆ, ಒಬ್ಬ ವ್ಯಕ್ತಿಗಾಗಿ ಇಡೀ ರಾಜ್ಯವೇ ಒಂದಾಗಿ ಮಿಡಿದು, ಪ್ರಾರ್ಥಿಸಿದ ಆ 108 ದಿನಗಳ ಕಥೆ, ಕರ್ನಾಟಕದ ಚರಿತ್ರೆಯಲ್ಲಿ ಅಳಿಸಲಾಗದ ನೆನಪಾಗಿ, ಕನ್ನಡಿಗರ ಸಾಮೂಹಿಕ ಸ್ಮೃತಿಯಲ್ಲಿ ಶಾಶ್ವತವಾಗಿ ಉಳಿದಿದೆ.
ಡಾ. ರಾಜ್ ಅಪಹರಣ ಹೇಗಾಯಿತು? ಸರ್ಕಾರ ಯಾವ ಪ್ರಯತ್ನ ನಡೆಸಿತು? ವೀರಪ್ಪನ್‌ನಿಂದ ರಾಜ್‌ಕುಮಾರ್ ಬಿಡುಗಡೆಗೆ ಯಾವೆಲ್ಲಾ ಪ್ರಯತ್ನಗಳು ನಡೆಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ದ ಫೆಡರಲ್ ಕರ್ನಾಟಕ ಪ್ರಯತ್ನಿಸಿದೆ.
ಡಾ. ರಾಜ್ ಅಪಹರಣ 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಒಟ್ಟು ಪ್ರಕರಣದ ಆಳ-ಅಗಲದ ಬಗ್ಗೆ ಸರಣಿ ವಿಡಿಯೋಗಳನ್ನು ಸಾದರ ಪಡಿಸುತ್ತಿದೆ. ಮೊದಲ ಭಾಗ ಇಲ್ಲಿದೆ: