ಆನ್‌ಲೈನ್ ಬೆಟ್ಟಿಂಗ್ಗೆ ವ್ಯಕ್ತಿ ಬಲಿ: ಬ್ಯಾನ್ ಮಾಡುವಂತೆ ಡೆತ್ ನೋಟ್ನಲ್ಲಿ ಮನವಿ
ಆನ್‌ಲೈನ್ ಗೇಮ್ಗಳಿಗೆ ದುಡಿದ ಹಣ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಇದೀಗ ನಗರದಲ್ಲಿ ಆನ್ಲೈನ್ಗೆ ಗೇಮ್ ಆಡಿ ನಷ್ಟ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಆನ್‌ಲೈನ್ ಬೆಟ್ಟಿಂಗ್, ಆನ್‌ಲೈನ್ ಗೇಮ್ ನಿಷೇಧ ಮಾಡಿದ್ದರೂ ಈ ಚಟಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ದುಡಿದ ಹಣವನ್ನು ಬೆಟ್ಟಿಂಗ್ನಲ್ಲಿ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಇದೀಗ ನಗರದಲ್ಲಿ ಆನ್‌ಲೈನ್ ಗೇಮ್ಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಅಧಿವೇಶನದಲ್ಲಿ ಶಾಸಕರು ಚರ್ಚಿಸಿ ಇಂಥ ವೇದಿಕೆಗಳನ್ನು ಬ್ಯಾನ್ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು, ಹಣ ಕಳೆದುಕೊಂಡ ಗದಗ ಜಿಲ್ಲೆಯ ಜಗದೀಶ್ ಹಳೇಮನಿ ಎಂಬವರು ನಗರದ ಹೊಟೇಲ್ನಲ್ಲಿ ಪ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 30ರ ರಾತ್ರಿ ಅವರು ಹೋಟೆಲ್ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೆಳಗ್ಗೆಯಿಂದ ಕುಟುಂಬ ಸದಸ್ಯರು ಫೋನ್ ಮಾಡಿದರೂ ಪ್ರತಿಕ್ರಿಯೆ ಬರದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಮೂಲಕ ಜಗದೀಶ್ ವಿಶ್ವ ಹೊಟೇಲ್ನಲ್ಲಿ ರೂಮ್ ಮಾಡಿಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಹೊಟೇಲ್ಗೆ ಹೋಗಿ ನೋಡಿದ್ದಾಗ ಜಗದೀಶ್ ಪ್ಯಾನ್ಗೆ ನೇಣು ಹಾಕಿಕೊಂಡಿದ್ದರು. ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಸಹ ಬರೆದು ಇಟ್ಟಿದ್ದರು. ಆನ್ ಲೈನ್ ಗೇಮ್ನಿಂದ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಸರ್ಕಾರ ಆನ್ ಲೈನ್ ಗೇಮ್ ಬ್ಯಾನ್ ಮಾಡಬೇಕು. ಅಧಿವೇಶನದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಗೇಮ್ಗಳ ಬ್ಯಾನ್ ಬಗ್ಗೆ ಚರ್ಚೆ ನಡೆಸಬೇಕು ಎಂದು ಬರೆದಿದ್ದಾರೆ.
ಜಗದೀಶ್ ಅವರಿಗೆ ಮದುವೆಯಾಗಿ ಏಳು ವರ್ಷ ಕಳೆದಿದೆ. ಇಬ್ಬರು ಮಕ್ಕಳು ಇದ್ದಾರೆ. ಗೇಮಿಂಗ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರು.
ರಾಜ್ಯದಲ್ಲಿ ಆನ್‌ಲೈನ್ ಗೇಮ್, ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್(ತಿದ್ದುಪಡಿ) ಕಾಯ್ದೆ, 2021ಕ್ಕೆ ಅಕ್ಟೋಬರ್ 5 ರಂದು ಅಧಿಸೂಚನೆ ಹೊರಡಿಸಿದೆ. ಕುದುರೆ ಓಟ ಮತ್ತು ಲಾಟರಿ ಹೊರತುಪಡಿಸಿ ಇತರೆ ಯಾವುದೇ ಆಟಕ್ಕೆ ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ನಿಷೇಧಿಸಲಾಗಿದೆ. ಆದರೂ ಡಿಜಿಟಲ್ ಯುಗದಲ್ಲಿ ಯುವಕರು ದಾರಿ ತಪ್ಪಿ ಆನ್ ಲೈನ್ ಗೇಮ್ ಭೂತಕ್ಕೆ ದಾಸರಾಗಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.