ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾದ ವ್ಯಕ್ತಿ: 11 ಲಕ್ಷ ಕಳೆದುಕೊಂಡು ಆತ್ಮಹತ್ಯೆ
ಕುಮಾರ್, ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದರು.;
ಕೆ. ಕುಮಾರ್
ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಚನ್ನಪಟ್ಟಣದಲ್ಲಿ ಮತ್ತೊಂದು ದುರದೃಷ್ಟಕರ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದ ಕೆ. ಕುಮಾರ್ (48) ಎಂಬ ವ್ಯಕ್ತಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿ 11 ಲಕ್ಷ ರೂಪಾಯಿ ಕಳೆದುಕೊಂಡ ನಂತರ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕುಮಾರ್, ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದರು. ಡೆತ್ ನೋಟ್‌ನಲ್ಲಿ ಕುಮಾರ್, ವಿಕ್ರಮ್ ಗೋಸ್ವಾಮಿ ಎಂಬ ಹೆಸರಿನ ವ್ಯಕ್ತಿಯೊಬ್ಬ ಸಿಬಿಐ ಅಧಿಕಾರಿ ಎಂದು ಕರೆ ಮಾಡಿ, ತಮ್ಮ ವಿರುದ್ಧ ಬಂಧನ ವಾರಂಟ್ ಇದೆ ಎಂದು ಹೆದರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಒಂದು ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿ, ನಂತರ ಸಹಾಯ ಮಾಡುವ ನೆಪದಲ್ಲಿ ಕುಮಾರ್‌ನಿಂದ 1.95 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು ಸುಮಾರು 11 ಲಕ್ಷ ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸುವಂತೆ ವಂಚಕರು ಕುಮಾರ್‌ಗೆ ಒತ್ತಡ ಹೇರಿದ್ದಾರೆ. ಇಷ್ಟಾದರೂ ಸುಮ್ಮನಾಗದೆ, ಮತ್ತೆ 2.75 ಲಕ್ಷ ರೂಪಾಯಿ ನೀಡುವಂತೆ ಪೀಡಿಸುತ್ತಿದ್ದರಿಂದ ಬೇಸತ್ತು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಜಾಗೃತರಾಗಿರಬೇಕು. ವಂಚಕರು ಸಾಮಾನ್ಯವಾಗಿ, "ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ" ಎಂದು ಆರೋಪಿಸಿ ಕರೆ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳಂತೆ ನಟಿಸಿ, ವಿಡಿಯೋ ಕಾಲ್‌ನಲ್ಲಿಯೇ ಇರುವಂತೆ ಒತ್ತಾಯಿಸಿ, ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ. ಇಂತಹ ಕರೆಗಳನ್ನು ಸ್ವೀಕರಿಸದಿರುವುದು, ಹಣ ವರ್ಗಾವಣೆ ವೇಳೆ ಎಚ್ಚರ ವಹಿಸುವುದು, ವೈಯಕ್ತಿಕ ಅಥವಾ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಮತ್ತು ಯಾವುದೇ ಬೆದರಿಕೆ ಕರೆಗಳು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವುದು ಮುಖ್ಯ ಎಂದು ಪೊಲೀಸರು ತಿಳಿಸಿದ್ದಾರೆ.