ಕಬ್ಬಿಗೆ ಬೆಂಬಲ ಬೆಲೆ|ಇಂದು ಪ್ರಧಾನಿ ಭೇಟಿ ಮಾಡಲಿರುವ ಸಿಎಂ ಸಿದ್ದರಾಮಯ್ಯ; ಹಲವು ವಿಚಾರಗಳ ಕುರಿತು ಚರ್ಚೆ
ಕಬ್ಬಿಗೆ ಎಫ್ಆರ್ ಪಿ ದರ ನೀಡುವಂತೆ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು
ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ವಿಚಾರಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಕಬ್ಬಿಗೆ ಎಫ್ಆರ್ ಪಿ ದರ ನೀಡುವಂತೆ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ನಿಗದಿಯಾಗಿದೆ.
ಸಕ್ಕರೆಯ ಎಂಎಸ್‌ಪಿ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಧಾನಿ ಮುಂದಿಡಲಿದ್ದಾರೆ. ಕೇಂದ್ರ ಸರ್ಕಾರವು 10.25 ರಷ್ಟು ರಿಕವರಿ ದರ ಹೊಂದಿರುವ ಕಬ್ಬಿಗೆ ಕಟಾವು, ಸಾಗಣೆ ವೆಚ್ಚ ಸೇರಿಸಿ ಪ್ರತಿ ಟನ್‌ಗೆ 3,550 ರೂ. ನಿಗದಿ ಮಾಡಿದೆ. ಸಾಗಣೆ ಮತ್ತು ಕಟಾವು ವೆಚ್ಚ ಪ್ರತಿ ಟನ್‌ಗೆ 800 ರಿಂದ 900 ರೂ. ಸೇರಿದಂತೆ ರೈತರಿಗೆ ಪ್ರತಿ ಟನ್‌ಗೆ 2,600 ರಿಂದ 3,000 ರು. ಮಾತ್ರ ಸಿಗಲಿದೆ. ಹೀಗಾಗಿ ಕಟಾವು, ಸಾಗಣೆ ವೆಚ್ಚ ಹೊರತುಪಡಿಸಿ ಪ್ರತಿ ಟನ್‌ಗೆ ಎಫ್‌ಆರ್‌ಪಿ 3,500 ರೂ. ನಿಗದಿ ಮಾಡುವಂತೆ ಒತ್ತಾಯಿಸಲಿದ್ದಾರೆ.
ಇದೇ ವೇಳೆ ಜಿಎಸ್‌ಟಿಯಿಂದ ರಾಜ್ಯಕ್ಕೆ ಆಗುವ ಅನ್ಯಾಯ, ಕೇಂದ್ರದಿಂದ ಬಾಕಿ ಇರುವ ಅನುದಾನಗಳು, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ನೀರಾವರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
ಕಬ್ಬಿಗೆ ಎಫ್ಆರ್ ಪಿ ದರ ನಿಗದಿ, ಎಥೆನಾಲ್ ಹಂಚಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಪತ್ರ ಸಮರ ನಡೆದಿತ್ತು.