
ಸಾಂದರ್ಭಿಕ ಚಿತ್ರ
Cyber Crime| ಆನ್‌ಲೈನ್ ವಂಚನೆಯಿಂದ 46.5 ಲಕ್ಷ ರೂ ಕಳೆದುಕೊಂಡ ಮಂಗಳೂರು ನಿವಾಸಿ!
ವ್ಯಕ್ತಿಯೋರ್ವರಿಂದ 44 ಲಕ್ಷ ರೂ. ಹಣ ಕಟ್ಟಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೋರ್ವರಿಂದ 44 ಲಕ್ಷ ರೂ. ಹಣ ಕಟ್ಟಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2024ರ ಡಿಸೆಂಬರ್ ತಿಂಗಳಿನಲ್ಲಿ ಇನ್‌ಸ್ಟಾಗ್ರಾಂ ನೋಡುವಾಗ ಹಮ್‌ಫೇರ್ ಎಂಬ ಖಾತೆದಾರ ಮಹೇಶ್ ಪೂನಿಯಾ ಎಂಬ ಹೆಸರಿನಿಂದ ಪರಿಚಯಿಸಿಕೊಂಡ. ನನ್ನ ವಾಟ್ಸ್ ಆ್ಯಪ್ ನಂಬರ್ ಪಡೆದುಕೊಂಡು ಅದರಲ್ಲಿ ಹೂಡಿಕೆ ಯೋಜನೆಗಳ ಬಗ್ಗೆ ಸಂದೇಶ ಕಳುಹಿಸಿದ್ದ.
ಇಂಟ್ರಾ ಟ್ರೇಡಿಂಗ್ ಮತ್ತು ಸ್ಟಾಕ್ ಮಾರ್ಕೆಟಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದ. ಆತ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 2025ರ ಜ. 15ರಿಂದ ಜ.17ರವರೆಗೆ ಒಟ್ಟು 44 ಲಕ್ಷ ರೂ. ಕಟ್ಟಿದ್ದೆ. ಹಣವನ್ನು ಮರಳಿಸುವಂತೆ ಕೋರಿದಾಗ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ. ಅನುಮಾನ ಬಂದು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ವಂಚನೆ
ಮತ್ತೊಂದು ಪ್ರಕರಣದಲ್ಲಿ, ಉಡುಪಿಯ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯಿಂದ 'ವರ್ಕ್ ಫ್ರಮ್ ಹೋಮ್' ಆಫರ್‌ಗೆ ಚಂದಾದಾರರಾಗಿ ಹಣ ಕಳೆದುಕೊಂಡಿದ್ದರು. ಕೆಲಸ ನೀಡುವುದಾಗಿ ವ್ಯಕ್ತಿಯೋರ್ವ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದರು. ಮಹಿಳೆ ತನ್ನ ಮತ್ತು ಆಕೆಯ ಪೋಷಕರ ಬ್ಯಾಂಕ್ ಖಾತೆಗಳಿಂದ 1.9 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆದರೆ ಆಕೆಗೆ ಯಾವುದೇ ಕೆಲಸ ದೊರಕಲಿಲ್ಲ. ಈ ಬಗ್ಗೆ ಮಹಿಳೆ ಉಡುಪಿ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು.
ಕುಂದಾಪುರದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ‘ಅರೆಕಾಲಿಕ ಕೆಲಸ’ಕ್ಕಾಗಿ ನೋಂದಾಯಿಸಿಕೊಂಡು, ಆನ್‌ಲೈನ್ ವಂಚನೆಯಿಂದ ಸುಮಾರು 2.21 ಲಕ್ಷ ರೂ. ಕಳೆದುಕೊಂಡಿದ್ದರು. ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ ಮಹಿಳೆ ಹಂತ ಹಂತವಾಗಿ 2.21 ಲಕ್ಷ ರೂ. ಪಾವತಿಸಿದ್ದಾರೆ. ಬಳಿಕ ತಾನು ಮೋಸ ಹೋಗಿದ್ದೇನೆ ಎಂದು ಆಕೆಗೆ ತಿಳಿಯಿತು. ಈ ಬಗ್ಗೆ ಮಹಿಳೆ ಕುಂದಾಪುರ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.