ಒತ್ತುʼವರಿʼ ವಿರುದ್ಧ ಜನಹೋರಾಟ | ಹೋರಾಟಕ್ಕೆ ರಂಭಾಪುರಿ, ಆದಿಚುಂಚನಗಿರಿ ಪೀಠ ಬೆಂಬಲ ಘೋಷಣೆ

Update: 2024-09-02 12:00 GMT
ಒತ್ತುʼವರಿʼ ವಿರುದ್ಧ ಜನಹೋರಾಟ | ಹೋರಾಟಕ್ಕೆ ರಂಭಾಪುರಿ, ಆದಿಚುಂಚನಗಿರಿ ಪೀಠ ಬೆಂಬಲ ಘೋಷಣೆ

ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಮಲೆನಾಡು ಭಾಗದಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ಜನ ಹೋರಾಟಕ್ಕೆ ಬಾಳೆಹೊನ್ನೂರು ರಂಭಾಪುರಿ ಮಠ ಮತ್ತು ಆದಿಚುಂಚನಗಿರಿ ಪೀಠಗಳು ಬೆಂಬಲ ವ್ಯಕ್ತಪಡಿಸಿವೆ.

ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಮಲೆನಾಡಿಗರ ಸಮಸ್ಯೆ ಕುರಿತ ಮಹತ್ವದ ಸಭೆಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅವರು ಹೋರಾಟಕ್ಕೆ ತಮ್ಮ ಪೀಠಗಳ ಬೆಂಬಲವನ್ನು ಘೋಷಿಸಿದರು.

ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮೀಜಿ, ಮಲೆನಾಡಿನಲ್ಲಿ ಆತಂಕ ಮೂಡಿಸಿರುವ ಒತ್ತುವರಿ ತೆರವು ಕಾರ್ಯಾಚರಣೆ, ಕಸ್ತೂರಿ ರಂಗನ್ ವರದಿ ಜಾರಿಯಂತಹ ವಿಷಯಗಳಲ್ಲಿ ಶಾಶ್ವತ ಪರಿಹಾರ ಬೇಕಾಗಿದೆ. ಮಲೆನಾಡಿನಲ್ಲಿ ಬಡ ಕುಟುಂಬಗಳು ಜೀವನೋಪಾಯಕ್ಕಾಗಿ ಒಂದು, ಎರಡು ಎಕರೆ ಒತ್ತುವರಿ ಮಾಡಿರುವುದನ್ನು ನಿರ್ದಯವಾಗಿ ತೆರವು ಮಾಡುತ್ತಿರುವುದು ಸರಿಯಲ್ಲ. ಇದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಶಾಸಕರು, ಸಂಸದರು ಕೂಡ ಈ ಬಗ್ಗೆ ಜನರ ಪರವಾಗಿ ದನಿ ಎತ್ತಬೇಕು ಎಂದು ಕರೆ ನೀಡಿದರು.

ಕಸ್ತೂರಿ ರಂಗನ್ ವರದಿಯ ವಿಷಯದಲ್ಲಿ ಕೂಡ ಜನಸಾಮಾನ್ಯರಿಗೆ, ಸಣ್ಣಪುಟ್ಟ ರೈತರಿಗೆ ಅದರಿಂದಾಗಿ ಆಗುವ ಸಮಸ್ಯೆಗಳ ಕುರಿತು ಸರ್ಕಾರ ಯೋಚಿಸಬೇಕಿದೆ. ಪಶ್ಚಿಮಘಟ್ಟದ ಹಿತಕ್ಕಾಗಿ ಆ ವರದಿ ಜಾರಿ ಮಾಡುವುದಾದರೂ ಮಲೆನಾಡಿನ ವಾಸ್ತವಾಂಶಗಳನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಮನವರಿಕೆ ಮಾಡಿ ಅದನ್ನು ಜನಪರವಾಗಿ ಇರುವಂತೆ ನೋಡಿಕೊಳ್ಳಬೇಕಿದೆ. ಇದು ಬಹಳ ಸೂಕ್ಷ್ಮ ಸಂಗತಿಯಾಗಿರುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಮುಖ್ಯ. ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಮಲೆನಾಡಿನ ಜನರ ಹೋರಾಟಕ್ಕೆ ಸಂದರ್ಭಕ್ಕೆ ಅನುಸಾರವಾಗಿ ರಂಭಾಪುರಿ ಪೀಠವು ಬೆಂಬವ ನೀಡುತ್ತದೆ ಎಂದು ಅವರು ಘೋಷಿಸಿದರು.

ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ರೈತರು ಎಂದಿಗೂ ಪರಿಸರ ನಾಶ ಮಾಡಿಲ್ಲ. ಮೇಘಸ್ಫೋಟ ಅಥವಾ ಇನ್ನಿತರೆ ಪ್ರಾಕೃತಿಕ ವಿಕೋಪಗಳು ಹೊಸತೇನಲ್ಲ. ಪ್ರಕೃತಿಯಲ್ಲಿ ಏರುಪೇರುಗಳು ಸಹಜ. ಮಲೆನಾಡಿಗರ ಹೋರಾಟದ ಇತಿಹಾಸವನ್ನು ಸರ್ಕಾರಗಳು ಅರ್ಥಮಾಡಿಕೊಂಡು ವಾಸ್ತವಾಂಶ ಅರಿತು ಮುನ್ನಡೆಯಬೇಕು. ರೈತರ ಹೋರಾಟಕ್ಕೆ ಆದಿಚುಂಚನಗಿರಿ ಮಠ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಮಲೆನಾಡು ಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ, ಜನರಹಿತ ಮಲೆನಾಡು ಸೃಷ್ಟಿಸುವುದೇ ಈ ಒತ್ತುವರಿ ತೆರವು ಕಾರ್ಯಾಚರಣೆಯ ಹಿಂದಿನ ಗುರಿ. ಆ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಜೀವ ವೈವಿಧ್ಯಕ್ಕೆ ಜಾಗ ಮೀಸಲಿಟ್ಟಂತೆ ಜನರಿಗೂ ಜಾಗ ಮೀಸಲಿಡಬೇಕು. ಅಂದರೆ ಜನ ಮತ್ತು ಕಾಡಿನ ನಡುವೆ ಮಲೆನಾಡು ವಿಭಾಗವಾಗಬೇಕಿದೆ ಎಂದರು.

ಒತ್ತುವರಿ ಪ್ರಕರಣಗಳು ಹೆಚ್ಚಾಗಲು ಸರ್ಕಾರಗಳ ಧೋರಣೆಯೇ ಕಾರಣ. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕ ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆಗೆ ಮಾಡಲು ಅವಕಾಶವಿಲ್ಲ. ಒಂದು ಬಾರಿ ಸರ್ಕಾರಿ ಭೂಮಿಯನ್ನು ಅರಣ್ಯ ಭೂಮಿ ಎಂದು ದಾಖಲೆಗಳಲ್ಲಿ ನಮೂದು ಮಾಡಿದರೆ ಆ ಭೂಮಿಯಲ್ಲಿ ಒಂದಿಂಚನ್ನೂ ಅರಣ್ಯೇತರ ಬಳಕೆಗೆ ಬಳಸುವಂತಿಲ್ಲ. ಆದರೆ, ಸರ್ಕಾರಗಳು ರಾಜಕೀಯ ಕಾರಣಗಳಿಗಾಗಿ ಒತ್ತುವರಿ ಜಮೀನು ಮಂಜೂರಾತಿ, ಹಕ್ಕುಪತ್ರ ಭರವಸೆ ನೀಡುವ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತಿವೆ. ಹಾಗಾಗಿಯೇ ಜನ ಒತ್ತುವರಿ ಮಾಡುತ್ತಿದ್ದಾರೆ ಎಂದು ವಿಠಲ ಹೆಗ್ಡೆ ವಾಸ್ತವಾಂಶ ಬಿಚ್ಚಿಟ್ಟರು.

ಸಭೆಯಲ್ಲಿ ಶಿರಸಿಯ ಅರಣ್ಯ ಹಕ್ಕು ಹೋರಾಟಗಾರ, ವಕೀಲ ರವೀಂದ್ರ ನಾಯಕ್, ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ, ಕರಾವಳಿ-ಮಲೆನಾಡು ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ, ಸುಧೀರ್ ಕುಮಾರ್ ಮುರೊಳ್ಳಿ, ರಾಧಾ ಸುಂದರೇಶ್ ಮತ್ತಿತರರು ಭಾಗವಹಿಸಿದ್ದರು.

ಸಭೆಯ ಪ್ರಮುಖ ನಿರ್ಣಯಗಳು

  • ಮೇಘಸ್ಫೋಟ ಮತ್ತು ಭೂ ಕುಸಿತಕ್ಕೆ ಮಲೆನಾಡಿಗರನ್ನು ಹೊಣೆ ಮಾಡುವುದು ಅವೈಜ್ಞಾನಿಕ. ಹವಾಮಾನ ವೈಪರೀತ್ಯಕ್ಕೆ ನಗರೀಕರಣವೇ ಮೂಲ ಕಾರಣ ಹೊರತು, ಹಳ್ಳಿಗರಲ್ಲ
  • ಮಲೆನಾಡಿನ ಸಮಸ್ಯೆಗಳಿಗೆ ನ್ಯಾಯಾಲಯದ ಮೂಲಕ ಪರಿಹಾರ ಸಲ್ಲದು, ಬದಲಾಗಿ ಜನ ಹೋರಾಟವೇ ಅಸ್ತ್ರ. ಕೃಷಿ ಮಾಡಿರುವ, ಮನೆ ಕಟ್ಟಿರುವ ಜಾಗ ಅರಣ್ಯವೂ ಅಲ್ಲ; ಪರಿಭಾವಿತ ಅರಣ್ಯವೂ ಅಲ್ಲ
  • ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 4ರಿಂದ 17ರವರೆಗಿನ ನಿಯಮಗಳಿಗೆ ತಿದ್ದುಪಡಿ ತಂದು ನಾಗರಿಕ ಬಳಕೆಯ ಜಾಗವನ್ನು ಅರಣ್ಯ ವ್ಯಾಖ್ಯಾನದಿಂದ ಹೊರಗಿಡಬೇಕು
  • ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯ ಭೂ ಮಂಜೂರಾತಿ ಕಾಲಮಿತಿಯನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸಬೇಕು
  • ಮಲೆನಾಡಿನ ಪರಿಸರ ಸೂಕ್ಷ್ಮ ವಲಯ, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಜಾರಿ ಮುಂತಾದ ಯಾವುದೇ ವಿಷಯದಲ್ಲಿ ಆಮೂಲಾಗ್ರವಾಗಿ ಪರಿಶೀಲಿನ ಜನ ಹಿತವನ್ನು ಪರಿಗಣಿಸಿ ಕೈಬಿಡಬೇಕು
  • ಗ್ರಾಮ ಸಭೆಗಳ ಅನುಮತಿ ಪಡೆಯದೇ ಘೋಷಣೆಯಾಗಿರುವ ಅರಣ್ಯ ಕಾಯ್ದೆ ಸೆಕ್ಸನ್ 4ರ ಇಂಡೀಕರಣವನ್ನು ಕೈಬಿಡಬೇಕು
  • ಪ್ರತಿ ವರ್ಷ ಏ.15ನ್ನು ಮಲೆನಾಡು ದಿನವನ್ನಾಗಿ ಘೋಷಿಸಿ ಮಲೆನಾಡಿನ ಜನಜೀವನ, ಕೃಷಿ, ಪರಂಪರೆ, ಜನಪರ ಸಂಸ್ಕೃತಿಯ ಕುರಿತು ಅರಿವು ಮೂಡಿಸಬೇಕಿದೆ
  • ಹಾಲಿ ಇರುವ ಹುಲಿ ಯೋಜನೆ, ರಾಷ್ಟ್ರೀಯ ಉದ್ಯೋನ, ಅಭಿಯಾರಣ್ಯ ಮತ್ತು ಮೀಸಲು ಅರಣ್ಯಗಳನ್ನು ಮತ್ತೆ ವಿಸ್ತರಿಸಕೂಡದು
Tags:    

Similar News