ಮಲ್ಲಿಕಾರ್ಜುನ ಖರ್ಗೆಗೆ ಶಸ್ತ್ರಚಿಕಿತ್ಸೆ; ಪೇಸ್‌ ಮೇಕರ್‌ ಏನು, ಏಕೆ?

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉಸಿರಾಟದ ತೊಂದರೆಯಿಂದಾಗಿ ಪೇಸ್‌ಮೇಕರ್ ಅಳವಡಿಸಲು ವೈದ್ಯರು ಸಲಹೆ ನೀಡಿದ್ದರು. ಹೃದಯ ಬಡಿತದ ಸ್ಥಿರತೆಗಾಗಿ ಇದು ಅಗತ್ಯ ಎಂದಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Update: 2025-10-02 06:21 GMT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ

Click the Play button to listen to article

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಫೇಸ್‌ಮೇಕರ್‌ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ. ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎಂದಿನಿಂದ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಖರ್ಗೆ ಅವರಿಗೆ ಪೇಸ್‌ ಮೇಕರ್‌ ಅಳವಡಿಕೆ ಕುರಿತಂತೆ ತಮ್ಮʼಎಕ್ಸ್‌ʼ ಖಾತೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ. ತಂದೆಯವರಿಗೆ ಫೇಸ್‌ಮೇಕರ್‌ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರ ಆರೋಗ್ಯ ಚೇತರಿಕೆ ಕಂಡಿದೆ. ವಯೋಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಪೇಸ್‌ಮೇಕರ್ ಅಳವಡಿಸಲು ವೈದ್ಯರು ಸಲಹೆ ನೀಡಿದ್ದರು. ಹೃದಯ ಬಡಿತದ ಸ್ಥಿರತೆಗಾಗಿ ಇದು ಅಗತ್ಯ ಎಂದಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಅ. 3ರಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಎಲ್ಲ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ, ಕಾಳಜಿಗೆ ಕೃತಜ್ಞತೆಗಳು ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಮೂರು ದಿನಗಳ ವಿಶ್ರಾಂತಿ ಬೇಕಾಗಬಹುದು. ಯಾರೂ ಗಾಬರಿಪಡುವ ಅಗತ್ಯವಿಲ್ಲ. ನಿಮ್ಮೆಲ್ಲರ ಹಾರೈಕೆಗಳಿಂದಾಗಿ ಖರ್ಗೆ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಪೇಸ್‌ಮೇಕರ್ ಎಂದರೇನು?

ಪೇಸ್‌ಮೇಕರ್ (Pacemaker) ಎಂದರೆ, ಅದು ಒಂದು ಚಿಕ್ಕ, ಬ್ಯಾಟರಿ ಚಾಲಿತ ಎಲೆಕ್ಟ್ರಾನಿಕ್ ಸಾಧನ. ಇದನ್ನು ಹೃದಯ ಬಡಿತ ನಿಯಂತ್ರಿಸಲು ಎದೆಯ ಚರ್ಮದ ಅಡಿಯಲ್ಲಿ ( ಕಾಲರ್‌  ಬೋನ್‌ ಹತ್ತಿರ) ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ, ಹೃದಯವು ತನ್ನದೇ ಆದ ವಿದ್ಯುತ್ ಸಂಕೇತಗಳ ಮೂಲಕ ನಿಯಮಿತವಾಗಿ ಬಡಿದುಕೊಳ್ಳುತ್ತದೆ. ಆದರೆ, ಕೆಲವೊಮ್ಮೆ ವಯೋಸಹಜ ಸಮಸ್ಯೆ, ಹೃದಯಾಘಾತ, ಅಥವಾ ಇತರೆ ಕಾರಣಗಳಿಂದಾಗಿ ಈ ನೈಸರ್ಗಿಕ ವಿದ್ಯುತ್ ವ್ಯವಸ್ಥೆಯಲ್ಲಿ ತೊಂದರೆಯಾದಾಗ ಹೃದಯ ಬಡಿತ ಕ್ಷೀಣಿಸಲಿದೆ. ಆದ್ದರಿಂದ ಪೇಸ್‌ಮೇಕರ್‌ ಅಳವಡಿಸಿ, ಹೃದಯ ಬಡಿತವನ್ನು ಯಥಾಸ್ಥಿತಿಯಲ್ಲಿ ಇಡಲಾಗುತ್ತದೆ. 

ಸಮಾವೇಶದಲ್ಲಿ ಭಾಗಿ

ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 7 ರಂದು ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ನಡೆಯಲಿರುವ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಸೆಪ್ಟೆಂಬರ್ 24 ರಂದು ಖರ್ಗೆ ಅವರು ಪಟನಾ, ಬಿಹಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು. ಅಧಿಕ ಕಾರ್ಯದೊತ್ತಡದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. 

ಮಂಗಳವಾರ(ಸೆ.30) ತಡರಾತ್ರಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್‌ ಅಳವಡಿಸಲಾಗಿದೆ. ತಜ್ಞ ವೈದ್ಯರ ತಂಡವು ಖರ್ಗೆ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ.  

ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ 

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಸೆ.1) ಎಂ. ಎಸ್‌. ರಾಮಯ್ಯ ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್‌ ಅಸ್ಸಾಂ ಪ್ರವಾಸದಲ್ಲಿದ್ದ ಕಾರಣ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಅವರು ಬೆಂಗಳೂರಿಗೆ ಬಂದ ತಕ್ಷಣ  ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Similar News