
ವಿಶ್ವ ಹೃದಯ ದಿನ|ಹೃದಯಾಘಾತ ಪ್ರಕರಣಗಳ ಹೆಚ್ಚಳ; ಹೃದ್ರೋಗ ನಿವಾರಣೆಗೆ ಬೇಕಿದೆ ವ್ಯಾಯಾಮ-ಯೋಗ
ವಿಶ್ವ ಅರೋಗ್ಯ ಸಂಸ್ಥೆಯು ಪ್ರತಿ ವರ್ಷ ಸೆ. 29 ವಿಶ್ವ ಹೃದಯ ದಿನವನ್ನಾಗಿ ಘೋಷಣೆ ಮಾಡಿದೆ. ಈ ವರ್ಷ " ಹೃದಯ ಬಡಿತ ತಪ್ಪಿಸಬೇಡಿ" ಎಂಬ ಘೋಷವಾಕ್ಯದೊಂದಿಗೆ ವಿಶ್ವದೆಲ್ಲೆಡೆ ಹೃದಯ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. 2025-26 ರ ಆಗಸ್ಟ್‌ವರೆಗೆ ರಾಜ್ಯಾದ್ಯಂತ 167 ಮಂದಿ ಹೃದಯಾಘಾತಕ್ಕೆ ಬಲಿಯಾಗಿರುವುದು ಕಳವಳ ಮೂಡಿಸಿದೆ. ಅಲ್ಲದೇ ಹೃದಯ ಸುರಕ್ಷತೆಯ ಅನಿವಾರ್ಯತೆಯನ್ನು ತೋರಿಸುತ್ತಿದೆ.
ಹಾಸನ ಜಿಲ್ಲೆಯಲ್ಲಿ ಮೇ-ಜೂನ್ ತಿಂಗಳ ಅವಧಿಯ ಕೇವಲ 40ದಿನಗಳ ಅಂತರದಲ್ಲಿ 24 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಅಧ್ಯಯನ ನಡೆಸಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರ ತಂಡ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಮೃತರಲ್ಲಿ ಬಹುತೇಕರು ವ್ಯಸನಗಳಿಗೆ ದಾಸರಾಗಿದ್ದರು. ಕೆಲವರಿಗೆ ವಂಶವಾಹಿನಿಯ ಮೂಲಕ ಕಾಯಿಲೆ ಹರಡಿತ್ತು. ಹಾಗಾಗಿ ಇವು ಹಠಾತ್ತಾಗಿ ಸಂಭವಿಸಿದ ಸಾವುಗಳಲ್ಲ ಎಂದು ವರದಿ ತಿಳಿಸಿತ್ತು.
ಹೃದ್ರೋಗ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಹೃದಯ ರಕ್ಷಣೆ ಕುರಿತು ಹೆಚ್ಚು ಜಾಗೃತಿ ವಹಿಸುವುದು ಅವಶ್ಯ ಎಂದು ವೈದ್ಯರು ಹೇಳಿದ್ದರು. ಇಂದು(ಸೆ.29) ವಿಶ್ವ ಹೃದಯ ದಿನದ ಅಂಗವಾಗಿ ಹೃದರ ಸುರಕ್ಷತೆ ಕುರಿತು ಜಾಗೃತಿ ಅತ್ಯಾವಶ್ಯಕವಾಗಿದೆ. ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆ ಹೃದಯದ ಕಾಳಜಿ ವಹಿಸುವ ಸಲುವಾಗಿ ಪ್ರತಿ ವರ್ಷ ಸೆ. 29 ರಂದು ʼವಿಶ್ವ ಹೃದಯ ದಿನʼ ಎಂದು ಘೋಷಿಸಿ, ಆಚರಿಸಿಕೊಂಡು ಬರುತ್ತಿದೆ. ಈ ಬಾರಿ " ಹೃದಯ ಬಡಿತ ತಪ್ಪಿಸಬೇಡಿ" ಎಂಬ ಘೋಷವಾಕ್ಯದೊಂದಿಗೆ ಹೃದಯ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಹೃದ್ರೋಗ ಸಾಂಕ್ರಾಮಿಕವಲ್ಲ
ಪ್ರತಿಯೊಂದು ಕಾಲಘಟ್ಟದಲ್ಲಿಯೂ ಒಂದೊಂದು ರೋಗಗಳು ಜನರನ್ನು ಕಂಗೆಡಿಸುತ್ತಿದ್ದರೆ ಈ ಕಾಲಘಟ್ಟದಲ್ಲಿ ಹೃದ್ರೋಗ ಎಂಬುದು ಜನರನ್ನು ತಲ್ಲಣಿಸಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಆದರೆ, ಭಾರತ ಸೇರಿ ವಿಶ್ವದಾದ್ಯಂತ ಇದರ ಅಂಕಿಸಂಖ್ಯೆಗಳು ತಲ್ಲಣ ಹುಟ್ಟಿಸುತ್ತವೆ. ಹಾಗೆಂದು ಇದೇನೂ ಸಾಂಕ್ರಾಮಿಕವಲ್ಲ. ನಮ್ಮ ಹೃದಯ ಬಡಿತ ನಮ್ಮ ಕೈಯಲ್ಲೇ ಇದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡರೆ ಹೃದಯ ಸದಾ ಬಡಿಯುತ್ತಲೇ ಇರುತ್ತದೆ.
ಭಾರತದ ಶೇ. 11 ರಷ್ಟು ಮಂದಿ ವಯಸ್ಕರು ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 6 ರಷ್ಟು ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರೆ, ನಗರ ಪ್ರದೇಶದ ಶೇ. 12 ರಷ್ಟು ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಮತ್ತೊಂದು ಆಘಾತಕಾರಿ ವಿಚಾರ ಎಂದರೆ ಪುರುಷರಿಗೆ ಹೋಲಿಸಿದರೆ ಶೇ.14 ರಷ್ಟು ಮಹಿಳೆಯರು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.
ಮೂವರಲ್ಲಿ ಒಬ್ಬ ಭಾರತೀಯರಿಗೆ ಹೃದಯ ಕಾಯಿಲೆ
ನಮ್ಮ ದೇಶದಲ್ಲಿ ಹೃದಯಾಘಾತ ಸಾವು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಪ್ರಮಾಣ ನೋಡಿದರೆ ಆತಂಕ ಮೂಡಿಸುವುದು ಸಹಜ. ಮಾತ್ರವಲ್ಲ ನಾನಾ ಕಾರಣಗಳಿಂದ ಭಾರತದಲ್ಲಿ29 ರಿಂದ 79 ವರ್ಷದೊಳಗಿನ 7.4 ಕೋಟಿ ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಇತ್ತೀಚಿನ ಅಂಕಿ ಅಂಶಗಳಿಂದ ಹೊರ ಬಿದ್ದಿದೆ. ಇದರ ಅರ್ಥ ಪ್ರತಿ ಮೂವರು ಭಾರತೀಯರಲ್ಲಿ ಒಬ್ಬರು ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದಾರೆ. ದೈಹಿಕ ಚಟುವಟಿಕೆ ರಹಿತ ಜೀವನ, ಅಧಿಕ ತೂಕ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹೀಗೆ ನಾನಾ ಕಾರಣಗಳಿಂದ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.
ದೇಶದಲ್ಲಿ 28,413 ಮಂದಿ ಮೃತ
ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣಹೊಂದುವವರ ಪ್ರಮಾಣ ಸಹ ಗಣನೀಯವಾಗಿ ಭಾರತದಲ್ಲಿ ಹೆಚ್ಚಳವಾಗುತ್ತಿದೆ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಒಂದು ಲಕ್ಷ ಮಂದಿಯಲ್ಲಿ 349 ಮಂದಿ ಪುರುಷರು, 265 ಮಹಿಳೆಯರು ಹೃದಯ ಸಂಬಂಧಿ ಕಾಯಿಲೆಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. 2021 ರಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ 28,413 ಮಂದಿ ಮೃತಪಟ್ಟಿದ್ದರು. ಇದರ ಪ್ರಮಾಣ 2023 ರಲ್ಲಿ 32,457 ಆಗಿದ್ದು, ಪ್ರತಿ ವರ್ಷ ಭಾರತದಲ್ಲಿ ಹೃದಯ ಸಂಬಂಧಿ ಸಾವುಗಳ ಪ್ರಮಾಣ ಹೆಚ್ಚುತ್ತಿದೆ. ರಾಷ್ಟ್ರದ ಎನ್‌ಪಿಸಿಡಿಸಿಎಸ್ -2023 ರ ಪ್ರಕಾರ 73 ಮಿಲಿಯನ್ ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ಒಟ್ಟಾರೆ ಜನಸಂಖ್ಯೆಯ ಶೇ. 25 ರಷ್ಟು ಮಂದಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 23.4 ರಷ್ಟು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಗರ ಪ್ರದೇಶದಲ್ಲಿ ಶೇ. 27.4 ರಷ್ಟು ಮಂದಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಭಾಗದಲ್ಲಿ ಶೇ. 39.4 ರಷ್ಟು ಮಂದಿ ಬೊಜ್ಜಿನಿಂದ ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದರ ಸಂಖ್ಯೆ 27.4 ಕ್ಕೆ ಹೆಚ್ಚಳವಾಗಿದೆ. ಕರ್ನಾಟಕ ಮಾತ್ರವಲ್ಲದೇ ಭಾರತದಲ್ಲಿ ಪ್ರತಿ ವರ್ಷ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿರುವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಸಕ್ಕರೆ, ಉಪ್ಪು, ಎಣ್ಣೆ ಕೊಡುಗೆ
ಭಾರತೀಯರ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಮೂಲ ಕಾರಣ ನಮ್ಮ ಜನರ ಆಹಾರ ಸೇವನೆ ಪ್ರಮಾಣ ಮತ್ತು ಪದ್ಧತಿ ಕೂಡ ಕಾರಣ. ಸಕ್ಕರೆ, ಎಣ್ಣೆ ಪದಾರ್ಥಗಳ ಮಿತಿ ಮೀರಿದ ಸೇವನೆ, ದೈಹಿಕ ಚಟುವಟಿಕೆ ರಹಿತ ಜೀವನ ಶೈಲಿಯೇ ಇಂದು ದೊಡ್ಡ ಅರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕಿದೆ. ಇದರಿಂದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗಿ ಅನಾರೋಗ್ಯದ ಸಂಕೋಲೆಗೆ ಸಿಲುಕುವಂತಾಗಿದೆ.
ಹೃದಯದ ಆರೋಗ್ಯಕ್ಕೆ ಒಂದಿಷ್ಟು ಸಲಹೆ
'ಪ್ರತಿ ವರ್ಷ ನಾವು ಸೆ. 29 ನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ " ಹೃದಯ ಬಡಿತ ತಪ್ಪಿಸಬೇಡಿ" ಎಂಬ ಥೀಮ್‌ನೊಂದಿಗೆ ವಿಶ್ವ ಹೃದಯ ದಿನ ಅಚರಿಸುತ್ತಿದ್ದೇವೆ. ಅಂದರೆ ನಮ್ಮ ಹೃದಯ ಬಡಿತಕ್ಕೆ ಹೆಚ್ಚು ಆದ್ಯತೆ ಕೊಡಬೇಕು ಎನ್ನುವುದು ಇದರ ಅರ್ಥ. ಬಹುಮುಖ್ಯವಾಗಿ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಮಿತವಾದ, ಅರೋಗ್ಯವಂತ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಪ್ರತಿ ನಿತ್ಯ ಕನಿಷ್ಠ ಒಂದು ಗಂಟೆ ಕಾಲ ನಡಿಗೆ ಹೃದಯ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ವಾರದಲ್ಲಿ ಕನಿಷ್ಠ ಐದು ದಿನ 45 ನಿಮಿಷವಾದರೂ ನಡೆಯಲೇಬೇಕು. ಸಾಧ್ಯವಾದಷ್ಟು ಜಂಕ್ ಫುಡ್‌ಗಳಿಂದ ದೂರವಿರಬೇಕು. ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸೇವನೆ ಮಾಡಬಾರದು. ಒತ್ತಡದ ಜೀವನ ಶೈಲಿಯಿಂದ ಹೊರಗೆ ಬರಬೇಕು. ಪ್ರತಿ ದಿನ ನಮ್ಮ ಹೃದಯಕ್ಕೆ ಅಂತ ಒಂದು ತಾಸು ಎತ್ತಿಡಬೇಕು' ಎಂದು ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ದಿವ್ಯ ಪ್ರಕಾಶ್ ಸಲಹೆ ನೀಡಿದ್ದಾರೆ.
ಹೃದಯಾಘಾತಕ್ಕೆ ಒತ್ತಡದ ಜೀವನವೇ ಕಾರಣ
ನಮ್ಮ ಏಷ್ಯಾ ಖಂಡದಲ್ಲಿ ಈ ಮೊದಲು 60ರ ಪ್ರಾಯದ ನಂತರ ಜನರಲ್ಲಿ ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿದ್ದವು. ಈಗ 30 ವರ್ಷ ದಾಟಿದ ಬಳಿಕವೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ನಾನಾ ಕಾರಣಗಳೂ ಇವೆ. ಅಹಾರ ಪದ್ಧತಿ, ಚಟುವಟಿಕೆ ರಹಿತ ಜೀವನ ಶೈಲಿ, ಒತ್ತಡ ಮುಕ್ತ ಜೀವನ, ಅತಿಯಾದ ಮದ್ಯಪಾನ ಸೇವನೆ, ಧೂಮಪಾನ, ಇದನ್ನು ಅರಿತು ಜನರು ಅರೊಗ್ಯವಂತ ಜೀವನ ಕಡೆ ಹೆಜ್ಜೆ ಇಡಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸುತ್ತಾರೆ.
ವೈದ್ಯರ ಸಲಹೆ ಪಾಲಿಸಿ
ಜನರು ತಮ್ಮ ಆರೋಗ್ಯ ಮೇಲೆ ನಿಗಾ ವಹಿಸಿಕೊಳ್ಳಬೇಕು. ವೈದ್ಯರು ನೀಡಿದ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ನಮ್ಮಲ್ಲಿಗೆ ಬರುವ ಅನೇಕರು ತಾವೇ ಸ್ವಯಂ ತೀರ್ಮಾನಗಳನ್ನು ತೆಗೆದುಕೊಂಡು ಆರೋಗ್ಯವನ್ನು ಮತ್ತಷ್ಟು ಹಾನಿಮಾಡಿಕೊಂಡಿರುತ್ತಾರೆ. ಉದಾಹರಣೆಗೆ ಅಧಿಕ ರಕ್ತದೊತ್ತಡಕ್ಕೆ ನಾವು ಎರಡು ಮಾತ್ರೆಗಳನ್ನು ಕೊಟ್ಟಿದ್ದರೆ ಅವರು ಒಂದನ್ನು ಸೇವಿಸಿ ಮತ್ತೊಂದನ್ನು ತಾವೇ ತೀರ್ಮಾನ ತೆಗೆದುಕೊಂಡು ನಿಲ್ಲಿಸಿರುತ್ತಾರೆ. ಬಳಿಕ ಸ್ಟ್ರೋಕ್ ಅಥವಾ ಹೃದಯ ಸಂಬಂಧಿ ಕಾಯಿಲೆಗಳಗಾಗಿ ಪುನಃ ಚಿಕಿತ್ಸೆಗೆ ಬರುತ್ತಾರೆ. ಇಂತಹ ನಿರ್ಲಕ್ಷ್ಯತೆಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ವಿಶ್ವ ಹೃದಯ ದಿನ ಅಂಗವಾಗಿ ಜನರು ತಮ್ಮ ಹೃದಯ ಅರೋಗ್ಯ ಕಡೆಯೂ ಗಮನ ಕೊಡಬೇಕು. ನಿರಂತರ ವ್ಯಾಯಾಮ, ಯೋಗ, ಧ್ಯಾನ ಜತೆಗೆ, ಸಕ್ಕರೆ, ಎಣ್ಣೆ ರಹಿತ ಅಹಾರ ಪದಾರ್ಥಗಳ ಸೇವನೆಗೆ ಅದ್ಯತೆ ನೀಡಬೇಕು. ಆರೋಗ್ಯ ಒಂದಿದ್ದರೆ ನೂರು ಸಮಸ್ಯೆ ಎದುರಿಸಬಹುದು, ಅರೋಗ್ಯ ಕೈ ಕೊಟ್ಟರೆ ಅದೇ ಮೂಲ ಸಮಸ್ಯೆಯಾಗುತ್ತದೆ. ಹೀಗಾಗಿ ಇವತ್ತಿನ ದಿನದಲ್ಲಿ ಜನರು ಅರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಅದರಲ್ಲೂ ಹೃದಯದ ಅರೋಗ್ಯ ಕಾಪಾಡಿಕೊಳ್ಳಲೇಬೇಕಿದೆ ಎಂದು ದಿವ್ಯ ಪ್ರಕಾಶ್ ತಿಳಿಸಿದ್ದಾರೆ.