ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋ ಬಳಸಿ ಪ್ರಚೋದನಕಾರಿ ಪೋಸ್ಟ್; ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಸದ್ಯ ಬಂಧಿತ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಸ್ಥಳೀಯ ಕೋರ್ಟ್‌ಗೆ ಹಾಜರು ಪಡಿಸಿದ್ದು, ಸೋಮವಾರದವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.;

Update: 2025-09-13 09:47 GMT

ಟೀವಿ ವಿಕ್ರಂ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ

Click the Play button to listen to article

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಬಳಸಿ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಟೀವಿ ವಿಕ್ರಂ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಮೂಡಬಿದರೆ ಪೊಲೀಸರು ಬಂಧಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಎಡಿಟ್ ಮಾಡಿ, 'ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಡೋಜರ್‌ ನುಗ್ಗಿಸುವ ಧೈರ್ಯ ಮಾಡಿ ನೋಡಿ. ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂತಹ ಪ್ರಕರಣ ಮರುಕಳಿಸಲ್ಲʼ ಎಂದು ಪೋಸ್ಟ್ ಹಾಕಿದ್ದರು.

ಈ ಬಗ್ಗೆ ಮೂಡಬಿದಿರೆ ಪಿಎಸ್ಐ ಕೃಷ್ಣಪ್ಪ ಅವರ ದೂರಿನಡಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಲಾಗಿತ್ತು. ಇದರನ್ವಯ ಅವರ ವಿರುದ್ಧ ಬಿಎನ್‌ಎಸ್ 353 (2) ಅಡಿ ಸೆ.9 ರಂದು ಮೂಡುಬಿದಿರೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.

ಸದ್ಯ ಬಂಧಿತ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಸ್ಥಳೀಯ ಕೋರ್ಟ್‌ಗೆ ಹಾಜರು ಪಡಿಸಿದ್ದು, ಸೋಮವಾರದವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಹೇಶ್ ವಿಕ್ರಂ ಹೆಗ್ಡೆ ಬಂಧನಕ್ಕೆ ಬಿಜೆಪಿ ನಾಯಕರು ತೀವ್ರ ಕಿಡಿಕಾರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, 'ಧರ್ಮಸೇವೆಗೆ ರಾಷ್ಟ್ರ ಸೇವೆಗೆ ಸಮರ್ಪಿತರಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರ' ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಕಾರ್ಕಳ, 'ಮದ್ದೂರು ಗಣೇಶೋತ್ಸವ ಸಂದರ್ಭದಲ್ಲಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ ಮತಾಂಧರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೆಂಬ ಕಾರಣಕ್ಕೆ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಪೊಲೀಸರು ಮೂಡಬಿದರೆಯಲ್ಲಿ ಬಂಧಿಸಿದ್ದಾರೆ. ಮುಸ್ಲೀಂ ಓಲೈಕೆಯಲ್ಲಿ ಮುಳುಗಿ ಹೋಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುತ್ವ ಹಾಗೂ ಹಿಂದುಪರ ಧ್ವನಿಗಳನ್ನು ಉಡುಗಿಸುವ ಪ್ರಯತ್ನ ನಡೆಸುತ್ತಿದೆ. ಮಹೇಶ್ ವಿಕ್ರಂ ಹೆಗ್ಡೆಯವರ ಬಂಧನವನ್ನು ಉಗ್ರವಾಗಿ ಖಂಡಿಸುತ್ತೇನೆ. ಹಿಂದುಗಳ ಧಾರ್ಮಿಕ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿರುವ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ಸಂವಿಧಾನ ವಿರೋಧಿ ಪಥದಲ್ಲಿ ಸಾಗುತ್ತಿದೆ' ಎಂದು ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.

Tags:    

Similar News