ಮಹಾಲಕ್ಷ್ಮಿ ಕೊಲೆ ಪ್ರಕರಣ | ಕೊಲೆಗಾರನ ಜಾಡು ಪತ್ತೆ ಮಾಡಿದ ಪೊಲೀಸರು

Update: 2024-09-23 08:29 GMT

ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ತುಂಡು ತುಂಡಾಗಿ ಕೊಚ್ಚಿ ಫ್ರಿಡ್ಜ್ ಒಳಗೆ ತುಂಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಗಾರನ ಜಾಡು ಪತ್ತೆ ಮಾಡಿದ್ದು, ಹೊರ ರಾಜ್ಯದ ಆತನನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವೈಯಾಲಿಕಾವಲ್ ವಾಸಿ ಮಹಾಲಕ್ಷ್ಮೀ ಅವರ ಭೀಕರ ಕೊಲೆ ಪ್ರಕರಣದ ಆರೋಪಿಯ ಗುರುತು ಪತ್ತೆಯಾಗಿದೆ. ಆರೋಪಿಗಾಗಿ ಹುಡುಕಾಟ ಮುಂದುವರೆದಿದ್ದು, ಶೀಘ್ರವೆ ಬಂಧಿಸುತ್ತೇವೆ. ಆರೋಪಿ ಹೊರ ರಾಜ್ಯದವನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ ಎಂಬುವುದು ತಿಳಿದುಬಂದಿದೆ ಎಂದರು.

ಗಣೇಶ ಗಲಾಟೆ ಆಗಿಲ್ಲ: ಸ್ಪಷ್ಟನೆ

ಗಣೇಶಮೂರ್ತಿ ಮೆರವಣಿಗೆ ವೇಳೆ ಬೆಂಗಳೂರಿನಲ್ಲಿ ಗಲಾಟೆ ಆಗಿಲ್ಲ. ಅಲ್ಲದೇ, ಯಾವುದೇ ಅಹಿತಕರ ಘಟನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಣೇಶ ಮೆರವಣಿಗೆ ವೇಳೆ ಡಿಜೆ ವಿಚಾರವಾಗಿ ಚಾಮರಾಜಪೇಟೆ ಮತ್ತು ಹಂಪಿನಗರದಲ್ಲಿ ಭಾನುವಾರ ಸಂಜೆ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ನಡೆದಿದ್ದ ವಾಗ್ವಾದದ ಕುರಿತು ಹಬ್ಬಿರುವ ವದಂತಿಗಳನ್ನು ಅಲ್ಲಗಳೆದರು.

ಸಿಸಿಬಿ ಪೊಲೀಸರು ಓರ್ವ ವಿದೇಶಿ ವ್ಯಕ್ತಿ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತರಿಂದ 1.5 ಕೋಟಿ ಮೌಲ್ಯದ ಒಂದು ಕೆಜಿ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ತನಿಖೆ ಮುಂದುವರೆದಿದೆ. ಜುಲೈ ತಿಂಗಳಲ್ಲಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿ, 4 ಎಂಡಿಎಂಎ ವಶಕ್ಕೆ ಪಡೆದಿದ್ದೆವು. ಈಗ ಆತನ ಜೊತೆಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿ ಆಫ್ರಿಕಾ ದೇಶದವನಾಗಿದ್ದು, 2018ರಲ್ಲಿ ಭಾರತಕ್ಕೆ ಬಂದಿದ್ದ. ಆತನ ಜೊತೆಗೆ ಸಿಕ್ಕ ಮಹಿಳಾ ಆರೋಪಿ ಆತನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದವಳು ಎಂದು ತಿಳಿಸಿದರು.

ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಪ್ರಕರಣವನ್ನು ದಕ್ಷಿಣ ಸೆನ್ ವಿಭಾಗದ ಪೊಲೀಸರು ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೆಂಗೇರಿಯಲ್ಲಿ ಬಾಡಿಗೆ ರೂಂ ಪಡೆದು ಸತತ ಸಂಪರ್ಕ ಮಾಡಿ, ಡಿಜಿಟಲ್ ಅರೆಸ್ಟ್ ಎಂದು 10 ದಿನ ಬೆದರಿಸಿ ಬರೋಬ್ಬರಿ 30 ಲಕ್ಷ ಹಣ ಪಡೆದಿದ್ದರು. ಬಳಿಕ ಇದು ವಂಚನೆ ಕೃತ್ಯ ಎಂಬುದು ಅರಿವಾಗಿ ವಂಚನೆಗೆ ಒಳಗಾಗದವರು ದೂರು ನೀಡಿದ್ದರು. ದೂರು ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ನಾಲ್ವರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದರು.

Tags:    

Similar News