ದಸರಾ ಮೆರವಣಿಗೆ ಜೀಪ್ನಲ್ಲಿ ಸಚಿವ ಮಹದೇವಪ್ಪ ಮೊಮ್ಮಗನ ಸವಾರಿ; ಶಿಷ್ಟಾಚಾರ ಉಲ್ಲಂಘನೆ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ ಮತ್ತು ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಸಚಿವ ಮಹದೇವಪ್ಪ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಸಾಗಿದ್ದರು.
ಕಾರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆಗಿರುವ ಬಾಲಕ
ರಾಜ್ಯ ಕಾಂಗ್ರೆಸ್ ಸರ್ಕಾರವು ಶಿಷ್ಟಾಚಾರ ಉಲ್ಲಂಘನೆಯ ವಿವಾದಗಳಲ್ಲಿ ಪದೇ ಪದೇ ಸಿಲುಕಿಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತಮ್ಮ ಮೊಮ್ಮಗನನ್ನು ಅಧಿಕೃತ ವಾಹನದಲ್ಲಿ ಕೂರಿಸಿಕೊಂಡಿದ್ದು, ಸರ್ಕಾರದ ವರ್ಚಸ್ಸಿಗೆ ಮತ್ತೊಮ್ಮೆ ಧಕ್ಕೆ ತಂದಿದೆ.
ಮೈಸೂರು ಅರಮನೆಯ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ ಮತ್ತು ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಸಚಿವ ಮಹದೇವಪ್ಪ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಸಾಗಿದ್ದರು. ಇದೇ ವಾಹನದಲ್ಲಿ ಸಚಿವರ ಮೊಮ್ಮಗ ಕೂಡ ಕೂಲಿಂಗ್ ಗ್ಲಾಸ್ ಧರಿಸಿ ಕುಳಿತಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ದುಬಾರಿ ಬೆಲೆಯ ಗೋಲ್ಡನ್ ಪಾಸ್ ಖರೀದಿಸಿದ ಸಾರ್ವಜನಿಕರಿಗೇ ಪ್ರವೇಶ ನಿರಾಕರಿಸಲಾಗಿದ್ದ ಸಂದರ್ಭದಲ್ಲಿ, ಸಚಿವರ ಮೊಮ್ಮಗನಿಗೆ ರಾಜಮರ್ಯಾದೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಿದ್ದು, ಕೆಲವು ಕಾಂಗ್ರೆಸ್ ನಾಯಕರು ವಿಡಿಯೋ ಸಮೇತ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಮೊದಲಲ್ಲ
ಇದೇ ರೀತಿಯ ಶಿಷ್ಟಾಚಾರ ಉಲ್ಲಂಘನೆ ಈ ಹಿಂದೆಯೂ ನಡೆದಿತ್ತು. ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸರ್ಕಾರ ಆಯೋಜಿಸಿದ್ದ ಅಧಿಕೃತ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಕಾಣಿಸಿಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆ ಕಾರ್ಯಕ್ರಮದಲ್ಲಿಯೂ ಹಲವು ಸಚಿವರ ಕುಟುಂಬ ಸದಸ್ಯರು ಭಾಗವಹಿಸಿದ್ದು, ಸರ್ಕಾರಿ ಕಾರ್ಯಕ್ರಮಗಳನ್ನು ಕುಟುಂಬದ ಕಾರ್ಯಕ್ರಮಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗೆ ಗುರಿಯಾಗಿತ್ತು.