
Bangalore Stampede |ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ ಆರ್‌ಸಿಬಿ
ಫ್ರಾಂಚೈಸಿ ತನ್ನ ಹೊಸ ಉಪಕ್ರಮ `ಆರ್‌ಸಿಬಿ ಕೇರ್ಸ್’ ಅಡಿಯಲ್ಲಿ ಆರ್ಥಿಕ ಸಹಾಯವನ್ನು ವಿಸ್ತರಿಸಲಾಗುತ್ತಿದೆ ಎಂದು ಆರ್‌ಸಿಬಿ ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಅಭಿಮಾನಿಗಳ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿ ತಲಾ 25 ಲಕ್ಷ ರೂ.ಪರಿಹಾರ ಘೋಷಿಸಿದೆ. ಈ ಹಿಂದೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಈಗ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ.
ಫ್ರಾಂಚೈಸಿಯು ಈಚೆಗೆ ಆರಂಭಿಸಿರುವ `ಆರ್‌ಸಿಬಿ ಕೇರ್ಸ್’ ಅಡಿಯಲ್ಲಿ ಸಂತ್ರಸ್ಥರ ಕುಟುಂಬಗಳಿಗೆ ಆರ್ಥಿಕ ನೆರವು ಹೆಚ್ಚಿಸಿದೆ. ಈ ಬಗ್ಗೆ ಆರ್‌ಸಿಬಿ ತನ್ನ ʼಎಕ್ಸ್ʼ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದೆ.
"ಜೂನ್ 4, 2025ರ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಮ್ಮ ಕುಟುಂಬದ ಸದಸ್ಯರಂತಿದ್ದ 11 ಅಭಿಮಾನಿಗಳನ್ನು ನಾವು ಕಳೆದುಕೊಂಡೆವು. ಅವರ ಉತ್ಸಾಹವೇ ಈಗ ನಮಗೆ ಶಕ್ತಿಯಾಗಿದೆ. ಈ ದುರಂತದಿಂದ ಆಗಿರುವ ನೋವನ್ನು ಯಾವ ಸಹಾಯವೂ ತುಂಬುವುದಿಲ್ಲ. ಇದು ಕೇವಲ ಆರ್ಥಿಕ ಸಹಾಯವಲ್ಲ. ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆಯಾಗಿದೆ" ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ನೆನಪಿನ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಗೌರವದ ಸಂಕೇತವಾಗಿ ಆರ್‌ಸಿಬಿ ಆಡಳಿತ ಮಂಡಳಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೆರವು ನೀಡುತ್ತಿದೆ. ಇದು ಆರ್‌ಸಿಬಿ ಕೇರ್ಸ್‍ನ ಆರಂಭವೂ ಹೌದು. ಅವರ ನೆನಪನ್ನೂ ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ಬದ್ಧತೆ ಹೊಂದಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದುಕೊಂಡಿತ್ತು. ಆರ್‌ಸಿಬಿ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂ.4 ಸಂಭ್ರಮಾಚರಣೆಗೆ ಬಂದಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಉಚಿತ ಪ್ರವೇಶ ಘೋಷಣೆಯಿಂದ ಮಿತಿಮೀರಿದ ಜನ ಬಂದಿದ್ದರಿಂದ ಈ ಅವಘಡ ನಡೆದಿತ್ತು.