ನಟ ದರ್ಶನ್ ಪ್ರಕರಣ | ಜೈಲಿನಲ್ಲಿ ಐಷಾರಾಮಿ ಸೌಲಭ್ಯ: ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು ?
ನಟ ದರ್ಶನ್‌ಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ಲೋಪಗಳು ಆಗದಂತೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದೂ ಸಹ ತಿಳಿಸಿದ್ದಾರೆ.;
ʻಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ನಿಷ್ಪಕ್ಷವಾಗಿ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ಪಕ್ಷದ ಆಧಾರದ ಮೇಲೆ ತನಿಖೆ ನಡೆಯುತ್ತಿಲ್ಲʼ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾವುದೇ ಪಕ್ಷದವರಾಗಿದ್ದರೂ, ತಪ್ಪಿತಸ್ಥರೆಂದೇ ಪರಿಗಣಿಸಲಾಗುತ್ತದೆ. ಆರೋಪಿಗಳು ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಯಾರು ಏನು ತಪ್ಪು ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ತನಿಖೆ, ವಿಚಾರಣೆ ನಡೆಸಲಾಗುತ್ತದೆʼ ಎಂದು ತಿಳಿಸಿದರು.
ʻಜೈಲಿನಲ್ಲಿ ಹಣ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುತ್ತವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಜೈಲಿನಲ್ಲಿ ನಟ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆʼ ಎನ್ನುವ ಬಗ್ಗೆ ಸಚಿವ ಜಿ. ಪರಮೇಶ್ವರ್ ಮಾತನಾಡಿದರು.
ʻಇದು ಕೆಲವೊಂದು ಸಂದರ್ಭದಲ್ಲಿ ಸತ್ಯ ಇರಬಹುದು. ಜೈಲುಗಳ ಮೇಲೆ ದಾಳಿ ನಡೆಸಿದಾಗ ಫೋನ್ ಸೇರಿದಂತೆ ವಿವಿಧ ವಸ್ತುಗಳು ಸಿಕ್ಕಿರುವ ಉದಾಹರಣೆ ಇದೆ. ಅಧಿಕಾರಿಗಳ ಕಣ್ತಪ್ಪಿಸಿ ಈ ರೀತಿ ನಡೆದಿರುತ್ತದೆ. ಜೈಲಿನ ಅಧಿಕಾರಿಗಳು ನಿಗಾವಹಿಸುತ್ತಾರೆ. ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆʼ ಎಂದರು.
ʻರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ನನ್ನು ವಿಚಾರಣೆ ನಡೆಸಲು ಇನ್ನೊಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದರು. ಆದರೆ, ಎರಡು ದಿನ ಕಸ್ಟಡಿಗೆ ಮಾತ್ರ ಅನುಮತಿ ಸಿಕ್ಕಿದೆ. ಎರಡು ದಿನದ ಬಳಿಕ ವಿಚಾರಣೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆʼ ಎಂದರು.
ʻರೇಣುಕಾಸ್ವಾಮಿ ಪ್ರಕರಣದ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ವಿಚಾರದಲ್ಲಿ ಯಾರು ನನ್ನ ಬಳಿ ಬರಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ಪ್ರಕರಣದ ಮಾಹಿತಿ ನೀಡಲು ಹೋಗುವುದನ್ನು ಹೊರತುಪಡಿಸಿದರೆ, ಬೇರೆ ಯಾರು ಹೋಗಲ್ಲ. ಅದರ ಅವಶ್ಯಕತೆ ಸಹ ಯಾರಿಗೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ಸಹ ನನ್ನ ಬಳಿ ಬಂದಿಲ್ಲʼ ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್: ವಾರಂಟ್
ʻರಾಹುಲ್ ಗಾಂಧಿ ವಿರುದ್ಧ ಎಕ್ಸ್ (ಟ್ವೀಟರ್) ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ನೋಟಿಸ್ ನೀಡುವುದಕ್ಕೆ ಕರ್ನಾಟಕದ ಹೈಗ್ರೌಂಡ್ ಠಾಣೆ ಪೊಲೀಸರಿಗೆ ಉತ್ತರ ಪ್ರದೇಶದಲ್ಲಿ ಅಡ್ಡಿಪಡಿಸಿದ ಬಗ್ಗೆ ಮಾತನಾಡಿದ ಜಿ. ಪರಮೇಶ್ವರ್ ಅವರು, ಉತ್ತರ ಪ್ರದೇಶದ ನೋಯ್ಡಾಗೆ ಕರ್ನಾಟಕದ ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು. ಅಲ್ಲಿನ ಪೊಲೀಸರಿಗೆ ಮುಂಚಿತವಾಗಿ ತಿಳಿಸಬೇಕಿತ್ತು. ಅಲ್ಲಿಗೆ ಹೋದ ನಂತರ ತಿಳಿಸಿದ್ದಾರೆ. ಅಲ್ಲಿನ ಪೊಲೀಸರ ಸಹಾಯ ಪಡೆದು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗದೇ ಇದ್ದರೆ, ವಾರಂಟ್ ಜಾರಿ ಮಾಡಿ ಬಂಧಿಸುತ್ತಾರೆʼ ಎಂದರು.
ʻಕರ್ನಾಟಕ ಸೇರಿದಂತೆ ಎಂಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಕುರಿತ ವರದಿಗೆ ಸಮಿತಿ ರಚನೆಯ ಬಗ್ಗೆ ಮಾತನಾಡಿ, ಕರ್ನಾಟಕದ ಬಗ್ಗೆ ಎಐಸಿಸಿ ಮಟ್ಟದಲ್ಲಿ ಬೇರೆಯೇ ನಿರೀಕ್ಷೆ ಇತ್ತು. 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಅವರು ಹೈಕಮಾಂಡ್ಗೆ ತಿಳಿಸಿದ್ದರು. ಅದು ಆಗಲಿಲ್ಲ. ಯಾವ ಕಾರಣಕ್ಕಾಗಿ ಹೀಗಾಗಿದೆ, ನಮ್ಮ ಸರ್ಕಾರ ಇದ್ದಾಗಿಯೂ ಇಷ್ಟು ಸ್ಥಾನ ಕಡಿಮೆಯಾಗಿದೆಯಲ್ಲ ಎಂದು ನಿಖರವಾದ ಕಾರಣವನ್ನು ಕಂಡುಕೊಳ್ಳಬೇಕಿದೆ. ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆʼ ಎಂದು ವಿವರಿಸಿದರು.