Loksabha Election 2024 | 28 ಚುನಾವಣಾ ಕಣ ಸಿದ್ಧ: ಎಲ್ಲಿ ಯಾರ್ಯಾರು ಮುಖಾಮುಖಿ?

ಕಾಂಗ್ರೆಸ್ ಬಾಕಿ ಉಳಿಸಿಕೊಂಡಿರುವ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 24 ಕ್ಷೇತ್ರಗಳ ಚುನಾವಣಾ ಕಣ ಸ್ಪಷ್ಟವಾಗಿದೆ. ಎದುರಾಳಿಗಳು ಯಾರು? ಯಾರು ಯಾರ ವಿರುದ್ಧ ಕಣದಲ್ಲಿ ತೊಡೆತಟ್ಟಿದ್ದಾರೆ ಎಂಬ ಸಂಗತಿಗಳು ಖಚಿತವಾಗಿವೆ.;

Update: 2024-03-29 10:32 GMT

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಚುನಾವಣಾ ಕಣದ ಚಿತ್ರಣ ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್ ಡಿಎ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಕಾಂಗ್ರೆಸ್ ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.

ರಾಜ್ಯದ ಮೊದಲ ಹಂತದ ಮತದಾನ ನಡೆಯಲಿರುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಪೈಕಿ ಮೂರು ಮತ್ತು ಎರಡನೇ ಹಂತದ ಮತದಾನ ನಡೆಯಲಿರುವ ಉತ್ತರಕರ್ನಾಟಕದ ಒಂದು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮವಾಗಿಲ್ಲ. ದಕ್ಷಿಣ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಕಾಂಗ್ರೆಸ್ನಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಇನ್ನು ಉತ್ತರಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೂಡ ಅಂತಿಮವಾಗಿಲ್ಲ. ಗಮನಾರ್ಹ ಸಂಗತಿ ಎಂದರೆ, ಬಾಕಿ ಇರುವ ಈ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಮೀಸಲು ಕ್ಷೇತ್ರಗಳು. ಕೋಲಾರ ಕ್ಷೇತ್ರದ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಭಾರೀ ಪೈಪೋಟಿ, ಅಸಮಾಧಾನ ಭುಗಿಲೆದ್ದಿದ್ದು, ಸಚಿವರು, ಶಾಸಕರ ರಾಜೀನಾಮೆಯ ಹಂತಕ್ಕೂ ಬಿಕ್ಕಟ್ಟು ಮುಂದುವರಿದಿದೆ.

ಈ ನಡುವೆ, ತನ್ನ ಪಾಲಿನ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ ಮತ್ತು ಕೋಲಾರಕ್ಕೆ ಅಭ್ಯರ್ಥಿ ಅಂತಿಮಗೊಳಿಸಲು ಸಾಕಷ್ಟು ಸಮಯ ತೆಗೆದುಕೊಂಡ ಎನ್ ಡಿಎ ಮೈತ್ರಿಪಕ್ಷ ಜೆಡಿಎಸ್, ಕೊನೆಗೂ ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕೋಲಾರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ನಾಯಕ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಅಂತಿಮಗೊಳಿಸಿದೆ.

ಆ ಮೂಲಕ ಕಾಂಗ್ರೆಸ್ ಬಾಕಿ ಉಳಿಸಿಕೊಂಡಿರುವ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 24 ಕ್ಷೇತ್ರಗಳ ಚುನಾವಣಾ ಕಣ ಸ್ಪಷ್ಟವಾಗಿದೆ. ಎದುರಾಳಿಗಳು ಯಾರು? ಯಾರು ಯಾರ ವಿರುದ್ಧ ಕಣದಲ್ಲಿ ತೊಡೆತಟ್ಟಿದ್ದಾರೆ ಎಂಬ ಸಂಗತಿಗಳು ಖಚಿತವಾಗಿವೆ. ಶಿವಮೊಗ್ಗ ಸೇರಿದಂತೆ ಒಂದೆರಡು ಕಡೆ ಬಿಜೆಪಿಗೆ ಪ್ರಬಲ ನಾಯಕರ ಬಂಡಾಯದ ಬಿಸಿ ತಟ್ಟುತ್ತಿದೆ. ಅದನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಈ ಬಾರಿ ಕಾಂಗ್ರೆಸ್ ವರ್ಸಸ್ ಎನ್ ಡಿಎ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಕ್ಷೇತ್ರವಾರು ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ.

ಚಿಕ್ಕೋಡಿಯಲ್ಲಿ ಬಿಜೆಪಿಯ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಪ್ರಿಯಾಂಕಾ ಅವರಿಗೆ ಇದು ಮೊದಲ ಚುನಾವಣೆ.

ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣಕ್ಕಿಳಿದಿದ್ದು, ಕಾಂಗ್ರೆಸ್ ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಗಿಳಿದಿದ್ದಾರೆ. ಮೃಣಾಲ್ ಕೂಡ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಜಗದೀಶ್ ಶೆಟ್ಟರ್ಗೆ ಕ್ಷೇತ್ರ ಹೊಸದಾದರೆ, ಮೃಣಾಲ್ ಗೆ ಚುನಾವಣೆಯೇ ಹೊಸದು. ಅಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಪಿ ಸಿ ಗದ್ದಿಗೌಡರ್ ಅವರು ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ವಿರುದ್ಧವೂ ಕಾಂಗ್ರೆಸ್ ಹೊಸ ಮುಖವನ್ನು ಕಣಕ್ಕಿಳಿಸಿದ್ದು, ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ್ದಾರೆ. ಗದ್ದಿಗೌಡರ್ ಅವರಂಥ ಹಳೆಯ ಹುಲಿ ಎದುರು ಸಂಯುಕ್ತಾ ಯುವ ನಾಯಕಿಯಾಗಿ ಸೆಣೆಸುತ್ತಿದ್ದಾರೆ.

ವಿಜಯಪುರ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ನಿಂದ ರಾಜು ಅಲಗೂರು ಕಣದಲ್ಲಿದ್ದಾರೆ.

ಕಲಬುರಗಿ ಎಸ್ ಸಿ ಮೀಸಲು ಕ್ಷೇತ್ರದಿಂದ ಹಾಲಿ ಸಂಸದ ಉಮೇಶ್ ಜಾಧವ್ ಅವರೇ ಬಿಜೆಪಿಯ ಹುರಿಯಾಳಾಗಿದ್ದಾರೆ. ಅವರ ಎದುರು ಕಾಂಗ್ರೆಸ್ಸಿನ ಹೊಸ ಮುಖ, ಮಲ್ಲಿಕಾರ್ಜುನ ಖರ್ಗೆ ಅವರ ಸಂಬಂಧಿ ರಾಧಾಕೃಷ್ಣ ದೊಡ್ಮನಿ ಕಣಕ್ಕಿಳಿದಿದ್ದಾರೆ.

ರಾಯಚೂರು ಎಸ್ ಟಿ ಮೀಸಲು ಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಕಾಂಗ್ರೆಸ್ ಜಿ ಕುಮಾರ ನಾಯ್ಕ ಅವರನ್ನು ಕಣಕ್ಕಿಳಿಸಿದೆ.

ಬೀದರ್ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಭಗವಂತ ಖೂಬಾ ಬಿಜೆಪಿಯ ಅಭ್ಯರ್ಥಿಯಾಗಿದ್ದರೆ, ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಕಾಂಗ್ರೆಸ್ ಹುರಿಯಾಳಾಗಿದ್ದಾರೆ. ಸಾಗರ್ ಅವರಿಗೆ ಇದು ಮೊದಲ ಚುನಾವಣೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬದಲಾಗಿ ಡಾ ಬಸವರಾಜ ಕ್ಯಾವಟೂರು ಅವರನ್ನು ಕಣಕ್ಕಿಳಿಸಿದೆ. ರಾಜಶೇಖರ್ ಹಿಟ್ನಾಳ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಳ್ಳಾರಿ ಎಸ್ ಟಿ ಮೀಸಲು ಕ್ಷೇತ್ರದಿಂದ ಬಿಜೆಪಿಯ ಪ್ರಮುಖ ನಾಯಕ ಬಿ ಶ್ರೀರಾಮುಲು ಕಣಕ್ಕಿಳಿದಿದ್ದಾರೆ. ಅಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಕ್ಷೇತ್ರದಲ್ಲಿ ಅವರ ವಿರುದ್ಧ ಕಾಂಗ್ರೆಸ್ ಇನ್ನೂ ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.

ಹಾವೇರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಬದಲಾಗಿ ಬಿಜೆಪಿ ಈ ಬಾರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ಸಿನ ಆನಂದ ಗಡ್ಡದೇವರ ಮಠ ಕಣದಲ್ಲಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಹಾಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಣದಲ್ಲಿದ್ದು, ಅವರ ವಿರುದ್ಧ ಕಾಂಗ್ರೆಸ್, ಹೊಸ ಮುಖ ವಿನೋದ್ ಅಸೂಟಿ ಕಣದಲ್ಲಿದ್ದಾರೆ.

ಕಾರವಾರ(ಉತ್ತರಕನ್ನಡ) ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಈ ಬಾರಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ನಿರಾಕರಿಸಿ, ಮಾಜಿ ಸಚಿವ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಇಬ್ಬರು ಮಹಿಳೆಯರ ಹಣಾಹಣಿ ನಡೆಯುತ್ತಿದೆ. ಬಿಜೆಪಿ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಅವರ ಬದಲಾಗಿ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನುಕಣಕ್ಕಿಳಿಸಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದ ಬಿ ವೈ ರಾಘವೇಂದ್ರ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣದಲ್ಲಿದ್ದಾರೆ. ಗೀತಾ ಈ ಮೊದಲು ಜೆಡಿಎಸ್ ಅಭ್ಯರ್ಥಿಯಾಗಿ ರಾಘವೇಂದ್ರ ವಿರುದ್ಧ ಕಣಕ್ಕಿಳಿದು ಸೋಲು ಕಂಡಿದ್ದರು. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದೆ ಶೋಭಾ ಅವರ ಬದಲಾಗಿ ಬಿಜೆಪಿ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ಮಾಜಿ ಸಂಸದ ಜಯಪ್ರಕಾಶ್ ಹೆಡ್ಡೆ ಅವರ ಎದುರಾಳಿಯಾಗಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಎದುರಾಳಿಯಾಗಿ ಕಾಂಗ್ರೆಸ್ನಿಂದ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ.

ದಕ್ಷಿಣಕನ್ನಡ ಕ್ಷೇತ್ರದಿಂದ ಹಾಲಿ ಸಂಸದ, ಬಿಜೆಪಿ ನಿಟಕಪೂರ್ವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ, ಹೊಸ ಮುಖ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ನ ಪದ್ಮರಾಜ್ ಕಣಕ್ಕಿಳಿದಿದ್ದಾರೆ.

ಚಿತ್ರದುರ್ಗ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಸಚಿವ ಎಂ ಗೋವಿಂದ ಕಾರಜೋಳ ಕಣದಲ್ಲಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಕಣದಲ್ಲಿದ್ದಾರೆ. ಹಾಲಿ ಸಂಸದ, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಬಿಜೆಪಿ, ಟಿಕೆಟ್ ನಿರಾಕರಿಸಿದೆ.

ತುಮಕೂರು ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಬಸವರಾಜು ಅವರ ಬದಲಾಗಿ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನ ಮಾಜಿ ಸಂಸದ ಎಸ್ ಪಿ ಮುದ್ದುಹನುಮೇಗೌಡ ಅವರ ಎದುರಾಳಿಯಾಗಿ ಕಣದಲ್ಲಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಅವರ ಎದುರಾಳಿಯಾಗಿ ಕಾಂಗ್ರೆಸ್ಸಿನ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಕಣದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲದೊಂದಿಗೆ ಗೆಲುವು ಪಡೆದಿದ್ದ ಹಾಲಿ ಸಂಸದೆ ಸುಮಲತಾ ಈ ಬಾರಿ ಚುನಾವಣಾ ಕಣದಿಂದ ಹೊರಗಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಾಗಿ ಅಲ್ಲಿ ಮೈಸೂರು ರಾಜ ಮನೆತನದ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರ ಎದುರಾಳಿಯಾಗಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಕಣದಲ್ಲಿದ್ದಾರೆ.

ಚಾಮರಾಜನಗರ ಎಸ್ ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಮಾಜಿ ಶಾಸಕ ಎಸ್ ಬಾಲರಾಜ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಎದುರಾಳಿ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಿಸಿಲ್ಲ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಖ್ಯಾತ ವೈದ್ಯ, ಎಚ್ ಡಿ ದೇವೇಗೌಡರ ಅಳಿಯ ಡಾ ಸಿ ಎನ್ ಮಂಜುನಾಥ್ ಕಣದಲ್ಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ನ ಹಾಲಿ ಸಂಸದ ಡಿ ಕೆ ಸುರೇಶ್ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಾಗಿ ಉಡುಪಿ ಚಿಕ್ಕಮಗಳೂರು ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಪ್ರೊ. ರಾಜೀವ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಪಿ ಸಿ ಮೋಹನ್ ಅವರನ್ನೇ ಬಿಜೆಪಿ ಮತ್ತೊಮ್ಮೆ ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ಮನ್ಸೂರ್ ಅಲಿ ಖಾನ್ ಅವರ ಎದುರಾಳಿಯಾಗಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ನಿಂದ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಬಿ ಎನ್ ಬಚ್ಚೇಗೌಡ ಬದಲಿಗೆ ಬಿಜೆಪಿ ಮಾಜಿ ಸಚಿವ ಡಾ ಕೆ ಸುಧಾಕರ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ.

ಕೋಲಾರ ಎಸ್ ಸಿ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಹಾಲಿ ಸಂಸದ ಮುನಿಸ್ವಾಮಿ ಅವರ ಬದಲಾಗಿ ಜೆಡಿಎಸ್ನ ಆರ್ ಸಿ ಮಲ್ಲೇಶ್ ಬಾಬು ಅವರು ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ.

Tags:    

Similar News