ಬೀದರ್ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ ಸಿಬ್ಬಂದಿ ಮನೆ ಸೇರಿದಂತೆ 67 ಕಡೆ ಲೋಕಾಯುಕ್ತ ದಾಳಿ

ಬೀದರ್‌ನಲ್ಲಿ ಒಟ್ಟು 25 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ವಿಶ್ವವಿದ್ಯಾಲಯದ ಪ್ರೊಫೆಸರ್, ಎಂಜಿನಿಯರ್ಸ್‌ ಸೇರಿ ಸಿಬ್ಬಂದಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.;

Update: 2025-09-10 04:50 GMT

ಕರ್ನಾಟಕ ಲೋಕಾಯುಕ್ತ

Click the Play button to listen to article

ಬೀದರ್‌ನ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಸಿಬ್ಬಂದಿ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೀದರ್‌ನಲ್ಲಿ ಒಟ್ಟು 25 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಎಂಜಿನಿಯರ್‌ಗಳು ಸೇರಿದಂತೆ ಸಿಬ್ಬಂದಿಯ ಮನೆಗಳ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಲೋಕಾಯುಕ್ತ ದಾಳಿ?

ಬೀದರ್ ಜಿಲ್ಲೆಯ 24, ಬೆಂಗಳೂರಿನ 31, ಕೊಪ್ಪಳ 2, ಚಿಕ್ಕಮಗಳೂರು ಜಿಲ್ಲೆಯ 2 ಹಾಗೂ ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 67 ಕಡೆಗಳಲ್ಲಿ 69 ತಂಡಗಳಿಂದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವವಿದ್ಯಾಲಯದಲ್ಲಿ 2017-19ರವರೆಗೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು 2021ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ತನಿಖೆ ವೇಳೆ ಸುಮಾರು 28 ಕೋಟಿ ರೂ. ಅವ್ಯವಹಾರ ಬಯಲಿಗೆ ಬಂದಿದೆ ಎಂದು ವರದಿಯಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೆಲವು ಉದ್ಯಮ ಸಂಸ್ಥೆಗಳೊಂದಿಗೆ ಶಾಮೀಲಾಗಿ ಪೀಠೋಪಕರಣ ಹಾಗೂ ಸ್ಟೇಷನರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಹಣ ವರ್ಗಾವಣೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ವಿಶ್ವವಿದ್ಯಾಲಯದ ಸಿಬ್ಬಂದಿ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬಿಕರ್ ಮತ್ತು ಐಜಿಪಿ ಸುಬ್ರಮಣ್ಯ ರಾವ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Tags:    

Similar News