ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಲೋಕಾಯುಕ್ತರ ಖಡಕ್‌ ಆದೇಶ

ಮಹಾನಗರದಲ್ಲಿ ಕೆರೆ ಒತ್ತುವರಿ ಕುರಿತು ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಮಂಗಳವಾರ ನಗರದ ಎರಡು ಕೆರೆಗಳ ಪರಿಶೀಲನೆ ನಡೆಸಿ, ಒತ್ತುವರಿ ತೆರವು ಮಾಡಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.;

Update: 2024-08-21 06:13 GMT
ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಲೋಕಾಯುಕ್ತರ ಖಡಕ್‌ ಆದೇಶ
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ನಗರದಲ್ಲಿ ಕೆರೆ ಒತ್ತುವರಿ ಹಾಗೂ ಕೆರೆಗಳ ಅವ್ಯವಹಾರ ಕುರಿತು ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಮಂಗಳವಾರ ನಗರದ ಎರಡು ಕೆರೆಗಳ ಪರಿಶೀಲನೆ ನಡೆಸಿ, ಒತ್ತುವರಿ ತೆರವು ಮಾಡಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆರೆ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಹಲವು ಬಾರಿ ನೋಟಿಸ್ ಕಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ನಾವು ಇಂದು ಎರಡು ಕೆರೆಗಳನ್ನು ಪರಿಶೀಲಿಸಿದ್ದೇವೆ. ನಮ್ಮ ಪ್ರಶ್ನೆಗಳಿಗೆ ನಿಗದಿತ ಸಮಯದೊಳಗೆ ಪ್ರತಿಕ್ರಿಯಿಸಲು ಮತ್ತು ಒತ್ತುವರಿ ತೆರವು ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಾಲಕಾಲಕ್ಕೆ ವರದಿಗಳನ್ನು ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.

ಕೆರೆಯಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ದಟ್ಟವಾಗಿ ಬೆಳೆದಿದ್ದು, ಕೇವಲ ಶೇ. 20ರಷ್ಟು ಮಾತ್ರ ನೀರು ತುಂಬುತ್ತಿದೆ. ರಾಜಕಾಲುವೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಅಕ್ರಮಗಳನ್ನು ಕಣ್ಣಾರೆ ಕಂಡ ಲೋಕಾಯುಕ್ತರು ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭಾರೀ ಮಳೆಯ ನಂತರವೂ ವಿಭೂತಿಪುರ ಕೆರೆ ಶೇ.20 ರಷ್ಟು ಮಾತ್ರ ತುಂಬಿದ್ದು, ಅಧಿಕಾರಿಗಳು ಈ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿಲ್ಲ ಎಂದು ಹೇಳುವ ಮೂಲಕ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸುಮಾರು 135 ಎಕರೆ ವ್ಯಾಪ್ತಿಯ ದೊಡ್ಡಾನೆಕುಂದಿ ಕೆರೆ ಪ್ರದೇಶದಲ್ಲಿ ಎರಡು ಎಕರೆ ಆರು ಗಂಟೆ ಭೂ ಒತ್ತುವರಿದಾರರ ಪಾಲಾಗಿದೆ ಎಂದು ಖುದ್ದು ಸರ್ವೆ ಅಧಿಕಾರಿಗಳು ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ಒತ್ತುವರಿ ಪ್ರದೇಶದಲ್ಲಿ ಬಲಾಢ್ಯರು ಅಪಾರ್ಟ್ಮೆಂಟ್, ವಿಲ್ಲಾಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಲೋಕಾಯುಕ್ತರಿಗೆ ವಿವರಿಸಿದರು. ಒತ್ತುವರಿ ತೆರವು ಮಾಡುವುದಲ್ಲದೆ, ಕೆರೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹೂಳು ತೆಗೆಯಲು ಲೋಕಾಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯರ ದೂರುಗಳ ಆಧಾರದ ಮೇಲೆ ಕೆರೆಗಳ ಭದ್ರತೆಯನ್ನು ಸುಧಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ವಿಭೂತಿಪುರ ಕೆರೆ ಮತ್ತು ದೊಡ್ಡಾನೆಕುಂದಿ ಕೆರೆಗಳ ಎರಡೂ ಕಾಮಗಾರಿಗಳ ಪ್ರಗತಿ ಕುರಿತು ಲೋಕಾಯುಕ್ತರು ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ವಿವರವಾದ ವರದಿ ಕೇಳಿದ್ದಾರೆ.

Tags:    

Similar News