Loksabha Election 2024 | ಬಿಜೆಪಿ ಟಿಕೆಟ್‌: ಯಡಿಯೂರಪ್ಪ ಮೇಲುಗೈ, ಬಿ ಎಲ್‌ ಸಂತೋಷ್‌ ಬೆಂಬಲಿಗರಿಗೆ ಹಿನ್ನಡೆ

ಹಲವು ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿ

Update: 2024-03-13 15:18 GMT

ಲೋಕಸಭೆ ಚುನಾವಣೆಗೆ ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಿಸಿದ್ದು, ಬಿ.ಎಸ್‌. ಯಡಿಯೂರಪ್ಪ ಅವರ ಬಣ ಮೇಲುಗೈ ಸಾಧಿಸಿದೆ.

ಅಲ್ಲದೇ ಪಟ್ಟಿಯಲ್ಲಿ ಹಲವು ಅಚ್ಚರಿಗಳು ಸಹ ಇವೆ. ಹಾಲಿ ಸಂಸದರಾದ, ಪ್ರತಾಪ ಸಿಂಹ, ಸಂದಾನಂದ ಗೌಡ, ಸಂಗಣ್ಣ ಕರಡಿ, ಶಿವಕುಮಾರ ಉದಾಸಿ, ಜಿ.ಎಸ್‌ ಬಸವರಾಜು, ನಳಿನ್‌ ಕುಮಾರ್‌ ಕಟೀಲ್‌, ದೇವೇಂದ್ರಪ್ಪ ಹಾಗೂ ಜಿ.ಎಂ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿದೆ. ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಮೇಲೆ ಬಿಜೆಪಿಯಲ್ಲಿ ಮತ್ತೆ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಶಕ್ತಿ ಬಂದಿತ್ತು. ಅದು 2024ರ ಲೋಕಸಭೆ ಚುನಾವಣೆಯ ಟಿಕೆಟ್‌ ಘೋಷಣೆಯಲ್ಲೂ ಮುಂದುವರಿದಿದೆ.

ಬಿ ಎಲ್‌ ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆಗಳನ್ನು ಅನುಭವಿಸಿದ್ದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಸಿ ಟಿ ರವಿಗೆ ತೀವ್ರ ಹಿನ್ನಡೆಯಾಗಿದ್ದು, ಇಬ್ಬರೂ ಟಿಕೆಟ್‌ ವಂಚಿತರಾಗಿದ್ದಾರೆ. ಹಾಗೇ ಮೈಸೂರು ಸಂಸದ ಪ್ರತಾಪ ಸಿಂಹ ಕೂಡ ಬಿ ಎಲ್‌ ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡಿದ್ದು, ಅವರಿಗೂ ಟಿಕೆಟ್‌ ಕೈತಪ್ಪಿದೆ.

ಹಾಲಿ ಸಂಸದರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಬಹುತೇಕ ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಳೆದ ಬಾರಿ ನಡೆದ ಕರ್ನಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಆದರೆ, ಬಿಪಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಅದರಿಂದ ಪಾಠ ಕಲಿತಿರುವಂತೆ ಈ ಬಾರಿ ಹಾಲಿ ಸಂಸದರಿಗೆ ಮಣೆ ಹಾಕಲಾಗಿದೆ. ಹಾಲಿ 10 ಜನ ಸಂಸದರಿಗೆ ಟಿಕೆಟ್‌ ಸಿಕ್ಕಂತಾಗಿದೆ. 10 ಜನ ಹೊಸಬರಿಗೆ ಮಣೆ ಹಾಕಲಾಗಿದೆ.

ಹಾಲಿ ಸಂಸದರಿಗೆ ಮತ್ತೆ ಟಿಕೆಟ್‌

ಚಿಕ್ಕೋಡಿ: ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ, ಬಾಗಲಕೋಟೆ: ಪಿ.ಸಿ ಗದ್ದಿಗೌಡರ, ಬಿಜಾಪುರ: ರಮೇಶ ಜಿಗಜಿಣಗಿ, ಕಲಬುರಗಿ: ಡಾ. ಉಮೇಶ್ ಜಾಧವ್, ಬೀದ‌ರ್: ಭಗವಂತ ಖೂಬಾ, ಧಾರವಾಡ: ಪ್ರಲ್ಲಾದ ಜೋಶಿ, ಶಿವಮೊಗ್ಗ: ಬಿ.ವೈ ರಾಘವೇಂದ್ರ, ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್ ಹಾಗೂ ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ ಅವರಿಗೆ ಮತ್ತೆ ಬಿಜೆಪಿ ಟಿಕೆಟ್‌ ಸಿಕ್ಕಿದೆ.

ಅರ್ಧದಷ್ಟು ಹೊಸಬರಿಗೆ ಮಣೆ

ಕೊಪ್ಪಳ: ಬಸವರಾಜ ಕ್ಯಾವತ್ತೂರ, ಬಳ್ಳಾರಿ: ಶ್ರೀರಾಮುಲು, ಹಾವೇರಿ: ಬಸವರಾಜ ಬೊಮ್ಮಾಯಿ, ದಾವಣಗೆರೆ: ಗಾಯತ್ರಿ ಸಿದ್ದೇಶ್ವರ, ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ: ಕ್ಯಾ.ಬ್ರಿಜೇಶ್ ಚೌಟ, ತುಮಕೂರು: ವಿ. ಸೋಮಣ್ಣ, ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ: ಎಸ್. ಬಾಲರಾಜ್ ಹಾಗೂ ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್ ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಫಲ ಕೊಟ್ಟ ಶೋಭಾ ಗೋಬ್ಯಾಕ್‌ ?

ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಾರದು ಎಂದು ಕ್ಷೇತ್ರದಲ್ಲಿ ನಡೆದ ʼಗೋ ಬ್ಯಾಕ್‌ ಶೋಭಾʼ ಅಭಿಯಾನ ಕೊನೆಗೂ ಫಲಕೊಟ್ಟಿದೆ. ಇದೇ ಸಂದರ್ಭದಲ್ಲಿ ಕ್ಷೇತ್ರದಿಂದ ಲೋಕಸಭಾ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೂ ಟಿಕೆಟ್‌ ಸಿಕ್ಕಿಲ್ಲ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಈ ಕ್ಷೇತ್ರದ ಟಿಕೆಟ್‌ ಕೋಟಾ ಶ್ರೀನಿವಾಸ ಪೂಜಾರಿ ಪಾಲಾಗಿದೆ.

Tags:    

Similar News