ಪರವಾನಗಿ ದರ ಏರಿಕೆ | ಮೇ 29 ರಿಂದ ಅನಿರ್ದಿಷ್ಟಾವಧಿವರೆಗೆ ಮದ್ಯದಂಗಡಿ ಬಂದ್‌

ಪರವಾನಗಿ ದರ ಶೇ 100 ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಮದ್ಯದಂಗಡಿ ಮಾಲೀಕರು ಮೇ 29 ರಿಂದ ಮದ್ಯ ಮಾರಾಟ ಬಂದ್‌ ಮಾಡಲು ತೀರ್ಮಾನಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಮೇ 26 ರಂದು ಮದ್ಯ ಮಾರಾಟಗಾರರ ಸಂಘದ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.;

Update: 2025-05-24 06:43 GMT

ಸಾಂದರ್ಭಿಕ ಚಿತ್ರ

ಮದ್ಯದ ದರ ಹಾಗೂ ಪರವಾನಗಿ ಶುಲ್ಕ ಹೆಚ್ಚಳ ಖಂಡಿಸಿ ಮದ್ಯ ಮಾರಾಟಗಾರರು ಮೇ 29 ರಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್‌ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮೂರನೇ ಬಾರಿಗೆ ಮದ್ಯದ ಅಬಕಾರಿ ಸುಂಕ ಏರಿಕೆ ಮಾಡಿದೆ. ಈಗ ಪರವಾನಗಿ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಿದೆ. ಇದರಿಂದ ಮದ್ಯ ಮಾರಾಟಕ್ಕೆ ತೀವ್ರ ತೊಂದರೆಯಾಗಲಿದೆ. ಸರ್ಕಾರದ ದರ ಏರಿಕೆ ನೀತಿ ಖಂಡಿಸಿ ಮೇ 29 ರಿಂದ ಅನಿರ್ದಿಷ್ಟಾವಧಿವರೆಗೂ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಸಂಘ ತಿಳಿಸಿದೆ. 

ಮದ್ಯದಂಗಡಿ ಪರವಾನಗಿ ಶುಲ್ಕ ಹೆಚ್ಚಳ ವಿರೋಧಿಸಿ ಇತ್ತೀಚೆಗೆ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.

ಮೇ 29ರಿಂದ ಅನಿರ್ದಿಷ್ಟಾವಧಿವರೆಗೆ ಮದ್ಯ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ  ಸರ್ಕಾರವು ಮೇ 26ರಂದು ಮದ್ಯ ಮಾರಾಟಗಾರರ ಸಂಘದ ಜತೆಗೆ ಮಾತುಕತೆ ನಡೆಸಲು ತೀರ್ಮಾನಿಸಿದೆ. ಮಾತುಕತೆ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸದೇ  ಹೋದರೆ ಅನಿರ್ದಿಷ್ಟಾವಧಿವರೆಗೂ ಬಂದ್‌ ಮಾಡುವುದು ಶತಸಿದ್ಧ ಎಂದು ಮದ್ಯ ಮಾರಾಟಗಾರರು ಹೇಳಿದ್ದಾರೆ.  

ಲೈಸೆನ್ಸ್‌ ದರ ಎಷ್ಟಿದೆ ?

ಸಿಎಲ್‌-9 ಬಾರ್‌ ಅಂಡ್‌ ರೆಸ್ಟೋರೆಂಟ್‌ ಪರವಾನಗಿಗೆ ಈ ಹಿಂದೆ 8.62 ಲಕ್ಷ ರೂ. ಶುಲ್ಕವಿತ್ತು. ಇದೀಗ ಶುಲ್ಕವನ್ನು15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸೆಸ್‌ 2.25 ಲಕ್ಷ ರೂ. ಸೇರಿ ಒಟ್ಟು 17.25 ಲಕ್ಷ ರೂ. ಆಗಲಿದೆ. ಸಿಎಲ್‌ -6ಎ ಸ್ಟಾರ್‌ ಹೋಟೆಲ್‌ ಪರವಾನಗಿಗೆ 9.75 ಲಕ್ಷ ರೂ. ಶುಲ್ಕವಿತ್ತು. ಇದೀಗ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಸೆಸ್‌ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ. ಬ್ರೇವರಿಜ್‌ಗಳಿಗೆ ವಾರ್ಷಿಕ ಪರವಾನಗಿ ಶುಲ್ಕವನ್ನು 27 ಲಕ್ಷ ರೂ.ಗಳಿಂದ 54 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಡಿಸ್ಟಿಲ್ಲರಿ ಮತ್ತು ವೇರ್‌ಹೌಸ್‌ಗಳಿಗೆ 45 ಲಕ್ಷ ರೂ.ಗಳಿಂದ 90 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 

2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆ ಒಟ್ಟು 38,525 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಇದರಲ್ಲಿ 35,530 ಕೋಟಿ ರೂ. ಮಾತ್ರ ಸಂಗ್ರಹಿಸಿತ್ತು. ಈಗ ಸರ್ಕಾರ ತನ್ನ ಆದಾಯದ ಗುರಿ ಮುಟ್ಟಲು ಮದ್ಯದಂಗಡಿ ಮಾಲೀಕರ ಮೇಲೆ ಶುಲ್ಕದ ಭಾರ ಹೇರುವುದು ಸರಿಯಲ್ಲ. ಕಳೆದ ವರ್ಷ ಬೆಲೆ ಏರಿಕೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ಬೆಂಗಳೂರು ಒಂದರಲ್ಲೇ 40 ಪಬ್‌ಗಳನ್ನು ಮುಚ್ಚಲಾಗಿತ್ತು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ. 

Tags:    

Similar News