ಚಿರತೆ ದಾಳಿ ಪ್ರಕರಣ | ಸೆರೆ ಹಿಡಿಯುವವರೆಗೂ ಕದಲುವುದಿಲ್ಲ ಎಂದು ಅರಣ್ಯ ಇಲಾಖೆ
ಚಿರತೆ ದಾಳಿಗೆ ಬಲಿಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಕಂಬಾಳು ಗೊಲ್ಲರಹಟ್ಟಿಯ ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ಪರಿಹಾರ ಘೋಷಿಸಿದೆ. ಅಲ್ಲದೆ, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.
ಆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ನಿಜಾಮುದ್ದೀನ್, ಚಿರತೆ ದಾಳಿಗೆ ಬಲಿಯಾದ ಕರಿಯಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ಮಹಿಳೆ ಸಾವಿನ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಪೊಲೀಸರ ಜೊತೆ ಸ್ಥಳಕ್ಕೆ ಬಂದು ಮಹಿಳೆ ಶವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನವನದಿಂದ ಪಶು ವೈದ್ಯರನ್ನು ಕರೆಸಲಾಗುತ್ತಿದೆ. ಸ್ಥಳಕ್ಕೆ ಬರುವಂತೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರಿಗೂ ಮನವಿ ಮಾಡಿದ್ದೇವೆ. ಚಿರತೆ ಸೆರೆ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಅರವಳಿಕೆ ತಜ್ಞರೂ ತಂಡದಲ್ಲಿರುತ್ತಾರೆ. ಡ್ರೋನ್ ಕ್ಯಾಮರಾ ಕೂಡ ಬಳಸಲಾಗುವುದು. ಚಿರತೆ ಸೆರೆ ಹಿಡಿಯುವವರೆಗೂ ನಮ್ಮ ತಂಡ ಜಾಗ ಬಿಟ್ಟು ಕದಲುವುದಿಲ್ಲ ಎಂದೂ ಅವರು ನಾಗರಿಕರಿಗೆ ಆಶ್ವಾಸನೆ ನೀಡಿದ್ದಾರೆ.
ನೆಲಮಂಗಲ ಬಳಿಯ ಕಂಬಾಳು ಗೊಲ್ಲರಹಟ್ಟಿಯ ಮಹಿಳೆ ಕರಿಯಮ್ಮ(55) ಎಂಬುವರನ್ನು ಶನಿವಾರ ಚಿರತೆ ಬಲಿ ತೆಗೆದುಕೊಂಡಿದೆ. ಜಾನುವಾರುಗಳಿಗೆ ಮೇವು ತರಲು ಬೆಟ್ಟಕ್ಕೆ ಹೋಗಿದ್ದ ಅವರ ಮೇಲೆ ದಾಳಿ ನಡೆಸಿದ್ದ ಚಿರತೆ, ಅವರ ಬೆನ್ನು ಬಗೆದು, ರುಂಡ ಕತ್ತರಿಸಿಕೊಂಡು ಓಯ್ದಿತ್ತು. ಮಾರನೇ ದಿನ ಭಾನುವಾರ ಸಂಜೆ ಮಹಿಳೆಯ ಶವ ಪತ್ತೆಯ ಬಳಿಕ ಶವ ಸಂಸ್ಕಾರಕ್ಕೆ ಹೋದಾಗಲೂ ಚಿರತೆ ಜನರನ್ನು ಹಿಂಬಾಲಿಸಿ ಶವ ಎಳೆದೊಯ್ಯುವ ಪ್ರಯತ್ನ ನಡೆಸಿತ್ತು.
ನರಭಕ್ಷಕ ಚಿರತೆಯ ಈ ದಾಳಿಕೋರತನದಿಂದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಹಲವು ಸಲ ಮನವಿ ಮಾಡಿದರೂ ಚಿರತೆ ಸೆರೆ ಹಿಡಿದಿಲ್ಲ. ಮಹಿಳೆ ಸಾವು ಬಳಿಕ ಈಗ ಬಂದಿದ್ದೀರೆಂದು ಎಸಿಎಫ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಆ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಲು ಎಸಿಎಫ್, ಡಿಸಿಎಫ್, ಚಿರತೆ ಟಾಸ್ಕ್ ಫೋರ್ಸ್ ತಂಡ ಸಿದ್ದತೆ ನಡೆಸಿದೆ. ಈಗಾಗಲೇ ಗೊಲ್ಲರಹಟ್ಟಿಗೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿದ್ದು, ಚಿರತೆಯನ್ನು ಸೆರೆಹಿಡಿಯುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೇಳಿದ್ದಾರೆ.