ಅಗತ್ಯ ಭೂಮಿ ಕೋರಿದ ಲೆನ್ಸ್ ಕಾರ್ಟ್ : 'ಎಕ್ಸ್' ಪೋಸ್ಟ್‌ಗೆ ಮಿಂಚಿನ ವೇಗದಲ್ಲಿ ಪ್ರತಿಕ್ರಿಯಿಸಿದ ಸಚಿವ

'ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಕೈಗಾರಿಕಾ ಸಚಿವ ಡಾ ಎಂ ಬಿ ಪಾಟೀಲ್‌ ಪ್ರತಿಕ್ತಿಯಿಸಿದ್ದಾರೆ;

Update: 2024-04-09 14:12 GMT
ಸಚಿವ ಎಂ ಬಿ ಪಾಟೀಲ
Click the Play button to listen to article

ಬೆಂಗಳೂರು: ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ.ಮೀ. ಆಸುಪಾಸಿನಲ್ಲಿ ತಮ್ಮ ಉದ್ಯಮ ಘಟಕ ಸ್ಥಾಪಿಸಲು 25 ಎಕರೆ ಭೂಮಿ ಅಗತ್ಯವಿದೆ ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಲೆನ್ಸ್ ಕಾರ್ಟ್ ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೇವಲ ಐದು ನಿಮಿಷಗಳಲ್ಲಿ ಸ್ಪಂದಿಸಿ, ಗಮನ ಸೆಳೆದಿದ್ದಾರೆ.

ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪಿಯೂಷ್ ಬನ್ಸಾಲ್ ಅವರು 'ಎಕ್ಸ್'ನಲ್ಲಿ ತಮ್ಮ ಅಗತ್ಯದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು.

ಇದನ್ನು ಗಮನಿಸಿದ ಸಚಿವ ಎಂ ಬಿ ಪಾಟೀಲ ಕೂಡಲೇ ಕಾರ್ಯಪ್ರವೃತ್ತರಾಗಿ, 'ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನೀವು ಇರಬೇಕಾದ ಜಾಗ ಕರ್ನಾಟಕ!' ಎಂದು ಮರುಪೋಸ್ಟ್ ಮಾಡಿ, ಭರವಸೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಅವರು ಅಗತ್ಯ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ.

ಸಚಿವರ ಈ ನಡೆಗೆ 'ಎಕ್ಸ್'ನಲ್ಲಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನೇ ದೊಡ್ಡದು ಮಾಡಿ ಇತ್ತೀಚೆಗೆ ಕೇರಳ ಸರ್ಕಾರ, ಬೆಂಗಳೂರಿನ ಉದ್ಯಮಗಳನ್ನು ತನ್ನ ರಾಜ್ಯಕ್ಕೆ ಸೆಳೆಯುವ ಯತ್ನ ಮಾಡಿತ್ತು. ನೆರೆಯ ಕೇರಳದ ಅಂತಹ ಯತ್ನವನ್ನು ಸಚಿವ ಎಂ ಬಿ ಪಾಟೀಲ್‌, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿ, ಬೆಂಗಳೂರಿನ ಉದ್ಯಮಗಳನ್ನು ಉಳಿಸಿಕೊಳ್ಳಲು ಮತ್ತು ಉದ್ಯಮಗಳಿಗೆ ಬೇಕಾದ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದ್ದರು. 

ಅದಾದ ಬೆನ್ನಲ್ಲೇ, ಲೆನ್ಸ್‌ ಕಾರ್ಟ್‌ ಸಂಸ್ಥೆಯ ಭೂಮಿ ಬೇಡಿಕೆಗೆ ಜಾಲತಾಣದ ಮೂಲಕವೇ ತ್ವರಿತವಾಗಿ ಪ್ರತಿಕ್ರಿಯಿಸಿರುವ ಸಚಿವರು, ಅಗತ್ಯ ಎಲ್ಲಾ ಸೌಲಭ್ಯ ಒದಗಿಸುವ ಮಾತುಕೊಟ್ಟಿದ್ದಷ್ಟೇ ಅಲ್ಲದೆ, ನೀವು ಇರಬೇಕಾದ ಜಾಗ ಕರ್ನಾಟಕ ಎಂದು ಹೇಳುವ ಮೂಲಕ ಕರ್ನಾಟಕ ಸರ್ಕಾರ ಉದ್ಯಮ ಚಟುವಟಿಕೆಗೆ ಸದಾ ಬೆಂಬಲವಾಗಿರುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ.

Tags:    

Similar News