ವಿಧಾನಮಂಡಲ ಅಧಿವೇಶನ | ಹಗರಣಗಳ ಅಸ್ತ್ರದೊಂದಿಗೆ ವಿಪಕ್ಷ ಅಖಾಡಕ್ಕೆ; ಸರ್ಕಾರದ ಪ್ರತ್ಯಾಸ್ತ್ರ ಸಜ್ಜು

ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಜ್ಜಾಗಿವೆ. ಸಾಲು-ಸಾಲು ಹಗರಣಗಳು, ವಿವಾದಾತ್ಮಕ ನಡೆಗಳು ವಿಪಕ್ಷಗಳ ಹೋರಾಟಕ್ಕೆ ಹೊಸ ಅಸ್ತ್ರ ಒದಗಿಸಿವೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಳೆಗಾಲದ ಈ ಅಧಿವೇಶನ, ಭಾರೀ ವಾಕ್ಸಮರ, ಹೋರಾಟದ ಕಾವಿಗೆ ಸಾಕ್ಷಿಯಾಗಲಿದೆ.;

Update: 2024-07-15 06:33 GMT

ಸೋಮವಾರದಿಂದ (ಜು.15) ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಜ್ಜಾಗಿವೆ. ಸಾಲು-ಸಾಲು ಹಗರಣಗಳು, ವಿವಾದಾತ್ಮಕ ನಡೆಗಳು ವಿಪಕ್ಷಗಳ ಹೋರಾಟಕ್ಕೆ ಹೊಸ ಅಸ್ತ್ರ ಒದಗಿಸಿವೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಳೆಗಾಲದ ಈ ಅಧಿವೇಶನ, ಭಾರೀ ವಾಕ್ಸಮರ, ಹೋರಾಟದ ಕಾವಿಗೆ ಸಾಕ್ಷಿಯಾಗಲಿದೆ.

ಈಗಾಗಲೇ ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಪಟ್ಟಿಯೊಂದಿಗೆ ಭರ್ಜರಿ ತಯಾರಿ ಮಾಡಿಕೊಂಡಿರುವ ವಿಪಕ್ಷಗಳು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿರುವ ಎಲ್ಲ ರಣತಂತ್ರಗಳನ್ನು ಹೆಣೆದಿವೆ. ಇದಕ್ಕೆ ತಿರುಗೇಟು ನೀಡುವುದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ತಾಲೀಮು ನಡೆಸಿದ್ದು, ವಿಪಕ್ಷಗಳ ಅಸ್ತ್ರಗಳೇನು, ಅದಕ್ಕೆ ಯಾವ ಪ್ರತ್ಯಾಸ್ತ್ರವನ್ನು, ಯಾರು ಹೂಡಬೇಕು, ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಸಚಿವರ ತಂಡವನ್ನು ಸಿದ್ಧಪಡಿಸಿದ್ದಾರೆ.

ಈಗಾಗಲೇ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ಹಗರಣ, ಮುಡಾ ಹಗರಣ, ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಹಣ ದುರುಪಯೋಗ, ಗ್ಯಾರಂಟಿ ಯೋಜನೆಗಳ ಅಸಮರ್ಪಕ ನಿರ್ವಹಣೆ ಸೇರಿದಂತೆ ಹತ್ತಾರು ಪ್ರಮುಖ ವಿವಾದಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿದ್ದು, ವಿಪಕ್ಷಗಳನ್ನು ಎದುರಿಸಲು ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿರುವ ಸಮಯದಲ್ಲೇ, ಇದೀಗ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರುವಾಗಿದೆ.

ಮುಡಾ ಅಕ್ರಮ ನಿವೇಶನ ಹಂಚಿಕೆ ವಿವಾದ ಸಿಎಂ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಂಡಿರುವುದರಿಂದ ಈ ವಿವಾದ ಸದನದಲ್ಲಿ ಭಾರೀ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಬಿಜೆಪಿಗೆ ಮತ್ತೊಂದು ಅಸ್ತ್ರ ಒದಗಿಸಿದೆ. ಅಧಿವೇಶನದ ಮೊದಲ ದಿನದಿಂದಲೇ ಸಮರ ಪ್ರಾರಂಭಿಸುವುದಕ್ಕೆ ವಿಪಕ್ಷಗಳು ಮುಂದಾಗಿವೆ.

ವಿಪಕ್ಷಗಳ ಅಸ್ತ್ರಗಳು

  • ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ
  • ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪ
  • ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ದುರ್ಬಳಕೆ, ಸೆಕ್ಷನ್‌ 7 (ಡಿ) ಬಗ್ಗೆ ಚರ್ಚೆ
  • ಫ‌ಲಾನುಭವಿಗಳಿಗೆ ತಲುಪದ ಗ್ಯಾರಂಟಿ ಹಣ, ರಾಜ್ಯದ ಅಭಿವೃದ್ಧಿಗೆ ಹಿನ್ನಡೆ
  • ನೇಹಾ ಹತ್ಯೆ ಸಹಿತ ಕಾನೂನು ಸುವ್ಯವಸ್ಥೆ ಕುಸಿತ
  • ಹಾಲಿನ ದರ ಏರಿಕೆ, ಪೆಟ್ರೋಲ್‌ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸೇರಿ ಒಟ್ಟಾರೆ ಬೆಲೆ ಏರಿಕೆ
  • ಮಳೆ ಅವಾಂತರ, ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗ ನಿಯಂತ್ರಣ ವೈಫಲ್ಯ
  • ಹೆಚ್ಚಿದ ರೈತರ ಆತ್ಮಹತ್ಯೆಗಳು

ಸರ್ಕಾರದ ಪ್ರತ್ಯಾಸ್ತ್ರ

  • ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಬದಲಿ ನಿವೇಶನ ಹಂಚಿಕೆ ಬಗ್ಗೆ ಬಿಎಸ್‌ವೈ ಮಾಡಿದ್ದ ಆರೋಪ
  • ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಗ್ಯಾರಂಟಿ ಯೋಜನೆ ಮೂಲಕ ಆ ವರ್ಗಕ್ಕೇ ಬಳಕೆ
  • ಗ್ಯಾರಂಟಿಯ ಪ್ರಯೋಜನಗಳನ್ನು ಬಿಚ್ಚಿಡಲು ಅಂಕಿ-ಅಂಶ ಸಿದ್ಧತೆ
  • ಕೇಂದ್ರ ಸರ್ಕಾರದ ಅನುದಾನ ನೀಡಿಕೆಯಲ್ಲಿ ರಾಜ್ಯಕ್ಕೆ ವಂಚನೆ
  • ಅಭಿವೃದ್ಧಿಗೂ ಬಜೆಟ್‌ನಲ್ಲಿ ಹಣ ಇಟ್ಟ ಬಗ್ಗೆ ಸಮರ್ಥನೆ
  • ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರಿಂದ ಉತ್ತರ
  • ಹೆಚ್ಚುವರಿ ಹಾಲಿಗೆ ಹೆಚ್ಚುವರಿ ಹಣ
  • ಕೇಂದ್ರ ಸರ್ಕಾರದ ಸಹಕಾರ ಇಲ್ಲದಿದ್ದರಿಂದ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆ ಹೆಚ್ಚಳ; ಅಬಕಾರಿ ಸುಂಕ ಕಡಿಮೆ ಮಾಡಲು ಕೇಂದ್ರದೆಡೆ ಬೊಟ್ಟು
Tags:    

Similar News