ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆ: ಪ್ರಯಾಣಿಕರ ಪರದಾಟ

5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಮಳೆ ನೀರು ಸೋರಿದೆ.

Update: 2024-05-11 06:44 GMT
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಮಳೆ ನೀರು ಸೋರಿದೆ.
Click the Play button to listen to article

ಬಿಸಿಲಿನ ಬೇಗೆಗೆ ದಣಿದಿದ್ದ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆಗಮಿಸಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಈ ಮಳೆಗೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಮಳೆ ನೀರು ಸೋರಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗುರುವಾರ ( ಮೇ 9) ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳು ಕಿರಿಕಿರಿ ಅನುಭವಿಸಿದರು.

ರಾತ್ರಿ ಸುರಿದ ಭಾರಿ ಮಳೆಗೆ ರನ್ ವೇ ಸ್ಪಷ್ಟವಾಗಿ ಕಾಣದ ಕಾರಣ 18ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಬೇರೆ ವಿಮಾನ ನಿಲ್ದಾಣಗಳಿಗೆ ಕಳಿಸಲಾಯಿತು. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರಯಾಣಿಕರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಪ್ರಧಾನಿಗೆ 'ಎಕ್ಸ್'ನಲ್ಲಿ ಈ ಘಟನೆಯನ್ನು ಟ್ಯಾಗ್ ಮಾಡಿರುವ ಡಿ.ರವಿ ಕುಮಾರ ಎಂಬುವರು, 'ಪ್ರಾಮಾಣಿಕತೆ ಕಣ್ಮರೆಯಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ವೇದಂ ಜಯಶಂಕರ್, 'ಆಳುವ ವರ್ಗ ಪಾರದರ್ಶಕ ಮತ್ತು ದಕ್ಷ ಆಗಿದ್ದರೆ ವಿಮಾನ ನಿಲ್ದಾಣ ನಿರ್ಮಿಸಿದ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ' ಎಂಬ ಪ್ರಶ್ನೆ ಎತ್ತಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2 (ಟಿ 2) 'ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ' ಒಂದೆಂದು ಗುರುತಿಸಲ್ಪಟ್ಟಿದ್ದು ಯುನೆಸ್ಕೋ ಗುರುತಿಸಿದ್ದು, ಟರ್ಮಿನಲ್ 2ರ ಒಳಾಂಗಣ ವಿನ್ಯಾಸಕ್ಕಾಗಿ “ವರ್ಲ್ಡ್‌ ಸ್ಪೆಷಲ್ ಪ್ರೈಝ್ ಫಾರ್ ಆನ್ ಇಂಟೀರಿಯರ್‌ 2023” ಎಂಬ ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

ಚೆನ್ನೈನಲ್ಲಿ ಇಳಿದ 15 ವಿಮಾನ

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾದ ಕಾರಣ ವಿಮಾನಗಳು ಇಳಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ 13 ದೇಶಿಯ ವಿಮಾನ ಮೂರು ಅಂತರರಾಷ್ಟ್ರೀಯ ವಿಮಾನ ಹಾಗೂ ಒಂದು ಅಂತರಾಷ್ಟ್ರೀಯ ಸರಕು ಸಾಗಣೆ ವಾಣಿಜ್ಯ ವಿಮಾನಗಳು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇಳಿದಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ವಕ್ತಾರರು ಮಾಹಿತಿ ನೀಡಿದ್ದಾರೆ.

Tags:    

Similar News