ಎಚ್‌ಡಿಕೆಗೆ ಬಿಗ್ ರಿಲೀಫ್: ಕೇತಗಾನಹಳ್ಳಿ ಭೂ ತನಿಖೆಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ತಡೆ

ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ಆದೇಶಕ್ಕೆ ಸುಪ್ರೀಂಕೋರ್ಟ್‌ ಎರಡು ವಾರಗಳ ಕಾಲ ತಡೆ ನೀಡಿದೆ. ಈ ಮೂಲಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.;

Update: 2025-09-15 14:44 GMT

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತನಿಖೆ ಮುಂದುವರಿಸಲು ತಹಶೀಲ್ದಾರ್‌ಗೆ ಅನುಮತಿ ನೀಡಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ಆದೇಶಕ್ಕೆ ಸುಪ್ರೀಂಕೋರ್ಟ್‌ ಎರಡು ವಾರಗಳ ಕಾಲ ತಡೆ ನೀಡಿದೆ. ಈ ಮೂಲಕ ಕೇಂದ್ರ  ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ. 

ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಎಚ್‌.ಡಿ.ಕುಮಾರಸ್ವಾಮಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.  ಇದರ ವಿಚಾರಣೆ ನಡೆಸಿದ ನ್ಯಾ.ಪಂಕಜ್‌ ಮಿತ್ತಲ್‌ ಮತ್ತು ನ್ಯಾ.ಪ್ರಸನ್ನ ವರಾಲೆ ಪೀಠವು ತಹಶೀಲ್ದಾರ್‌ ತನಿಖೆಗೆ ಎರಡು ವಾರಗಳ ತಡೆ ನೀಡಿದ ಆದೇಶಿಸಿದೆ. ಹಿರಿಯ ವಕೀಲರಾದ ಆರ್ಯಮ ಸುಂದರಂ, ಬಾಲಾಜಿ ಶ್ರೀನಿವಾಸನ್ ಮತ್ತು ಶ್ರೀ ನಿಶಾಂತ್ ಎ.ವಿ. ಅವರು ಕುಮಾರಸ್ವಾಮಿ ಪರವಾಗಿ ವಾದ ಮಂಡಿಸಿದರು. 

ಕೇತಗಾನಹಳ್ಳಿಯ ಸರ್ವೇ ನಂಬರ್‌ 8, 9, 10, 16, 17 ಮತ್ತು 79ರಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವ ಸಂಬಂಧ ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು. ಅಲ್ಲದೇ, ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸಂಬಂಧಿಸಿದ್ದರಿಂದ ತಹಶಿಲ್ದಾರ್‌ ಸಹ ತನಿಖೆ ನಡೆಸಿದ್ದರು.  ಇದರ ಆದೇಶ ರದ್ದು ಕೋರಿ ಎಚ್‌.ಡಿ. ಕುಮಾರಸ್ವಾಮಿ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠವು ಎಸ್‌ಐಟಿ ರಚನೆ ಮತ್ತು ತಹಶೀಲ್ದಾರ್ ಹೊರಡಿಸಿದ ನೋಟಿಸ್ ಎರಡಕ್ಕೂ ತಡೆಹಿಡಿದಿತ್ತು. ಎಸ್‌ಐಟಿ ರಚನೆಯೂ ಕಾಯ್ದೆಗೆ ಅನುಗುಣವಾಗಿಲ್ಲ ಎಂದು ತೀರ್ಪು ನೀಡಿತ್ತು.

ರಾಜ್ಯ ಸರ್ಕಾರವು  ಈ ಆದೇಶವನ್ನು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿತು. ವಿಭಾಗೀಯ ಪೀಠವು ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಎರಡು ವಾರಗಳ ಕಾಲ ತಡೆ ನೀಡಿದೆ. 

Tags:    

Similar News