Lalbag Temple Controversy | ಸಸ್ಯಕಾಶಿಯಲ್ಲಿ ದೇಗುಲ ವಿವಾದ: ಪರ, ವಿರೋಧದ ವಾಗ್ವಾದ

ಸಸ್ಯಕಾಶಿಯಲ್ಲಿ ದೇವಸ್ಥಾನ ನಿರ್ಮಾಣ/ ವಿಸ್ತರಣೆಗೆ ಹೇಗೆ ಅವಕಾಶ ನೀಡಲಾಗಿದೆ? ಅನುಮತಿ ಕೊಟ್ಟಿರುವವರು ಯಾರು ಎಂಬ ಆಕ್ಷೇಪಗಳಿಗೆ ತೋಟಗಾರಿಕಾ ಇಲಾಖೆ, "ಉದ್ಯಾನದಲ್ಲಿ ಹಿಂದಿನಿಂದಲೂ ಮುನೇಶ್ವರ ದೇವಾಲಯವಿದೆ. ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯ ನಡೆಸಿಲ್ಲ," ಎಂದು ಸ್ಪಷ್ಟನೆ ನೀಡಿದೆ.

Update: 2024-10-10 11:10 GMT
ಲಾಲ್‌ ಬಾಗ್‌ನಲ್ಲಿರುವ ಮುನೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದು

ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದಲ್ಲಿ ನಡೆಯುತ್ತಿರುವ ಮುನೇಶ್ವರ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಲಾಲ್ ಬಾಗ್ ನಡಿಗೆದಾರರ ಸಂಘ ಹಾಗೂ ದಾನಿಗಳ ನೆರವಿನಿಂದ ಮುನೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ನಡೆದಿದೆ. ಆದರೆ, ಈ ಸಸ್ಯೋದ್ಯಾನ (ಬಟಾನಿಕಲ್‌ ಗಾರ್ಡನ್‌)ನಲ್ಲಿ ಧಾರ್ಮಿಕ ರಚನೆ ಮತ್ತು ಆಚರಣೆಗಳಿಗೆ ಅವಕಾಶ ನೀಡಿರುವ ಕುರಿತು ʼಬೆಂಗಳೂರು ಹೆರಿಟೇಜ್ ಗ್ರೂಪ್ʼ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರಿನ ಮುಕುಟದಂತಿರುವ ಸಸ್ಯಕಾಶಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹೇಗೆ ಅವಕಾಶ ನೀಡಲಾಗಿದೆ? ಅನುಮತಿ ಕೊಟ್ಟಿರುವವರು ಯಾರು? ಎಂದು ʼಬೆಂಗಳೂರು ಹೆರಿಟೇಜ್ ಗ್ರೂಪ್ʼ ಪ್ರಶ್ನಿಸಿದೆ. ಈ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ಲಾಲ್ ಬಾಗ್ ನಡಿಗೆರಾರರ ಸಂಘ, "ಇಲ್ಲಿ ಹೊಸದಾಗಿ ಯಾವ ದೇಗುಲವನ್ನೂ ನಿರ್ಮಿಸಿಲ್ಲ. ಶಿಥಿಲವಾಗಿದ್ದ ಮುನೇಶ್ವರ ದೇವಾಲಯವನ್ನು ಅದರ ಇತಿಮಿತಿಯಲ್ಲೇ ನವೀಕರಿಸಲಾಗಿದೆ" ಎಂದು ಸಮಜಾಯಿಷಿ ನೀಡಿದೆ.


ಮೂರು ತಲೆಮಾರುಗಳ ದೇಗುಲ

ಮೂರು ತಲೆ ಮಾರುಗಳಿಂದ ಇಲ್ಲಿ ಮುನೇಶ್ವರ ದೇವಸ್ಥಾನವಿದೆ. ಈ ಹಿಂದೆ ಮಾವಳ್ಳಿ, ಚಿಕ್ಕ ಮಾವಳ್ಳಿ ಸೇರಿದಂತೆ ಆಸುಪಾಸಿನ ಗ್ರಾಮಗಳ ನೂರಾರು ಕುಟುಂಬಗಳು ಮುನೇಶ್ವರ ಒಕ್ಕಲು ಸೇವೆ ಮಾಡುತ್ತಿದ್ದವು. ಕೆಂಗಲ್ ಹನುಮಂತಯ್ಯ ಹಾಗೂ ತೋಟಗಾರಿಕಾ ಪಿತಾಮಹ ಮರಿಗೌಡ ಅವರು ಲಾಲ್ ಬಾಗ್ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ನಂತರ ಇಲ್ಲಿ ಸಣ್ಣ ಗುಡಿ ಇತ್ತು. ದೇಗುಲವನ್ನು ಮಳೆಯಿಂದ ರಕ್ಷಿಸಲು ಹಂಚಿನ ಚಾವಣಿ ಹಾಕಲಾಗಿತ್ತು. ಮರದ ಕೊಂಬೆ ಬಿದ್ದು ಹಂಚುಗಳು ಹಾಳಾದ ನಂತರ ನವೀಕರಿಸಲಾಗಿದೆ ಎಂದು ಚಿಕ್ಕಮಾವಳ್ಳಿಯಲ್ಲಿ ವಾಸವಿರುವ 81 ವರ್ಷದ ವಾಯುವಿಹಾರಿ ಮೂಡಲಯ್ಯ ಅವರು ದೇಗುಲದ ಇತಿಹಾಸದ ಬಗ್ಗೆ ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದರು.

ನಡಿಗೆದಾರರ ಸಂಘದ ಸದಸ್ಯ ಮುನಿಸ್ವಾಮಿ ಮಾತನಾಡಿ, "ದೇವಾಲಯ ಸಂಪೂರ್ಣ ಶಿಥಿಲವಾಗಿತ್ತು. ದಾನಿಗಳು ಹಾಗೂ ವಾಯುವಿಹಾರಿಗಳು ಸೇರಿ ದೇವಾಲಯದ ಜೀರ್ಣೋದ್ಧಾರ ಮಾಡಿದ್ದೇವೆ. ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈ ಹಿಂದೆ ಮಳೆ ಬಂದರೆ ನೀರು ಗರ್ಭಗುಡಿಗೆ ಬರುತ್ತಿತ್ತು. ಯಾವುದೇ ಭದ್ರತೆ ಇರದ ಕಾರಣ ಯಾರು ಯಾರೋ ಬಂದು ಕುಳಿತುಕೊಂಡು ಅಸಭ್ಯ ಚಟುವಟಿಕೆಗಳ ಜಾಗವಾಗುತ್ತಿತ್ತು. ಇದನ್ನೆಲ್ಲಾ ಗಮನಿಸಿ ನಾವುಗಳೇ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ನಮ್ಮ ಮನವಿ ಮೇರೆಗೆ ತೋಟಗಾರಿಕೆ ಇಲಾಖೆಯವರು ಭದ್ರತಾ ಸಿಬ್ಬಂದಿಯನ್ನೂ ಈ ಭಾಗದಲ್ಲಿ ನಿಯೋಜಿಸಿದ್ದಾರೆ," ಎಂದು ತಿಳಿಸಿದರು.

ಜನಪದ ಪರಂಪರೆಯ ಆಡಂಬರ ಬೇಡ

"ದಕ್ಷಿಣ ಭಾರತದಲ್ಲಿ ಮುನೇಶ್ವರ ದೇವರ ಆರಾಧನೆ ಜನಪದ ಸಂಪ್ರದಾಯದ ಒಂದು ಭಾಗ. ಪಾರಂಪರಿಕವಾದ ಈ ಸಂಪ್ರದಾಯ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಮಾವಳ್ಳಿ ವ್ಯಾಪ್ತಿಯಲ್ಲಿರುವ ಲಾಲ್‌ ಬಾಗ್‌ನಲ್ಲಿ ಈ ಹಿಂದಿನಿಂದಲೂ ಮುನೇಶ್ವರ ದೇವರ ಚಿಕ್ಕ ಗುಡಿ ಇತ್ತು. ಆದರೆ, ಈಗ ಅದಕ್ಕೆ ದೇವಸ್ಥಾನದ ಸ್ವರೂಪ ನೀಡಿರುವುದು ಬೇಕಿರಲಿಲ್ಲ. ಏಷ್ಯಾದಲ್ಲೇ ಅಪರೂಪದ ಬಟಾನಿಕಲ್‌ ಗಾರ್ಡನ್‌ ಇದು. ಒತ್ತಡದಿಂದ ಕೆಲ ಕಾಲ ಮುಕ್ತಿ ಪಡೆಯಲು ನಾನಾ ಧರ್ಮದ ಜನರು ಇಲ್ಲಿಗೆ ಬರುತ್ತಾರೆ. ಮುನಿಯಪ್ಪ ಅಥವಾ ಮುನೇಶ್ವರ ದೇವಸ್ಥಾನದಂತೆ ನಾಳೆ ಇನ್ನಾರೋ ಚರ್ಚ್‌, ಮಸೀದಿ ನಿರ್ಮಿಸಿದರೆ ಉದ್ಯಾನದ ಆಶಯವೇ ಹಾಳಾಗಲಿದೆ. ಮುನೇಶ್ವರ ಸ್ವಾಮಿ ಗುಡಿಯು ಮೂಲ ಸ್ವರೂಪದಲ್ಲಿದ್ದರೆ ಚೆನ್ನಾಗಿರುತ್ತದೆ. ಆಗ ಯಾವುದೇ ಅಭ್ಯಂತರ, ಆಕ್ಷೇಪಣೆಯೂ ಇರುವುದಿಲ್ಲ. ದೇವಸ್ಥಾನದ ಮಾದರಿಯಲ್ಲಿ ವಿಜೃಂಬಿಸಿದರೆ ಬೇರೆ ಸಂದೇಶ ಹೋಗಲಿದೆ. ಹಾಗಾಗಿ ತೋಟಗಾರಿಕೆ ಇಲಾಖೆಯವರು ವಿವೇಚನೆಯಿಂದ ವರ್ತಿಸಬೇಕು" ಎಂದು ʼಬೆಂಗಳೂರಿನ ಲಾಲ್‌ ಬಾಗ್‌ʼ (Bangalore's Lalbagh) ಎಂಬ ಪುಸ್ತಕ ಬರೆದಿರುವ ಸುರೇಶ್‌ ಜಯರಾಮ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದರು.

"ಸಜ್ಜನ್‌ ರಾವ್‌ ವೃತ್ತದಲ್ಲಿ ಸಣ್ಣ ದೇಗುಲವಿತ್ತು. ಅದು ಈಗ ಬೃಹದಾಕಾರವಾಗಿದೆ. ಲಾಲ್‌ ಬಾಗ್‌ ಮುನೇಶ್ವರ ದೇವಾಲಯ ಜನಪದದ ರೀತಿಯಲ್ಲಿದ್ದರೆ ಒಳ್ಳೆಯದು. ಇಲ್ಲವಾದರೆ ಪರಂಪರೆ ಮರೆಯಾಗಿ ಹೊಸ ಇತಿಹಾಸ ಸೃಷ್ಟಿಸಲಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಉದ್ಯಾನ ಸಂರಕ್ಷಣಾ ನಿಯಮ ಏನು ಹೇಳುತ್ತದೆ?

ಸಾರ್ವಜನಿಕ ಉದ್ಯಾನಗಳಲ್ಲಿ ಸರ್ಕಾರ ಅಥವಾ ತೋಟಗಾರಿಕೆ ಇಲಾಖೆಗೆ ಹೊರತುಪಡಿಸಿದ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವಿಲ್ಲ. ಪಾರಂಪರಿಕವಾಗಿ ಇರುವ ಸ್ಥಳ, ವಸ್ತುಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂರಕ್ಷಿಸಬೇಕು ಎಂದು 1975 ರ ಕರ್ನಾಟಕ ಸರ್ಕಾರದ ಉದ್ಯಾನ ಸಂರಕ್ಷಣೆ ಕಾಯ್ದೆ ಹೇಳುತ್ತದೆ. ಆದರೆ, ಲಾಲ್‌ ಬಾಗ್‌ ನಲ್ಲಿ ಮುನೇಶ್ವರ ಸ್ವಾಮಿ ಗುಡಿಗೆ ದೇವಾಲಯದ ರೂಪ ನೀಡಿರುವುದು ಕಾಯ್ದೆಯ ಉಲ್ಲಂಘನೆ. ಮುನೇಶ್ವರ ಸ್ವಾಮಿ ದೇವರ ಗುಡಿ ಮೊದಲು ಹೇಗಿತ್ತೊ, ಹಾಗೆಯೇ ಉಳಿಸಿಕೊಂಡರೆ ಉತ್ತಮ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಾರೆ.

ಆದರೆ, ದೇವಾಲಯ ಜೀರ್ಣೋದ್ಧಾರ ಕುರಿತು ತೋಟಗಾರಿಕೆ ಇಲಾಖೆಯ ವಾದವೇ ಬೇರೆ. ಲಾಲ್‌ ಬಾಗ್‌ ಪ್ರಮುಖ ಆಕರ್ಷಣೆಯಾದ ಬ್ಯಾಂಡ್‌ ಸ್ಟ್ಯಾಂಡ್(‌ ವಾದ್ಯ ರಂಗ) ಈ ಹಿಂದೆ ಶಿಥಿಲವಾಗಿತ್ತು. ಅದನ್ನು ದುರಸ್ತಿ ಮಾಡಲಾಗಿದೆ. ಅದೇ ರೀತಿ ಮುನೇಶ್ವರ ಸ್ವಾಮಿ ದೇಗುಲವನ್ನು ಕೂಡ ನವೀಕರಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.

ದೇವಾಲಯ ನವೀಕರಣ ಕುರಿತು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಟಿ.ಬಾಲಕೃಷ್ಣ, "ಉದ್ಯಾನದಲ್ಲಿ ಹಿಂದಿನಿಂದಲೂ ಮುನೇಶ್ವರ ದೇವಾಲಯವಿದೆ. ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯ ನಡೆಸಿಲ್ಲ. ದೇಗುಲ ನವೀಕರಿಸಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದು, ಪ್ರತಿಕ್ರಿಯಿಸುತ್ತೇನೆ," ಎಂದು ಹೇಳಿದರು.

ಪೂಜೆಯಷ್ಟೇ, ಯಾವುದೇ ಆಚರಣೆ ಇಲ್ಲ

ದೇವಾಲಯದ ಪೂಜೆ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿರುವ ಗೀತಾ ಅವರು ಮಾತನಾಡಿ, "ನಮ್ಮ ತಾಯಿ ಇಲ್ಲಿ ನಿರಂತರ ಪೂಜೆ ಮಾಡುತ್ತಿದ್ದರು. ಅವರ ನಿಧನರಾದ ಮೇಲೆ ಆ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದೇನೆ. ಯಾವುದೇ ಆಡಂಬರ ನಡೆಸುತ್ತಿಲ್ಲ. ಮಳೆಯಿಂದ ರಕ್ಷಿಸುವ ಸಲುವಾಗಿ ದೇವಾಲಯವನ್ನು ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ. ಹೆಚ್ಚುವರಿಯಾಗಿ ಏನನ್ನೂ ನಿರ್ಮಿಸಿಲ್ಲ" ಎಂದು ವಿವರಿಸಿದರು.


ಲಾಲ್ ಬಾಗ್ ವೈಶಿಷ್ಟ್ಯತೆ ಏನು?

1760 ರಲ್ಲಿ ಮೈಸೂರು ಆಡಳಿತ ನಡೆಸಿದ ಹೈದರಾಲಿ ಅವಧಿಯಲ್ಲಿ ಈ ಸಸ್ಯೋದ್ಯಾನ  ನಿರ್ಮಾಣವಾಗಿತ್ತು. ಬಳಿಕ ಟಿಪ್ಪು ಸುಲ್ತಾನ್ ಕಾಲದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ಕೈಗೊಂಡ ದೂರದೃಷ್ಟಿಯ ಕ್ರಮಗಳಿಂದ ಲಾಲ್ ಬಾಗ್ ಸಸ್ಯಕಾಶಿಯಾಗಿ ಬೆಳೆಯಿತು. ಪ್ರಸ್ತುತ 240 ಎಕರೆ ಜಾಗದಲ್ಲಿ ಲಾಲ್ ಬಾಗ್ ಹರಡಿಕೊಂಡಿದೆ. ಕೆಂಪೇಗೌಡ ಗೋಪುರ, ಪರ್ಷಿಯಾ, ಆಪ್ಘಾನಿಸ್ತಾನ ಹಾಗೂ ಫ್ರಾನ್ಸ್ ದೇಶದ ಅಪರೂಪದ ಸಸ್ಯಪ್ರಬೇಧ ಇಲ್ಲಿದೆ.

ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ 1000 ಕ್ಕೂ ಹೆಚ್ಚು ವಿವಿಧ ಜಾತಿಯ ಮರ, ತರಹೇವಾರಿ ಹೂಗಳು, 100 ವರ್ಷ ದಾಟಿದ ಮರಗಳಿವೆ. 673 ಜಾತಿಯ ಮತ್ತು140 ಕುಟುಂಬಗಳಿಗೆ ಸೇರಿದ 2150 ಜಾತಿಯ ಸಸ್ಯಗಳೊಂದಿಗೆ ಸಸ್ಯ ಸಂಪತ್ತಿನ ಆಗರವಾಗಿದೆ. ಇನ್ನು ಇಲ್ಲಿನ ಲಾಲ್ಬಾಗ್ ರಾಕ್ ಭೂಮಿಯ ಅತ್ಯಂತ ಹಳೆಯ ಬಂಡೆಗಲ್ಲಿನ ಸಂರಚನೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಸುಮಾರು 3000 ಮಿಲಿಯನ್ ವರ್ಷಗಳ ಹಿಂದಿನ ಬಂಡೆ ಎಂದು ಗುರುತಿಸಿದ್ದು, ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ.

Tags:    

Similar News