ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ
ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಜತೆಗೆ ಅಜ್ನಿ (ನಾಗ್ಪುರ)-ಪುಣೆ ಎಕ್ಸ್‌ಪ್ರೆಸ್ ಮತ್ತು ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಯಿತು.;
ಬೆಂಗಳೂರ-ಬೆಳಗಾವಿ ವಂದೇ ಭಾರತ್ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಇದು 11ನೇ ವಂದೇ ಭಾರತ್ ರೈಲು ಆಗಿದೆ. ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಜತೆಗೆ ಇನ್ನೆರಡು ರೈಲಿಗೂ ಹಸಿರು ನಿಶಾನೆ ತೋರಲಾಯಿತು. ಅಜ್ನಿ (ನಾಗ್ಪುರ)-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಯಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ, ಬೆಳಗಾವಿ - ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರೈಲಿಗೆ ಚಾಲನೆ ನೀಡಿದ ಬಳಿಕ ಹೂವಿನಿಂದ ಸಿಂಗಾರಗೊಂಡಿದ್ದ ರೈಲಿನೊಳಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಿದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು ಸಂತಸಗೊಂಡರು. ಕಳೆದ 3 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ವಿಸ್ತರಿಸಲಾಗುತ್ತಿದ್ದು, 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ಮಾರ್ಗದಲ್ಲಿ ಕರ್ನಾಟಕದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿತ್ತು. ಈಗ, ಈ 11 ರೈಲುಗಳ ಪೈಕಿ 2 ರೈಲುಗಳು ರಾಜ್ಯದೊಳಗೇ ಸಂಚರಿಸಿದರೆ, ಉಳಿದ 9 ರೈಲುಗಳು ಕರ್ನಾಟಕ ಮತ್ತು ನೆರೆ ರಾಜ್ಯಗಳ ನಡುವೆ ಸಂಚಾರ ನಡೆಸುತ್ತಿವೆ.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಕೇವಲ 8.5 ಗಂಟೆಗಳಲ್ಲಿ 611 ಕಿ.ಮೀ ದೂರವನ್ನು ಕ್ರಮಿಸಲಿದ್ದು, ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣದ ಸಮಯವನ್ನು ಸುಮಾರು 1.20 ಗಂಟೆಗಳಷ್ಟು ಮತ್ತು ಪ್ರಸ್ತುತ ಸೇವೆಗಳಿಗೆ ಹೋಲಿಸಿದರೆ ಹಿಂದಿರುಗುವ ಪ್ರಯಾಣದಲ್ಲಿ 1.40 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಈ ರೈಲು ಬೆಳಿಗ್ಗೆ 5.20 ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ 1.50 ಕ್ಕೆ ಬೆಂಗಳೂರನ್ನು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ಮಧ್ಯಾಹ್ನ 2.20 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10.40 ಕ್ಕೆ ಬೆಳಗಾವಿಗೆ ಆಗಮಿಸುತ್ತದೆ.
ಅಜ್ನಿ (ನಾಗ್ಪುರ)-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು 881 ಕಿ.ಮೀ ಕ್ರಮಿಸುವ ಅತ್ಯಂತ ದೀರ್ಘಾವಧಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಈ ಮಾರ್ಗದಲ್ಲಿ ಸರಾಸರಿ 73 ಕಿ.ಮೀ ವೇಗದಲ್ಲಿ ಚಲಿಸುವ ಅತ್ಯಂತ ವೇಗದ ರೈಲು ಇದಾಗಿದೆ. ಇದು ವಾರ್ಧಾ, ಅಕೋಲಾ, ಶೇಗಾಂವ್, ಭೂಸಾವಲ್, ಜಲಗಾಂವ್, ಮನ್ಮಾಡ್ ಮತ್ತು ಅಹ್ಮದ್‌ನಗರ ಸೇರಿದಂತೆ 10 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಈ ರೈಲು ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 9.50 ಕ್ಕೆ ಅಜ್ನಿಯಿಂದ ಹೊರಟು ರಾತ್ರಿ 9.50 ಕ್ಕೆ ಪುಣೆ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ಬೆಳಿಗ್ಗೆ 6.25 ಕ್ಕೆ ಪುಣೆಯಿಂದ ಹೊರಟು ಸಂಜೆ 6.25 ಕ್ಕೆ ಅಜ್ನಿ ತಲುಪಲಿದೆ.
ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಅಮೃತಸರ ಮತ್ತು ಜಮ್ಮುವಿನ ಯಾತ್ರಾ ಸ್ಥಳವಾದ ಕತ್ರಾ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸೋಮವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಈ ರೈಲು ಬೆಳಿಗ್ಗೆ 6.40 ಕ್ಕೆ ಕತ್ರಾದಿಂದ ಹೊರಟು ಮಧ್ಯಾಹ್ನ 12.20 ಕ್ಕೆ ಅಮೃತಸರ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ಅದು ಅಮೃತಸರದಿಂದ ಮಧ್ಯಾಹ್ನ 4.25 ಕ್ಕೆ ಹೊರಟು ರಾತ್ರಿ 10 ಗಂಟೆಗೆ ಕತ್ರಾ ತಲುಪಲಿದೆ, ಜಮ್ಮು, ಪಠಾಣ್‌ಕೋಟ್ ಕ್ಯಾಂಟ್, ಜಲಂಧರ್ ಸಿಟಿ ಮತ್ತು ವ್ಯಾಸ್‌ನಲ್ಲಿ ನಿಲುಗಡೆ ಇರುತ್ತದೆ.