ಶಂಕೆಗಳ ಸರಮಾಲೆಗೆ ಕಾರಣವಾದ ಓಲಾ ಎಂಜಿನಿಯರ್ ಆತ್ಮಹತ್ಯೆ; ನಾನಾ ಆಯಾಮಗಳ ತನಿಖೆ
ಬೆಂಗಳೂರಿನ ಕೋರಮಂಗಲದಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಚಿಕ್ಕಲ್ಲಸಂದ್ರ ನಿವಾಸಿ ಕೆ.ಅರವಿಂದ್ ಎಂಬುವರು ಸೆ.28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ 28 ಪುಟಗಳ ಡೆತ್ ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಉಲ್ಲೇಖಿಸಿದ್ದರು.
ಮೃತ ಅರವಿಂದ್, ಓಲಾ ಸಿಇಒ ಭವೇಶ್ ಅಗರ್‌ವಾಲ್
ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯ ಎಂಜಿನಿಯರ್ ಕೆ.ಅರವಿಂದ್ ಆತ್ಮಹತ್ಯೆ ಪ್ರಕರಣವು ಐಟಿ ವಲಯದಲ್ಲಿ ಅತಿಯಾದ ಕೆಲಸದೊತ್ತಡ, ಮಾನಸಿಕ ಕಿರುಕುಳದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ಬಳಿಕ ಆತನ ಖಾತೆಗೆ ಹಣ ವರ್ಗಾವಣೆಯಾಗಿರುವುದು ಮತ್ತು ಆರು ದಿನಗಳ ಬಳಿಕ ಕಂಪೆನಿ ಸಿಇಓ ವಿರುದ್ಧ ಎಫ್‌ಐಆರ್ ಆಗಿರುವುದು... ಹೀಗೆ ಈ ಪ್ರಕರಣದ ಸುತ್ತ ನಡೆದಿರುವ ವಿದ್ಯಮಾನಗಳು ನಾನಾ ಶಂಕೆಗಳಿಗೆ ಕಾರಣವಾಗಿದೆ.
ಕೆಲಸದ ಸ್ಥಳಗಳಲ್ಲಿ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡವರ ಪ್ರಕರಣಗಳು ಸಾಕಷ್ಟಿವೆ. ಈಗ ಅದೇ ರೀತಿಯ ಮತ್ತೊಂದು ಘಟನೆ ಟೆಕ್ಕಿಗಳಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಕೆ. ಅರವಿಂದ್ ಸೆ.28ರಂದು ಬೆಂಗಳೂರಿನ ಚಿಕ್ಕಲ್ಲಸಂದ್ರದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಸೆ. 30 ರಂದು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಯಿತು. ಆದರೆ, ಅರವಿಂದ್ ಮೃತಪಟ್ಟ ಎರಡು ದಿನಗಳ ಬಳಿಕ ಕಂಪನಿಯು ಅರವಿಂದ್ ಖಾತೆಗೆ 17.46 ಲಕ್ಷ ರೂ. ಪಾವತಿಸಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ.
ಡೆತ್‌ನೋಟ್
ಅರವಿಂದ್ ಅವರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ 28 ಪುಟಗಳ ಡೆತ್ ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಉಲ್ಲೇಖಿಸಿದ್ದರು. ಅ.6 ರಂದು ಅರವಿಂದ್ ಅವರ ಸೋದರ ಅಶ್ವಿನ್ ಕಣ್ಣನ್ ಅವರು ನೀಡಿದ ದೂರು ಆಧರಿಸಿ, ಅ.6ರಂದು ಓಲಾ ಸಿಇಒ ಭವಿಷ್ ಅಗರ್ವಾಲ್ ಹಾಗೂ ಹಿರಿಯ ಅಧಿಕಾರಿ ಸುಬ್ರತಾ ಕುಮಾರ್ ದಾಸ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕಂಪನಿಯ ಅಧಿಕಾರಿಗಳ ಕಿರುಕುಳ, 28ಪುಟಗಳ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿರುವ ಅಂಶಗಳು, ಆರು ದಿನ ತಡವಾಗಿ ದೂರು ದಾಖಲಿಸಿದ ಕುಟುಂಬಸ್ಥರು, ಓಲಾ ಕಂಪನಿ ಪಾವತಿಸಿದ ಹಣ, ಓಲಾ ಮಾಲೀಕರ ವಿರುದ್ಧದ ಆರೋಪ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ಚಿಕ್ಕಲ್ಲಸಂದ್ರ ಅರವಿಂದ್ ಮನೆ ಪರಿಶೀಲನೆ ನಡೆಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ, ಅಸಮರ್ಪಕ ವೇತನ ಹಾಗೂ ಇತರ ಭತ್ಯೆಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ತಮ್ಮ ಸೋದರ ಸಾವಿಗೆ ಕಂಪನಿಯ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತ ಅರವಿಂದ್ ಸೋದರ ಅಶ್ವಿನ್ ಕಣ್ಣನ್ ನೀಡಿರುವ ದೂರು ಆಧರಿಸಿ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಓಲಾ ಎಲೆಕ್ಟ್ರಿಕ್ ಕಂಪನಿಯ ಸುಬ್ರತಾ ಕುಮಾರ್ ದಾಸ್, ಭವಿಷ್ ಅಗರ್ವಾಲ್ ಹಾಗೂ ಓಲಾ ಎಲೆಕ್ಟ್ರಿಕ್ ಕಂಪನಿ ವಿರುದ್ಧ ಬಿಎನ್ಎಸ್ಎಸ್ ಸೆಕ್ಷನ್ 108, ಸೆಕ್ಷನ್ 3(5) ರಡಿ ಪ್ರಕರಣ ದಾಖಲಿಸಲಾಗಿದೆ.
ಅನುಮಾನ ಮೂಡಿದ ಕಂಪನಿಯ ನಡೆ
ಓಲಾ ಎಲೆಕ್ಟ್ರಿಕ್ ಕಂಪನಿಯು ಅರವಿಂದ್ ಆತ್ಮಹತ್ಯೆಕೊಂಡ ಎರಡು ದಿನಗಳ ಬಳಿಕ ಅವರ ಖಾತೆಗೆ 17.46 ಲಕ್ಷ ರೂ. ನಗದನ್ನು ನೆಫ್ಟ್ ಮೂಲಕ ಪಾವತಿಸಿರುವ ಬಗ್ಗೆ ಅರವಿಂದ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸೋದರ ಡೆತ್‌ನೋಟಿನಲ್ಲಿ ಬಾಕಿ ಭತ್ಯೆಗಳ ಕುರಿತು ಪ್ರಸ್ತಾಪಿಸಿದ್ದಾರೆ. ಇದೇ ವಿಚಾರವಾಗಿ ಕಂಪನಿಯ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿರಬಹುದು ಎಂದು ಅಶ್ವಿನ್ ಕಣ್ಣನ್ ಆರೋಪಿಸಿದ್ದಾರೆ.
ಓಲಾ ಕಂಪೆನಿ ಸ್ಪಷ್ಟನೆ
ಕಂಪನಿಯ ಸ್ಪಷ್ಟನೆ ಏನು?
ಅರವಿಂದ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿ ವಕ್ತಾರರು " ಸಹೋದ್ಯೋಗಿ ಅರವಿಂದ್ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ಇರಲಿದ್ದೇವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
"ಕೆ. ಅರವಿಂದ್ ಮೂರುವರೆ ವರ್ಷಗಳಿಂದ ಓಲಾ ಎಲೆಕ್ಟ್ರಿಕ್ನೊಂದಿಗೆ ಸಂಬಂಧ ಹೊಂದಿದ್ದರು. ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಉದ್ಯೋಗ ಸ್ಥಳ ಸೇರಿದಂತೆ ಯಾರಿಂದಲೂ ಕಿರುಕುಳ ಆಗುತ್ತಿರುವ ಬಗ್ಗೆ ದೂರು ನೀಡಿರಲಿಲ್ಲ. ಅಲ್ಲದೇ ಹಿರಿಯ ಅಧಿಕಾರಿಗಳೊಂದಿಗೂ ಯಾವುದೇ ಸಂವಹನ ನಡೆಸಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ವಕ್ತಾರರು, ನಾವು ಅರವಿಂದ್ ಕುಟುಂಬಕ್ಕೆ ತಕ್ಷಣದ ನೆರವಾಗಿ ಹಣ ಪಾವತಿಸಿದ್ದೇವೆ ಎಂದಿದ್ದಾರೆ.
ಪೊಲೀಸರು ಹೇಳುವುದೇನು?
ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕಲ್ಲಸಂದ್ರದ ನಿವಾಸಿ ಕೆ.ಅರವಿಂದ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಅರವಿಂದ್ ಮೃತಪಟ್ಟಿದ್ದಾರೆ. ಅರವಿಂದ್ ಮನೆಯಲ್ಲಿ 28 ಪುಟಗಳ ಡೆತ್‌ನೋಟ್ ಸಿಕ್ಕಿದೆ. ಆದರೆ, ಡೆತ್‌ನೋಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಕೆಲಸದ ಒತ್ತಡದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರ ಸೋದರ ಅಶ್ವಿನ್ ಕಣ್ಣನ್ ಅವರು ನೀಡಿದ ದೂರಿನ ಆಧಾರದ ಮೇಲೆ ಓಲಾ ಎಲೆಕ್ಟ್ರಿಕ್ ಕಂಪನಿಯ ಹೋಮೋ ಲೋಗೋಷನ್ ವಿಭಾಗದ ಮುಖ್ಯಸ್ಥ ಸುಬ್ರತ್‌ಕುಮಾರ್ ದಾಸ್ ಹಾಗೂ ಕಂಪನಿಯ ಮಾಲೀಕ ಭವಿಷ್ ಅಗರ್ವಾಲ್‌ಗೆ ನೋಟಿಸ್ ನೀಡಲಾಗಿದೆ. ಏಳು ದಿನದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಈ ಮಧ್ಯೆ, ಓಲಾ ಕಂಪನಿಯು ಎಫ್ಐಆರ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ಅಲ್ಲದೇ ಪ್ರಕರಣದಿಂದ ತಾತ್ಕಾಲಿಕವಾಗಿ ರಿಲೀಫ್ ನೀಡಿದೆ.
ಅರವಿಂದ್ ಅವರ ಮನೆಯಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೌಟುಂಬಿಕ ಕಲಹದಲ್ಲಿ ಡೆತ್ ನೋಟ್ ಅನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಆದರೆ, ಇಂತಹ ಪ್ರಕರಣಗಳಲ್ಲಿ ಡೆತ್‌ನೋಟ್ ಅಂಶಗಳನ್ನು ಪರಿಶೀಲಿಸಿಯೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಂಜುಗೌಡ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ʼಅಸಹನೀಯ ಕೆಲಸದ ಸಂಸ್ಕೃತಿ'
ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಕೆಲಸದ ಒತ್ತಡ, ಕಿರುಕುಳ ಹೆಚ್ಚುತ್ತಿರುವುದನ್ನು ತಮ್ಮ ಸೋದರ ಅರವಿಂದ್ ಆಗಾಗ್ಗೆ ಹೇಳುತ್ತಿದ್ದರು. ಆದರೆ, ಅದು ನನ್ನ ಸಹೋದರನ ಜೀವವನ್ನೇ ಕೊನೆಗಾಣಿಸುವಷ್ಟು ಗಂಭೀರವಾಗಿರಲಿದೆ ಎಂದು ಊಹಿಸಿರಲಿಲ್ಲ. ಅವಿವಾಹಿತನಾದ ನನ್ನ ಸೋದರ ತಂದೆ ತಾಯಿಯೊಂದಿಗೆ ವಾಸವಿದ್ದ. ಬೈಕ್ ವಿನ್ಯಾಸದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಎಂದು ಅರವಿಂದ್ ಅವರ ಅಣ್ಣನಾದ ಅಶ್ವಿನ್ ಕಣ್ಣನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ಓಲಾ
ಅರವಿಂದ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಸಿಇಒ ಭವಿಷ್ ಅಗರ್ವಾಲ್, ಸುಬ್ರತಾಕುಮಾರ್ ದಾಸ್ ಹಾಗೂ ಕಂಪನಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ ಓಲಾ ಎಲೆಕ್ಟ್ರಿಕ್ ಕಂಪನಿ ಹೈಕೋರ್ಟ್ ಮೊರೆ ಹೋಗಿದ್ದು, ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದೆ. ಅರವಿಂದ್ ಅವರು ಉದ್ಯೋಗ ಸ್ಥಳದಲ್ಲಿ ಯಾವುದೇ ರೀತಿಯ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ದೂರು ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.
ಟೆಕ್ಕಿಗಳ ಆತ್ಮಹತ್ಯೆ ಇದೇ ಮೊದಲಲ್ಲ
ಉದ್ಯೋಗದ ಸ್ಥಳಗಳಲ್ಲಿ ಕಿರುಕುಳದಿಂದ ಬೇಸತ್ತು ಹಲವು ಸಾಫ್ಟ್‌ವೇರ್ ಉದ್ಯೋಗಿಗಳ ಆತ್ಮಹತ್ಯೆಗೆ ಶರಣಾಗಿರುವ ನಿದರ್ಶನಗಳಿವೆ. ಕಳೆದ ಮೇ 19 ರಂದು ಕೆಲಸದ ಒತ್ತಡದಿಂದ AI ಕಂಪನಿಯಲ್ಲಿ ಮೆಷಿನ್ ಲರ್ನಿಂಗ್ ಎಂಜಿನಿಯರ್ ಆಗಿದ್ದ ನಿಖಿಲ್ ಸೋಮವಂಶಿ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕಂಪನಿಯ ಕಠಿಣ ಕೆಲಸದ ವಾತಾವರಣ ಮತ್ತು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು.
2024 ಡಿಸೆಂಬರ್ ೯ ರಂದು ಕೌಟುಂಬಿಕ ಕಲಹದಿಂದ ಬೇಸತ್ತು ಟೆಕಿ ಅತುಲ್ ಸುಭಾಷ್ ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾರತ್ತಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ 90 ನಿಮಿಷಗಳ ವಿಡಿಯೊ ಮಾಡಿ, ತನ್ನ ಪತ್ನಿ, ಆಕೆಯ ಪೋಷಕರಿಂದ ಆಗುತ್ತಿರುವ ಕಿರುಕುಳ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.