ಪ್ರಧಾನಿ ಜೊತೆ ವೇದಿಕೆಯಲ್ಲಿ ಕೊನೆಗೂ ಸ್ಥಾನ ದಕ್ಕಿಸಿಕೊಂಡ ಆರ್. ಅಶೋಕ್

ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಹೆಸರನ್ನೂ ಸೇರಿಸಲಾಗಿದೆ. ಅಶೋಕ್ ಹೆಸರು ಇಲ್ಲದಿರುವ ಬಗ್ಗೆ ನಾನು ಪ್ರಧಾನಮಂತ್ರಿ ಕಚೇರಿ ಗಮನ ಸೆಳೆದಿದ್ದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.;

Update: 2025-08-10 04:50 GMT

ಬೆಂಗಳೂರಿನ ಯೆಲ್ಲೋ ಮೆಟ್ರೋ ಲೈನ್  ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕೊನೆಗೂ ಪ್ರತಿಪಕ್ಷ ನಾಯಕ ಆರ. ಅಶೋಕ್ ಅವರಿಗೆ ಸ್ಥಾನ ಸಿಕ್ಕಿದೆ. 

ಭಾನುವಾರ ಈ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೆಟ್ರೋ ಲೈನ್ ಬೆಂಗಳೂರು ದಕ್ಷಿಣ ಭಾಗದ ಮಹಾಜನತೆಗೆ ಸಾಕಷ್ಟು ಅನುಕೂಲ ಉಂಟು ಮಾಡಲಿದೆ. ಪ್ರಧಾನಿಯವರ ಆಗಮನಕ್ಕೆ ಜನರು ಕಾತುರತೆಯಿಂದ ಕಾಯುತ್ತಿದ್ದಾರೆ. ಬೆಂಗಳೂರು- ಬೆಳಗಾವಿ ವಂದೇ ಭಾರತ್ ರೈಲನ್ನೂ ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಹೆಸರನ್ನೂ ಸೇರಿಸಲಾಗಿದೆ. ಅವರು ಕೂಡ ವೇದಿಕೆಯಲ್ಲಿ ಇರುತ್ತಾರೆ. ಅಶೋಕ್ಅವರ ಹೆಸರು ಇಲ್ಲದಿರುವ ಬಗ್ಗೆ ನಾನು ಪ್ರಧಾನಮಂತ್ರಿ ಕಚೇರಿಯ ಗಮನ ಸೆಳೆದಿದ್ದೆ. ನಿನ್ನೆ ಮತ್ತೆ ಮಾತನಾಡಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಜೊತೆ ಮಾತನಾಡಿದ್ದೆ; ಅವರೂ ಪ್ರಯತ್ನ ಮಾಡಿದ್ದಾರೆ. ಈ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದರು.

ವೇದಿಕೆ ಮೇಲೆ ಯಾರು ಇರಬೇಕು, ಯಾರು ಇರಬಾರದು ಎಂಬುದನ್ನು ರಾಜ್ಯ ಬಿಜೆಪಿ ನಿರ್ಧರಿಸುವುದಿಲ್ಲ; ಕೇಂದ್ರ ಸರಕಾರ, ಪ್ರಧಾನಿಯವರ ಕಚೇರಿ ಇದನ್ನು ಗಮನಿಸುತ್ತದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅಶೋಕ್, ಡಾ.ಮಂಜುನಾಥ್ ಅವರೂ ಇರುತ್ತಾರೆ ಎಂದು ನುಡಿದರು.

ಮೆಟ್ರೋ 3ನೇ ಹಂತಕ್ಕೂ ಇವತ್ತು ಚಾಲನೆ ಕೊಡಲಿದ್ದಾರೆ. ಐಟಿ ಹಬ್ ಎನಿಸಿದ ಬೆಂಗಳೂರು ನಗರ ಜಾಗತಿಕ ಮನ್ನಣೆ ಪಡೆದಿದೆ. ಮೆಟ್ರೋ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ವೇಗದಲ್ಲಿ ಒದಗಿಸಬೇಕೆಂಬ ಅಪೇಕ್ಷೆ ಪ್ರಧಾನಿಯವರದು ಎಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯ ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳುವುದನ್ನು ಬಿಟ್ಟು ಬೆಂಗಳೂರಿನ ರಸ್ತೆ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಲಿ ಎಂದು ತಿಳಿಸಿದರು.

ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಿಂದಿನಿಂದಲೂ ಇದೆ. ಹಿಂದಿನ ಸರಕಾರಗಳು ದೂರದೃಷ್ಟಿಯಿಂದ ಕೆಲಸ ಮಾಡಿಲ್ಲ; ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಇಲ್ಲವೆಂದರೆ ಅದಕ್ಕೆ ಇಲ್ಲಿನ ಆಡಳಿತ ವೈಫಲ್ಯವೇ ಕಾರಣ ಎಂದು ತಿಳಿಸಿದರು. ಬೆಂಗಳೂರು ಮಹಾನಗರಕ್ಕೆ ಯಾವ ವೇಗದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕಿತ್ತೋ ಆ ವೇಗ ಪಡೆದುಕೊಂಡಿಲ್ಲ; ಮೋದಿಜೀ ಅವರು ಇಚ್ಛಾಶಕ್ತಿ ಮತ್ತು ಬೆಂಗಳೂರು ಕುರಿತಂತೆ ಆಸಕ್ತಿ ತೋರುತ್ತಿದ್ದು, ವೇಗದಲ್ಲಿ ಕಾರ್ಯಕ್ರಮಗಳು ನಡೆದಿವೆ ಎಂದರು.

Tags:    

Similar News