ಮೆಟ್ರೋ ವೇದಿಕೆ ವಿವಾದ: ಯಾರು ಮಾಡಿದ್ದು ಈ ಹೆಸರಿನ ರಾಜಕೀಯ?
x

ಮೆಟ್ರೋ ವೇದಿಕೆ ವಿವಾದ: ಯಾರು ಮಾಡಿದ್ದು ಈ 'ಹೆಸರಿನ ರಾಜಕೀಯ'?

ಈ 'ಹೆಸರಿನ ರಾಜಕೀಯ' ಕೇವಲ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ಸಚಿವರ ಹೆಸರನ್ನೂ ವೇದಿಕೆಯ ಗಣ್ಯರ ಪಟ್ಟಿಯಿಂದ ಕೈಬಿಡಲಾಗಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಭಾನುವಾರ) ಉದ್ಘಾಟಿಸಲಿರುವ 'ನಮ್ಮ ಮೆಟ್ರೋ' ಹಳದಿ ಮಾರ್ಗದ ಕಾರ್ಯಕ್ರಮವು, ಅಭಿವೃದ್ಧಿಯ ಸಂಭ್ರಮಕ್ಕಿಂತ ಹೆಚ್ಚಾಗಿ ರಾಜಕೀಯ ಜಟಾಪಟಿಯಿಂದಲೇ ಸುದ್ದಿಯಾಗುತ್ತಿದೆ. ಕಾರ್ಯಕ್ರಮದ ವೇದಿಕೆಯ ಮೇಲೆ ಆಸೀನರಾಗುವ ಗಣ್ಯರ ಪಟ್ಟಿಯಿಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೆಸರನ್ನು ಕೈಬಿಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದು ಆಡಳಿತ ಮತ್ತು ವಿಪಕ್ಷಗಳ ನಡುವಿನ ತೆರೆಮರೆಯ ಸಂಘರ್ಷ ಬೀದಿಗೆ ತಂದಿದೆ.

ಶಿಷ್ಟಾಚಾರದ ಪ್ರಕಾರ, ಬೆಂಗಳೂರಿನಲ್ಲಿ ನಡೆಯುವ ಅಧಿಕೃತ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಸ್ಥಾನ ನೀಡಲೇಬೇಕು. ಅದರಲ್ಲೂ, ಆರ್. ಅಶೋಕ್ ಅವರು ಬೆಂಗಳೂರಿನ ಶಾಸಕರೂ ಆಗಿರುವುದರಿಂದ, ಅವರಿಗೆ ಆಹ್ವಾನ ನೀಡುವುದು ಕಡ್ಡಾಯವಾಗಿತ್ತು. ಆದರೆ, ಅವರನ್ನು ಕಡೆಗಣಿಸಿ, ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವುದು ಈ ವಿವಾದದ ಕೇಂದ್ರಬಿಂದುವಾಗಿದೆ.

ನಗರಾಭಿವೃದ್ಧಿ ಇಲಾಖೆ ಕಾರಣವೇ?

ಸಾಮಾನ್ಯವಾಗಿ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ನಗರಾಭಿವೃದ್ಧಿ ಇಲಾಖೆಯು ವೇದಿಕೆಯ ಮೇಲಿರಬೇಕಾದ ಗಣ್ಯರ ಪಟ್ಟಿಯನ್ನು ಸಿದ್ಧಪಡಿಸಿ, ಪ್ರಧಾನಮಂತ್ರಿಗಳ ಕಚೇರಿಗೆ (PMO) ಅನುಮೋದನೆಗಾಗಿ ಕಳುಹಿಸುತ್ತವೆ. ಪಿಎಂಒ ಅಂತಿಮಗೊಳಿಸಿದ ಪಟ್ಟಿಯನ್ನೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಮೂಲಗಳ ಪ್ರಕಾರ, ಬೆಂಗಳೂರಿನಿಂದ ಕಳುಹಿಸಲಾದ ಪಟ್ಟಿಯಲ್ಲಿಯೇ ಆರ್. ಅಶೋಕ್ ಅವರ ಹೆಸರನ್ನು ಸೇರಿಸಿರಲಿಲ್ಲ. ಈ ಲೋಪಕ್ಕೆ ನಗರಾಭಿವೃದ್ಧಿ ಇಲಾಖೆಯೇ ಕಾರಣ ಎಂದು ಕಾಂಗ್ರೆಸ್ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ.

ಈ 'ಹೆಸರಿನ ರಾಜಕೀಯ' ಕೇವಲ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ಸಚಿವರ ಹೆಸರನ್ನೂ ವೇದಿಕೆಯ ಗಣ್ಯರ ಪಟ್ಟಿಯಿಂದ ಕೈಬಿಡಲಾಗಿದ್ದು, ಅವರೂ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಬೆಂಗಳೂರಿನ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ಚಾಲನೆ ಸಿಗುವ ಸಂಭ್ರಮದ ಕ್ಷಣವು, ರಾಜಕೀಯ ಪಕ್ಷಗಳ ಆಂತರಿಕ ಮತ್ತು ಬಾಹ್ಯ ಶೀತಲ ಸಮರದಿಂದಾಗಿ ಕಳೆಗುಂದಿದೆ.

Read More
Next Story