ಕರ್ನೂಲ್ ಬಸ್ ದುರಂತ: ಘಟನಾ ಸ್ಥಳಕ್ಕೆ ಇಂದು ಆರ್‌ಟಿಒ ಅಧಿಕಾರಿಗಳ ತಂಡ ಭೇಟಿ
ಕರ್ನೂಲ್ ಬಳಿ ಸಂಭವಿಸಿದ ಖಾಸಗಿ ಬಸ್ ಬೆಂಕಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಒ ತಂಡವು ಘಟನಾ ಸ್ಥಳಕ್ಕೆ ತೆರಳಲಿದ್ದು, ಮೂವರು ಅಧಿಕಾರಿಗಳ ತಂಡವನ್ನು ಕಳುಹಿಸಲು ಸಾರಿಗೆ ಇಲಾಖೆಯು ಕ್ರಮ ಕೈಗೊಂಡಿದೆ.
ಕರ್ನೂಲ್ ಬಳಿ ಸಂಭವಿಸಿದ ಖಾಸಗಿ ಬಸ್ ಬೆಂಕಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ (ಆರ್‌ಟಿಒ) ತಂಡವು ಘಟನಾ ಸ್ಥಳಕ್ಕೆ ತೆರಳಲಿದೆ. ಮೂವರು ಅಧಿಕಾರಿಗಳ ತಂಡವನ್ನು ಕಳುಹಿಸಲು ಸಾರಿಗೆ ಇಲಾಖೆಯು ಕ್ರಮ ಕೈಗೊಂಡಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು, ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಬೆಂಗಳೂರಿಗೆ ಆಗಮಿಸುತ್ತಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟವರು ವಾಪಸ್ ಬರುತ್ತಿರುವವರು ಇರಬಹುದು ಅಥವಾ ಬೇರೆ ಕಾರಣಗಳಿಗಾಗಿ ಬೆಂಗಳೂರಿಗೆ ಬರುತ್ತಿರುವವರು ಇರಬಹುದು. ಅವರೆಲ್ಲರೂ ಮೂಲತಃ ಹೈದರಾಬಾದ್‌ನವರೇ? ಅಥವಾ ಕರ್ನಾಟಕ ರಾಜ್ಯದವರೇ ಎಂಬುದರ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಈ ನಡುವೆ, ದುರಂತಕ್ಕೊಳಗಾದ ಬಸ್ ಒಡಿಶಾ ರಾಜ್ಯದ ನೋಂದಣಿಯಾಗಿದ್ದು, ಬೆಂಗಳೂರಿನಲ್ಲಿ ಓಡಾಡುತ್ತಿತ್ತು. ಸಾರಿಗೆ ಸಂಸ್ಥೆಯವರು ಮುಂದಿನ ಕ್ರಮ ಯಾವ ರೀತಿ ಕೈಗೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಆರ್‌ಟಿಒ ದೀಪಕ್, ಆರ್‌ಟಿಒ ಅಧಿಕಾರಿಗಳ ತಂಡವೊಂದು ಕರ್ನೂಲ್‌ಗೆ ಭೇಟಿ ನೀಡುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರಯಾಣಿಕರ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದುಕೊಳ್ಳಲಿದೆ. ನಂತರ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ದುರಂತಕ್ಕೀಡಾದ ಬಸ್ ಒಡಿಶಾ ರಾಜ್ಯದ ನೋಂದಣಿಯಾಗಿದೆ. ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.
ಹೆಚ್ಚಿನ ಪ್ರಯಾಣಿಕರು ಹೈದರಾಬಾದ್‌ನವರು
ದುರಂತ ಸಂಭವಿಸಿದಾಗ ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಕೆಲವರು ಬಸ್ಸಿನ ತುರ್ತು ಬಾಗಿಲು ಮುರಿದು ಹೊರಬಂದರೆ, ಇನ್ನೂ ಹಲವರು ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನವಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಗರದವರು ಎಂದು ವರದಿಯಾಗಿದೆ.
ಘಟನೆಯಲ್ಲಿ ರಾಮಿ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ಸತ್ಯನಾರಾಯಣ, ಶ್ರೀಲಕ್ಷ್ಮಿ, ನವೀನ್ ಕುಮಾರ್, ಅಖಿಲ್, ಜಶ್ಮಿತಾ, ಅಕಿರಾ, ರಮೇಶ್, ಜಯಸೂರ್ಯ ಮತ್ತು ಸುಬ್ರಮಣಿಯಂ ಎಂಬುವರು ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ನವೀನ್ ಎಂಬಾತ ತಮ್ಮ ಕಾರಿನಲ್ಲಿ ಆರು ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ಕರೆದೊಯ್ದರು. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿ ಹತೋಟಿಗೆ ತಂದಿದ್ದಾರೆ.