ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿ.ಕೆ.ಶಿವಕುಮಾರ್ ವಾಗ್ದಾಳಿ
ʻʻಕುಮಾರಸ್ವಾಮಿ ಒಬ್ಬ ಹುಚ್ಚ, ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮʼʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೂಡಾ ಹಗರಣ ಹೊರಬರುವಲ್ಲಿ ಡಿಸಿಎಂ ಕೈವಾಡವಿದೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʻʻಮೂಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆʼʼ ಎಂದರು.
ʻʻಕೆಲವೊಬ್ಬರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ʼʼ ಎಂದು ಹೇಳಿದರು.
ಮಂಡ್ಯದಲ್ಲಿ ತಾವು ಮಾಡುತ್ತಿರುವ ಜನತಾದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರಕಾರದಿಂದ ಸೂಚನೆ ನೀಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ʻʻಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದು ಹೇಳಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಜನಕ್ಕೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ? ನನಗೆ ಈ ಆರೋಪದ ವಿಚಾರ ಗೊತ್ತೇ ಇಲ್ಲ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲʼʼ ಎಂದರು.
ಕುಮಾರಸ್ವಾಮಿ ಹೇಳಿದ್ದೇನು?
ʻʻಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ. ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರವಿದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆʼʼ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಎಂದೂ ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ, ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದರು.
ಕಾನೂನು ಸಲಹೆಗಾರ ಈಗ ಎಂಎಲ್ ಎ ಆಗಿದ್ದಾರೆ. ಅವರು ಸಿಎಂ ಪರ ಸುದೀರ್ಘವಾಗಿ ಮಾತನಾಡಿದ್ದಾರೆ. 62 ಕೋಟಿ ರೂ ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ ಹಲವು ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ. ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡುತ್ತೀರಾ? ರೈತರನ್ನು ಬೀದಿಗೆ ನಿಲ್ಲಿಸಿದ್ದೀರಿ ಇದು ಸರಿಯಾ? ನಿಮ್ಮ ಪತ್ನಿಯ ಹಣ ಕೇಳುತ್ತಿದ್ದೀರಲ್ಲಾ ಆ ದೇವರು ಮೆಚ್ಚುತ್ತಾನಾ ಎಂದು ಪ್ರಶ್ನಿಸಿದ್ದಾರೆ.