Attack on Conductor | ಮರಾಠಿ ಮಾತನಾಡದ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಹಲ್ಲೆ; ಕನ್ನಡ ಸಂಘಟನೆಗಳ ಆಕ್ರೋಶ
ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಪುಂಡರ ದಾಳಿಯಿಂದ ತೀವ್ರ ಗಾಯಗೊಂಡಿರುವ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.;
ಬೆಳಗಾವಿ ಗಡಿಯಲ್ಲಿ ಮರಾಠಿ ಭಾಷಿಕರ ಪುಂಡಾಟ ಮಿತಿ ಮೀರಿದೆ. ಇಲ್ಲಿಯವರೆಗೆ ಮಹಾರಾಷ್ಟ್ರ ಪ್ರವೇಶಿಸುವ ರಾಜ್ಯದ ಬಸ್ಸುಗಳಿಗೆ ಮಸಿ ಬಳಿಯುವ, ಕಲ್ಲತೂರಾಟ ನಡೆಸುತ್ತಿದ್ದ ಪುಂಡರು ಈಗ ಮರಾಠಿ ಮಾತನಾಡದ ಕಾರಣಕ್ಕೆ ಬೆಳಗಾವಿ ನಗರ ಸಾರಿಗೆ ಬಸ್ಸಿನ ನಿರ್ವಾಹಕ ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಪುಂಡರ ದಾಳಿಯಿಂದ ತೀವ್ರ ಗಾಯಗೊಂಡಿರುವ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಯುವಕ ಹಾಗೂ ಯುವತಿ ಬಸ್ ಹತ್ತಿದ್ದಾರೆ. ನಿರ್ವಾಹಕ ಮಹಾದೇವ್ ಹುಕ್ಕೇರಿ ಟಿಕೆಟ್ ಪಡೆಯುವಂತೆ ಕನ್ನಡದಲ್ಲಿ ಕೇಳಿದಾಗ ಯುವತಿ ಆಧಾರ್ ಕಾರ್ಡ್ ತೋರಿಸಿ ಎರಡು ಟಿಕೆಟ್ ಕೇಳಿದ್ದಾರೆ. ಆಗ ನಿರ್ವಾಹಕರು ನಿಮಗಷ್ಟೇ ಉಚಿತ ಪ್ರಯಾಣ. ಯುವಕ ಹಣ ನೀಡಿ ಟಿಕೆಟ್ ಪಡೆಯಬೇಕು ಎಂದು ಹೇಳಿದ್ದಾರೆ. ಈ ವೇಳೆ ಯುವಕ-ಯುವತಿ ನಿರ್ವಾಹಕರನ್ನು ಕನ್ನಡ ಏಕೆ ಬೊಗಳುತ್ತೀ, ಮರಾಠಿ ಕಲಿತುಕೋ. ನಮ್ಮೂರು ತಲುಪಿದ ಮೇಲೆ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅದರಂತೆ ಸಣ್ಣ ಬಾಳೇಕುಂದ್ರಿ ಗ್ರಾಮಕ್ಕೆ ಬಸ್ ಬಂದಾಗ ಯುವಕ ಸೇರಿದಂತೆ ಗ್ರಾಮಸ್ಥರು ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಬಸ್ಸಿಗೆ ಮುತ್ತಿಗೆ, ಮನಸೋಇಚ್ಛೆ ಹಲ್ಲೆ
ಮರಾಠಿ ಭಾಷಿಕರು ತಮ್ಮ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ನಿರ್ವಾಹಕ ಮಹಾದೇವ ಹುಕ್ಕೇರಿ ವಿವರಿಸಿದ್ದಾರೆ. “ಸಾರಿಗೆ ಬಸ್ ಸಣ್ಣ ಬಾಳೇಕುಂದ್ರಿ ಗ್ರಾಮಕ್ಕೆ ಬಂದಾಗ ನೂರಾರು ಜನರು ಮುತ್ತಿಗೆ ಹಾಕಿದರು. 20ಕ್ಕೂ ಹೆಚ್ಚು ಯುವಕರು ಬಸ್ ಒಳಗೆ ನುಗ್ಗಿ ಮನಸೋ ಇಚ್ಛೆ ಹಲ್ಲೆ ಮಾಡಿದರು. ತಲೆ, ಬೆನ್ನು, ಕಿಬ್ಬೊಟ್ಟೆ, ಭುಜಕ್ಕೆ ಗುದ್ದಿ, ಕಾಲಿನಿಂದ ಒದ್ದರು. ಬಸ್ ಚಾಲಕರಿಗೂ ಕಪಾಳ ಹಾಗೂ ಹೊಟ್ಟೆಗೆ ಹೊಡೆದರು. ನಾವು ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಬಂದೆವು. ಮಾರಿಹಾಳ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ರಾಜೀ ಮಾಡಿಸಲು ಮುಂದಾದರು” ಎಂದು ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಡಿಸಿಪಿ ಭೇಟಿ
ಪುಂಡರಿಂದ ಹಲ್ಲೆಗೊಳಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಸ್ಆರ್ಟಿಸಿ ಬಸ್ ನಿರ್ವಾಹಕರನ್ನು ಡಿಸಿಪಿ ರೋಹನ್ ಜಗದೀಶ್ ಭೇಟಿ ಮಾಡಿ, ಘಟನೆ ಕುರಿತು ಮಾಹಿತಿ ಪಡೆದರು. ದೂರು ದಾಖಲಿಸಲು ಮಾರಿಹಾಳ ಪೊಲೀಸರು ಹಿಂದೇಟು ಹಾಕಿದ ಕುರಿತು ಮಾಹಿತಿ ಪಡೆದ ಡಿಸಿಪಿ ರೋಹನ್ ಅವರು, “ಹಲ್ಲೆಕೋರರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗುವುದು. ಪೊಲೀಸರು ದೂರು ದಾಖಲಿಸದೇ ರಾಜೀ ಸಂಧಾನಕ್ಕೆ ಯತ್ನಿಸಿದ ಆರೋಪ ಕುರಿತಂತೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಚಿತ್ರದುರ್ಗದ ಐಮಂಗಲ ಬಳಿ ಕರ್ನಾಟಕ ನವ ನಿರ್ಮಾ ಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಬಸ್ ಚಾಲಕನಿಗೆ ಮಸಿ ಬಳಿದರು
ಕನ್ನಡ ಸಂಘಟನೆಗಳ ಆಕ್ರೋಶ
ಕೆಎಸ್ಆರ್ಟಿಸಿ ನೌಕರನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಘಟನೆಯನ್ನು ಕನ್ನಡಪರ ಸಂಘಟನೆಗಳು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿವೆ.
“ಬೆಳಗಾವಿಯಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕು. ಅನಗತ್ಯವಾಗಿ ಗದ್ದಲ ಸೃಷ್ಟಿಸುವ ಮರಾಠಿಗರಿಗೆ ತಕ್ಕ ಪಾಠ ಕಲಿಸುತ್ತೇವೆ" ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದ ಐಮಂಗಲ ಟೋಲ್ ಬಳಿಕ ಕರ್ನಾಟಕ ನವ ನಿರ್ಮಾಣ ಸೇನೆಯ ಮುಖಂಡರು ಮಹಾರಾಷ್ಟ್ರದ ಬಸ್ ಹಾಗೂ ಚಾಲಕನಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಬಸ್‌ಗೆ ಕಪ್ಪು ಮಸಿ ಬಳಿದಿರುವುದು
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿಗರು ರಾಜ್ಯ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಮಹಾರಾಷ್ಟ್ರದ ಬಸ್ ಮೇಲೆ ʼಜೈ ಕರ್ನಾಟಕ, ಜೈ ಕನ್ನಡʼ ಕಪ್ಪು ಮಸಿಯಲ್ಲಿ ಬರೆದು, ಪ್ರತಿಭಟನೆ ದಾಖಲಿಸಿದರು.