ಗಂಧದ ಗುಡಿಯಲ್ಲಿ ಶ್ರೀಗಂಧದ ಎಣ್ಣೆಗೇ ಪರದಾಟ

ಕರ್ನಾಟಕವೆಂದರೆ ಶ್ರೀಗಂಧ, ಶ್ರೀಗಂಧವೆಂದರೆ ಕರ್ನಾಟಕ. ಕರ್ನಾಟಕದಲ್ಲಿ ಬೆಳೆಯುವ ಶ್ರೀಗಂಧದ ಗುಣ, ಜಗತ್ತಿನ ಯಾವುದೇ ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧಕ್ಕಿಲ್ಲ ಎಂಬುದು ರುಜುವಾತಾದ ಸಂಗತಿ. ಈ ಶ್ರೀಗಂಧವನ್ನು ವಿಶ್ವವಿಖ್ಯಾತಗೊಳಿಸಲು ನೂರಾ ಎಂಟು ವರ್ಷಗಳ ಹಿಂದೆ ರೂಪುಗೊಂಡಿದ್ದು, ಮೈಸೂರು ಸ್ಯಾಂಡಲ್‌ ಸೋಪ್‌ ನ ತಯಾರಿಕಾ ಸಂಸ್ಥೆಯಾದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (KSDL). ಈ ಸಂಸ್ಥೆ ಹಲವಾರು ಕಾರಣಗಳಿಂದಾಗಿ ತನಗೆ ಅಗತ್ಯವಾದ ಗಂಧದ ಎಣ್ಣೆಯನ್ನು ತಯಾರಿಸಿಕೊಳ್ಳಲು ಸಾಧ್ಯವಾಗದೆ, ಈಗ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಂಡು, ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು KSDL ಶ್ರಮಿಸುತ್ತಿದೆ. ಈ ಶ್ರೀಗಂಧದ ಲೋಕದೊಳಗೊಂದು ಇಣುಕು ನೋಟ.

Update: 2024-07-07 00:30 GMT

 “ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ…”

ಐದು ದಶಕಗಳ ಹಿಂದೆ ಕನ್ನಡ ನಾಡಿಗೂ, ಕನ್ನಡ ನುಡಿಗೂ ಶ್ರೀಗಂಧಕ್ಕೂ ಇರುವ ಕಳ್ಳು-ಬಳ್ಳಿ ಸಂಬಂಧ, ಶ್ರೀಗಂಧದ ಮರಗಳಿಗೆ ಇರುವ ಮಾರುಕಟ್ಟೆ ಜಗತ್ತಿನಿಂದ ಒದಗಿರುವ ಅಪಾಯವನ್ನು ಕುರಿತಾದ ʻಗಂಧದ ಗುಡಿʼ ಚಿತ್ರ 1973ನೇ ಇಸುವಿಯಲ್ಲಿ ಬಿಡುಗಡೆಯಾಗಿ, ಕನ್ನಡ ಚಿತ್ರರಂಗದ ದಂತಕತೆಯಾಗಿದೆ. ಈ ಚಿತ್ರದಲ್ಲಿ ಕನ್ನಡದ ವರನಟ ಡಾ. ರಾಜ್‌ ಕುಮಾರ್‌ ಅವರು, ಅರಣ್ಯಾಧಿಕಾರಿಯಾಗಿ ಶ್ರಿಗಂಧದ ಕಳ್ಳ ಸಾಗಣೆಯನ್ನು ತಡೆಯಲು ನಡೆಸುವ ಹೋರಾಟವಂತೂ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಗಂಧದ ಗುಡಿ ಬಿಡುಗಡೆಯಾದ ಎರಡು ದಶಕಗಳ ನಂತರ ಅಂದರೆ 1994ರಲ್ಲಿ ಡಾ. ರಾಜ್ ಕುಮಾರ್‌ ಅವರ ಪುತ್ರ ಶಿವರಾಜ್‌ ಕುಮಾರ್‌ ಅವರ ʻಗಂಧದ ಗುಡಿʼ ಭಾಗ 2 1994ರಲ್ಲಿ ಬಿಡುಗಡೆಯಾಗಿ ಅಷ್ಟೇ ಯಶಸ್ಸು ಸಾಧಿಸಿತು. ಮತ್ತೆ 28 ವರ್ಷಗಳ ನಂತರ ಇತ್ತೀಚೆಗೆ ನಮ್ಮನ್ನಗಲಿದ ಪುನೀತ್‌ ರಾಜ್‌ ಕುಮಾರ್‌ ಅವರ ʼಗಂಧದ ಗುಡಿʼ ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಅಷ್ಟೇ ಯಶಸ್ಸು ಸಾಧಿಸಿತು. ಹಾಗಾಗೇ ಕನ್ನಡ ಚಿತ್ರರಂಗವನ್ನು ಹಾಲಿವುಡ್‌, ಬಾಲಿವುಡ್‌ ಮಾದರಿಯಲ್ಲಿ ʼಸ್ಯಾಂಡಲ್ ವುಡ್ʼ ಎಂದು ಇತ್ತೀಚಿನ ದಿನಗಳಲ್ಲಿ ಕರೆಯಲಾಗುತ್ತಿದೆ.

ಶ್ರೀಗಂಧದ ಬಗ್ಗೆ ಈ ಪ್ರಸ್ತಾವನೆಗೊಂದು ಕಾರಣವಿದೆ. ಮೈಸೂರು ಪ್ರದೇಶದಲ್ಲಿ ದೊರೆಯುವ ಶ್ರೀಗಂಧವು ವಿಶ್ವದಲ್ಲಿಯೇ ಅತ್ಯುತ್ತಮ ದರ್ಜೆಯದೆಂದು ಮಾನ್ಯತೆ ಪಡೆದಿದೆ. ಹಾಗಾಗೇ ಕರ್ನಾಟಕಕ್ಕೆ ʻಗಂಧದ ಗುಡಿʻʼ ಎಂಬ ಅನ್ವರ್ಥನಾಮ ಒಪ್ಪುತ್ತದೆ. ಕರ್ನಾಟಕಕ್ಕೆ ಶ್ರೀಗಂಧದ ಬೀಡು ಎಂಬ ಅನ್ವರ್ಥ ನಾಮವೂ ಇದೆ.

ಗಂಧದ ಎಣ್ಣೆ ಕೊರತೆ

ಶ್ರೀಗಂಧವೆಂದರೆ ಕರ್ನಾಟಕ, ಕರ್ನಾಟವೆಂದರೆ ಶ್ರೀಗಂಧ ಎಂದೇ ಖ್ಯಾತಿ ಗಳಿಸಿರುವ ನಾಡು, ಈಗ ವಿದೇಶಿ ಕಂಪನಿಗಳ ಪೈಪೋಟಿಯನ್ನು ಎದುರಿಸಲು ಹೆಣಗಾಡುತ್ತಿದೆ. ನಮ್ಮ ಪರಂಪರೆಯ ಸಂಕೇತವಾಗಿರುವ ಮೈಸೂರು ಸ್ಯಾಂಡಲ್‌ ಸೋಪ್‌ ನ ತಯಾರಿಕಾ ಸಂಸ್ಥೆಯಾದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (KSDL) ಸರ್ವ ಪ್ರಯತ್ನ ನಡೆಸುತ್ತಿದೆ. ಶತಮಾನದ ಇತಿಹಾಸವಿರುವ ರಾಜ್ಯ ಸರ್ಕಾರದ ಐತಿಹಾಸಿಕ ಮೈಸೂರ ಸ್ಯಾಂಡಲ್‌ ಸೋಪ್‌ ತಯಾರಕ ಸಂಸ್ಥೆಯಾದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (KSDL)ಗೆ ಇತ್ತೀಚೆಗೆ ಗಂಧದ ಎಣ್ಣೆ ಕೊರತೆ ಕಾಡುತ್ತಿದೆ. 2020-21ರಲ್ಲಿ ದಕ್ಕುತ್ತಿದ್ದ 4068.28 ಕೆಜಿ ಗಂಧದ ಎಣ್ಣೆಯ ಪೂರೈಕೆ, 2023-24 ವೇಳೆಗೆ 719 ಕೆಜಿಗೆ ಕುಸಿದಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಹಾಗಾಗಿ ಸಂಸ್ಥೆಯ ಶೇ 90ರಷ್ಟು ಅಗತ್ಯವಾದ ಗಂಧದ ಎಣ್ಣೆ (ಸುಮಾರು 7000 ಕೆಜಿ) ಯನ್ನು ಶ್ರೀಗಂಧವನ್ನು ಹೆಚ್ಚಾಗಿ ಬೆಳೆಯುವ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳು ಯೋಚಿಸಲಾಗುತ್ತಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಅಧಿಕಾರಿಗಳ ಪ್ರಕಾರ, KSDL ರೈತರಿಂದ 94 ಟನ್ ಗಳಷ್ಟು ಶ್ರೀಗಂಧದ ಮರದ ತುಂಡುಗಳನ್ನು ಖರೀದಿಸಿತ್ತು. ಆದರೆ ರೈತರು ಅವಧಿಗೆ ಮುನ್ನವೇ ಗಂಧದ ಮರದ ಕಳ್ಳ ಸಾಗಣಿಕೆ ದಾರರ ಭಯದಿಂದ ಹಾಗೂ ಅವುಗಳನ್ನು ರಕ್ಷಿಸುವ ಕಷ್ಟದಿಂದ ಪಾರಾಗಲು ಮರಗಳ ಕಡಿತಮಾಡಿರುವುದರಿಂದ ಅವುಗಳು ತಮ್ಮ ಸುತ್ತುಪಟ್ಟಿಯ ದಪ್ಪವನ್ನು ಕಳೆದುಕೊಳ್ಳುವುದರಿಂದ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿದೆ.

ಶ್ರೀಗಂಧದ ಸಸಿಗಳ ಹಂಚಿಕೆ

ಹಾಗಾಗಿ, ರೈತರಿಗೆ ಸಂಸ್ಥೆಯೇ ಶ್ರೀಗಂಧದ ಸಸಿಗಳನ್ನು “ಬೆಳೆಯಿರಿ , ಶ್ರೀಮಂತರಾಗಿ” ಯೋಜನೆಯಡಿಯಲ್ಲಿ ಹಂಚಿಕೆ ಮಾಡುತ್ತದೆ. ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಕಳೆದ ಡಿಸೆಂಬರ್‌ ವೇಳೆಗೆ 2800 ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಸುಮಾರು 100 ಟನ್‌ ಶ್ರೀಗಂಧದಿಂದ ನಾಲ್ಕರಿಂದ ಐದು ಕೆಜಿ ಎಣ್ಣೆಯನ್ನು ಮಾತ್ರ ಉತ್ಪಾದಿಸಬಹುದು. 20 ರಿಂದ 25 ವರ್ಷದ ಮರವಾದರೆ, ರೈತರಿಗೆ ಅದರ ಗಾತ್ರ ಮತ್ತು ಸುತ್ತುಪಟ್ಟಿಯನ್ನು ಆಧರಿಸಿ, ರೂ 30,000 ದಿಂದ ರೂ 50,000 ದ ವರೆಗೆ ಪಡೆಯುತ್ತಾರೆ. ಒಂದು ಕೆಜಿ ಶ್ರೀಗಂಧದ ಬೆಲೆ ಸುಮಾರು ರೂ 6,000 ಎಂದು ಹೇಳಲಾಗುತ್ತಿದೆ. ತನ್ನ ಅಧೀನದಲ್ಲಿರುವ ಬೆಂಗಳೂರಿನ 37.04 ಎಕರೆ ಪ್ರದೇಶದಲ್ಲಿ KSDL ಕೇವಲ 7.12 ಎಕರೆ ಪ್ರದೇಶವನ್ನು ಮಾತ್ರ ಬಳಕೆ ಮಾಡಿಕೊಂಡಿದೆ. ಮೈಸೂರಿನ 33.16 ಎಕರೆ ಪ್ರದೇಶದಲ್ಲಿ 24.15 ಎಕರೆ ಬಳಕೆಯಾಗಿದೆ. ಹಾಗೆಯೇ ಶಿವಮೊಗ್ಗದ 25.09 ಎಕರೆ ಪ್ರದೇಶದಲ್ಲಿ 11.03 ಎಕರೆ ಪ್ರದೇಶ ಮಾತ್ರ ಶ್ರೀಗಂಧದ ಕೃಷಿಗೆ ಬಳಕೆಯಾಗಿದೆ. ಎಂದು ಸಂಸ್ಥೆಯ ಮೂಲಗಳು ಹೇಳಿವೆ.

ಅಪರೂಪದ ಶ್ರೀಗಂಧ

ಶ್ರೀ ಗಂಧದ ಮರ ಪ್ರಪಂಚದ ಕೆಲವೇ ದೇಶಗಳಲ್ಲಿ ಬೆಳೆಯುವ ಅಪರೂಪದ ವೃಕ್ಷ. ಭಾರತವೂ ಸೇರಿದಂತೆ ಆಸ್ಟ್ರೇಲಿಯಾ, ಮಲೇಷಿಯಾ, ಇಂಡೋನೇಷಿಯಾ ಹಾಗೂ ಶ್ರೀಲಂಕಾ ದೇಶಗಳಲ್ಲಿ ಶ್ರೀಗಂಧ ಹೆಚ್ಚಾಗಿ ಬೆಳೆಯುತ್ತದೆ. ಅತಿಸೂಕ್ಷ್ಮ ಲಕ್ಷಣಗಳ ಶ್ರೀಗಂಧದ ಮರ ತನ್ನ ಸುಗಂಧ ಮತ್ತು ಹೊಂಬಣ್ಣದಿಂದ ಇತರ ಮರಗಳಿಗಿಂತ ತೀರಾ ಭಿನ್ನ. ಸುಗಂಧ ದ್ರವ್ಯ, ಸಾಬೂನು, ಹಾಗೂ ಔಷಧಿ ತಯಾರಿಕೆಯಲ್ಲಿ ಶ್ರೀಗಂಧವನ್ನು ಬಳಸಲಾಗುತ್ತದೆ. ಶ್ರೀಗಂಧದ ಮರ ಕುಶಲಕರ್ಮಿಗಳ ಪ್ರೀತಿಯ ಮರ. ಇದರಲ್ಲಿ ತಯಾರಾಗುವ ಕಲಾಕೃತಿಗಳಿಗೆ ವಿಶ್ವದಾದ್ಯಂತ ಭಾರಿ ಬೇಡಿಕೆ ಇದೆ. ಅಗರಬತ್ತಿ ತಯಾರಿಕೆಯಲ್ಲಿ ಘಮಘಮಿಸುವ ಶ್ರೀಗಂಧ ಇರಲೇಬೇಕು. ಕರ್ನಾಟಕದಲ್ಲಿ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಶ್ರೀಗಂಧವನ್ನು ಬೆಳೆಯಲಾಗುತ್ತದೆ. ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಕೋಲಾರ ಹಾಗೂ ಚಿತ್ರದುರ್ಗದ ಪ್ರದೇಶಗಳಲ್ಲಿ ಶ್ರೀಗಂಧವನ್ನು ಬೆಳೆಯಲಾಗುತ್ತದೆ.

ಜಾಗತಿಕ ಟೆಂಡರ್‌ ಆಹ್ವಾನ

108 ವರ್ಷಗಳ ಇತಿಹಾಸವಿರು KSDL ಗಂಧದ ಎಣ್ಣೆಯಿಂದು ಸುಮಾರು 60 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತದೆ. ತನ್ನ ಉತ್ಪಾದನೆಗಳನ್ನು ಹೆಚ್ಚಿಸಿಕೊಳ್ಳಲು KSDL ಸುಮಾರು 26 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಪಡೆದುಕೊಂಡು ತಯಾರಿಕೆ ಆರಂಭಿಸಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಶ್ರೀಗಂಧದ ಎಣ್ಣೆಯಿಂದ ಉತ್ಪನ್ನಗಳನ್ನು ತಯಾರಿಸುವ ಏಕೈಕ ಸಂಸ್ಥೆ KSDL. ತಾನು ಕೊರತೆ ಎದುರಿಸುತ್ತಿರುವ ಶ್ರೀಗಂಧದ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ. ಇಷ್ಟೇ ಅಲ್ಲದೆ ಸ್ಥಳೀಯವಾಗಿ ಶ್ರೀಗಂಧದ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಿ ರೈತರಿಂದ ನೇರವಾಗಿ ಶ್ರೀಗಂಧವನ್ನು ಪಡೆದುಕೊಂಡು ಅದರಿಂದ ಎಣ್ಣೆಯನ್ನು ಸಂಸ್ಕರಿಸಿ, ಸ್ವಾವಲಂಬಿಯಾಗಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಎಂದು KSDL ನ ನಿರ್ವಾಹಕ ನಿರ್ದೇಶಕ ಡಾ. ಪ್ರಶಾಂತ್‌ ಪಿ. ಕೆ. `ದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿ ಹಂಚಿಕೊಂಡಿದ್ದಾರೆ.

ವಹಿವಾಟಿನಲ್ಲಿ ಏರಿಕೆ

KSDL ಅಧಿಕಾರಿಗಳೇ ಹೇಳುವಂತೆ. ಸಂಸ್ಥೆ 2024 ರ ಮಾರ್ಚಿ ಹೊತ್ತಿಗೆ 1,500 ಕೋಟಿ ರೂಪಾಯಿಗಳಿಗೂ ಹೆಚ್ಚು ವಹಿವಾಟು ಮಾಡಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಅತ್ಯಧಿಕ ಏರಿಕೆ. ಈ ವರ್ಷ KSDL ತನ್ನ ವಹಿವಾಟನ್ನು 195 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಳ್ಳುವ ಮೂಲಕ ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ಶೇ 14.25 ರಷ್ಟು ಬೆಳವಣಿಗೆ ಸಾಧಿಸಿದೆ. KSDL ಮೈಸೂರು ಸ್ಯಾಂಡಲ್‌ ವೇವ್‌ ಡಿಯೋ ಸೋಪ್‌, ಶವರ್‌ ಜೆಲ್ಗಳು, ಗ್ಲಿಸರಿನ್‌ ಆಧಾರಿತ ಪಾರದರ್ಶಕ ಸ್ನಾನದ ಬಾರ್‌ ಮತ್ತು ಸೂಪರ್‌ ಪ್ರೀಮಿಯಮ್‌ ಬಾತ್‌ ಸೋಪ್‌ ಸೇರಿದಂತೆ ೨೧ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾರಾಟ ಮಾಡಿದೆ. ಇದು ವಹಿವಾಟು ಪ್ರಗತಿಗೆ ಹೆಚ್ಚು ಸಹಕಾರಿಯಾಗಿದೆ. ಬೇಡಿಕೆ ಆದ್ಯತೆಗೆ ತಕ್ಕಂತೆ ಉತ್ಪಾದನೆ 100 ಗ್ರಾಮಿನ ಮೈಸೂರು ಸ್ಯಾಂಡಲ್‌ ಮಿಲೇನಿಯಂ ಗೋಲ್ಡ್ ಗೆ 1,000 ಸಾವಿರ ರೂಪಾಯಿ ಇದೆ. ಸಾಬೂನುಗಳಲ್ಲಿ ಶುದ್ಧ ಗಂಧದ ಎಣ್ಣೆ ಬಳಸುವುದಕ್ಕೆ ಕಂಪನಿ ಹೆಸರುವಾಸಿಯಾಗಿದೆ. ಯುವ ಜನಾಂಗದ ಬೇಡಿಕೆ ಹಾಗೂ ಆದ್ಯತೆಗಳ ಪೂರೈಕೆ ನಿಟ್ಟಿನಲ್ಲಿ ಅತ್ಯಧಿಕ ಉತ್ಪಾದನೆ ಮಾಡಲಾಗಿದೆ ಎಂದು ಡಾ. ಪ್ರಶಾಂತ್‌ ಪಿ. ಕೆ. ಸ್ಪಷ್ಟನೆ ನೀಡುತ್ತಾರೆ.

“ಬೆಂಗಳೂರು ಹೊರತುಪಡಿಸಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಉತ್ತಮ ಯಂತ್ರೋಪರಕಣಗಳನ್ನು ಬಳಸಲಾಗುವುದು ಅದಕ್ಕಾಗಿ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆದಿದೆ. ಹೊಸ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ. ಸೋಪುಗಳ ಇನ್ನಿತರ ಮಾರಾಟ ಮಾರುಕಟ್ಟೆಯಲ್ಲಿ KSDL ಕೇವಲ ೨.೫ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಭವಿಷ್ಯದಲ್ಲಿ ತನ್ನ ವ್ಯಾಪಾರ ವಿಸ್ತರಣೆಯ ದೃಷ್ಟಿಯಿಂದ ಉತ್ತರ ಭಾರತದ ರಾಜ್ಯಗಳ ಮೇಲೆ ಕೇಂದ್ರೀಕರಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್‌ KSDL ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಡಾ. ಪ್ರಶಾಂತ್‌ ಹೇಳುತ್ತಾರೆ.

KSDLನ ಹೆಚ್ಚಿನ ಮಾರಾಟವು ಪ್ರಸ್ತುತ ದಕ್ಷಿಣದ ರಾಜ್ಯಗಳಲ್ಲಿ ಶೇ.೮೧ರಷ್ಟಿದೆ . ಮೈಸೂರು ಸ್ಯಾಂಡಲ್‌ ವೇವ್‌ ಅರಿಷಿನ ಸೋಪನ್ನು ಉತ್ತಮ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತು ನೈಸರ್ಗಿಕ ಅರಿಷಿನದಿಂದ ತಯಾರಿಸಲಾಗುತ್ತಿದೆ. ಇದು ಪುದೀನ ಸುಗಂಧ ಹೊಂದಿದೆ ಎಂದು KSDL ನ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. “ಕಂಪನಿಯು ಗ್ಲಿಸರಿನ್‌ ಆಧಾರಿತ ಉತ್ಪನ್ನಗಳದ್ದೇ ಪ್ರತ್ಯೇಕ ಸೋಪ್‌ ತಳವನ್ನು ಸಿದ್ಧಪಡಿಸುತ್ತಿದೆ. ಅದರ ನಿರ್ದಿಷ್ಟ ಮಾನದಂಡಗಳನ್ನು ತುಲಪಲು ಸುಧಾರಿತ ಯಂತ್ರೋಪಕರಣಗಳನ್ನು ಬಳಸುತ್ತಿದೆ.

ತಾನು ಎದುರಿಸುತ್ತಿರುವ ಗಂಧದ ಎಣ್ಣೆಯ ಕೊರತೆಯನ್ನು ನೀಗಿಸಿಕೊಳ್ಳಲು KSDL ಸುಮಾರು 670 ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು 3,586 ಎಕರೆ ಪ್ರದೇಶದಲ್ಲಿ ಶ್ರೀಗಂಧವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಒಪ್ಪಂದ ಮಾಡಿಕೊಂಡಿದೆ. “ಈ ಮೂಲಕ ಇನ್ನುಮುಂದೆ ಶ್ರೀಗಂಧದ ಎಣ್ಣೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯತೆ ಇದೆ” ಎನ್ನುತ್ತಾರೆ ಪ್ರಶಾಂತ್.‌

ನೂರಾಎಂಟು ವರ್ಷದ ಹಿಂದೆ ನೋಡಿದಾಗ

KSDLಗೆ ಸುಮಾರು 108 ವರ್ಷಗಳ ಇತಿಹಾಸವಿದೆ. 1916ರಲ್ಲಿ ಸ್ಯಾಂಕಿರಸ್ತೆಯಲ್ಲಿರುವ ಅರಣ್ಯ ಇಲಾಖೆಗೆ ಭೇಟಿ ನೀಡಿದ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ಮರದ ತುಂಡುಗಳನ್ನು ಕಂಡು, ಅದರಿಂದ ಶ್ರೀಗಂಧದ ಎಣ್ಣೆಯನ್ನು ಏಕೆ ತೆಗೆಯಬಾರದು ಎಂದು ಯೋಚಿಸಿದರು. ಹಾಗಾಗಿ ಆಗ ದಿವಾನರಾಗಿದ್ದ ಸರ್.‌ ಎಂ ವಿಶ್ವೇಶ್ವರಾಯ ಅವರಿಂದ ಶ್ರೀಗಂಧದ ಎಣ್ಣೆ ತಯಾರಿಕೆಗೆ ಮೈಸೂರು ಸ್ಯಾಂಡಲ್‌ ಸೋಪ್‌ ಯುಗ ಆರಂಭವಾಯಿತು. ಮೊದಲು ಬೆಂಗಳೂರಿನಲ್ಲಿ ಮರದ ತೊಗಟೆ ತೆಗೆದು ಚಿಕ್ಕ ಗಾತ್ರಕ್ಕೆ ಶ್ರೀಗಂಧದ ತುಂಡುಗಳನ್ನು ಸಿದ್ಧಪಡಿಸುವ ಘಟಕ ಆರಂಭವಾಯಿತು. 1918ರಲ್ಲಿ ಮೈಸೂರಿನ ಅರದನಹಳ್ಳಿ (ಈಗಿನ ಅಶೋಕಪುರಂ) ಶ್ರೀಗಂಧದ ಎಣ್ಣೆಯ ಕಾರ್ಖಾನೆಯನ್ನು ಒಡೆಯರ್‌ ಆರಂಭಿಸಿದರು. ೩೬ ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀಗಂಧದ ಎಣ್ಣೆ ಕಾರ್ಖಾನೆಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಮತ್ತು ಧೂಪಗಳನ್ನು ತಯಾರಿಸಲಾಗುತ್ತದೆ.

ಸೋಪು ತಯಾರಿಕೆಗೆ ಪ್ರೇರಣೆ ಏನು?

1918ರಲ್ಲಿ ಫ್ರಾನ್ಸ್‌ ನಿಂದ ಬಂದಿದ್ದ ಅತಿಥಿಗಳು ಒಡೆಯರ್‌ ಅವರಿಗೆ ಅಮೋಘವಾದ ಸುವಾಸನೆಯ ಸಾಬೂನು ಬಿಲ್ಲೆಗಳನ್ನು ಕಾಣಿಕೆಯಾಗಿ ನೀಡಿದರು. ಆಶ್ಚರ್ಯದ ಸಂಗತಿಯೆಂದರೆ, ಭಾರತದಲ್ಲಿಯೇ ತಯಾರಾದ ಶ್ರೀಗಂಧದ ಎಣ್ಣೆಯಿಂದ ಈ ಪರಿಮಳದ ಸಾಬೂನುಗಳನ್ನು ತಯಾರಿಸಲಾಗಿತ್ತು. ಆಗ ಈ ಕ್ರಿಯಾಶೀಲ ಒಡೆಯರ್‌ ಅವರಿಗೆ ಮೈಸೂರು ರಾಜ್ಯ ಕೂಡ ಏಕೆ ಗಂಧದ ಎಣ್ಣೆಯಿಂದ ಸಾಬೂನು ತಯಾರಿಸಬಾರದು ಎಂಬ ಪ್ರಶ್ನೆ ಮೂಡಿತು. ಅದರ ಪರಿಣಾಮವಾಗಿಯೇ ಹುಟ್ಟಿಕೊಂಡಿದ್ದು, ಮೈಸೂರು ಸ್ಯಾಂಡಲ್ಲ ಸೋಪ್.‌ ಈ ಸಾಬೂನು 1918ರಲ್ಲಿ ಮಾರುಕಟ್ಟೆ ತಲುಪಿತು. ಹೀಗೆ 106 ವರ್ಷಗಳ ಹಿಂದೆ ಹುಟ್ಟಿದ ಮೈಸೂರು ಸ್ಯಾಂಡಲ್‌ ಸೋಪ್‌ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು. ತನ್ನದೇ ಬ್ರಾಂಡ್‌ ರೂಪಿಸಿಕೊಂಡು ಜಗತ್ತಿನ ಅತ್ಯಾಧುನಿಕ ಸೋಪು ತಯಾರಿಸುವ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಿದೆ.

ಕರ್ನಾಟಕದ ಶ್ರೀಗಂಧ ನೀತಿ

ಶ್ರೀಗಂಧದೊಂದಿಗೆ ಕರ್ನಾಟಕಕ್ಕೆ ಇರುವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಕರ್ನಾಟಕ ಇತ್ತೀಚೆಗೆ ಶ್ರೀಗಂಧ ನೀತಿಯನ್ನು ಜಾರಿಗೊಳಿಸಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಶ್ರೀಗಂಧದ ಮರಗಳ ರಕ್ಷಣೆ, ಕಟಾವು ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಇರುವ ತೊಡಕನ್ನು ನಿವಾರಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ. ಜೂನ್‌ 10, 2024ರ ವರದಿಯ ಪ್ರಕಾರ ಐತಿಹಾಸಿಕ ಮೈಸೂರ ಸ್ಯಾಂಡಲ್‌ ಸೋಪ್‌ ತಯಾರಕ ಸಂಸ್ಥೆಯಾದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (KSDL) ಈ ವರ್ಷ ಅತ್ಯಧಿಕ ಸೋಪುಗಳ ಮಾರಾಟ ಮಾಡುವ ಮೂಲಕ ತನ್ನ 40 ವರ್ಷಗಳ ಗರಿಷ್ಠ ಮಾರಾಟದ ವಹಿವಾಟನ್ನು ಮೀರಿಸಿ ದಾಖಲೆ ರೂಪಿಸಿದ

Tags:    

Similar News