KPSC FIGHT | ಕಾರ್ಯದರ್ಶಿ ಕೆ.ಎಸ್ ಲತಾ ಕುಮಾರಿ ವರ್ಗಾವಣೆ

ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದ ಆಯೋಗದ ಕಾರ್ಯದರ್ಶಿ ಕೆ ಎಸ್‌ ಲತಾ ಕುಮಾರಿ ಅವರನ್ನು ಸರ್ಕಾರ ರಜೆಯಲ್ಲಿ ಕಳುಹಿಸಿತ್ತು.

Update: 2024-03-06 06:42 GMT

ಬೆಂಗಳೂರು: ಕೆಪಿಎಸ್‌ಸಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದ ಸಂಘರ್ಷಕ್ಕೆ ಕೊನೆ ಹಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಕಾರ್ಯದರ್ಶಿ ಕೆಎಸ್‌ ಲತಾ ಕುಮಾರಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕೆಪಿಎಸ್‌ ಸಿ ಅಧ್ಯಕ್ಷರ ಜೊತೆಗಿನ ಸಂಘರ್ಷದಿಂದ ಸುದ್ದಿಯಾಗಿದ್ದ ಲತಾ ಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್)‌ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ.

ಫೆ. 7ರಿಂದ ರಜೆಯಲ್ಲಿರುವ ಲತಾ ಕುಮಾರಿ ಅವರ ಬದಲಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆಯ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕೆ. ರಾಕೇಶ್‌ ಕುಮಾರ್‌ ಅವರಿಗೆ ನೀಡಲಾಗಿತ್ತು. ಇದೀಗ, ಲತಾ ಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿರುವುದರಿಂದ ರಾಕೇಶ್‌ ಕುಮಾರ್‌ ಅವರಿಗೆ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇದನ್ನೂ ಓದಿ: ಕೆಪಿಎಸ್‌ಸಿ ಜಟಾಪಟಿ: ಏನಿದು ವಿವಾದ? ಯಾಕೆ ಸಂಘರ್ಷ?

ಕೆಪಿಎಸ್‌ಸಿ ಆಯೋಗದ ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಹಾಗೂ ಕಾರ್ಯದರ್ಶಿ ಲತಾ ಕುಮಾರಿ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಈ ಹಿನ್ನಲೆಯಲ್ಲಿ ಫೆ.7 ರಿಂದ 10 ದಿನಗಳ ಕಾಲ ರಜೆ ಅವರಿಗೆ ನೀಡಲಾಗಿತ್ತು. ರಜೆ ಮುಗಿಸಿ ಬಂದಾಗಲೂ ಗಳಿಕೆ ರಜೆ ಮುಂದುವರಿಸುವಂತೆ ಸರ್ಕಾರ ಸೂಚಿಸಿತ್ತು. ಇದರಿಂದ ಬೇಸತ್ತ ಅವರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದರು. ಹೀಗಾಗಿ, ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ನೇಮಕಗೊಂಡ ಆರು ತಿಂಗಳೊಳಗೆ ಲತಾ ಕುಮಾರಿ ಅವರು ವರ್ಗಾವಣೆ ಗೊಂಡಿದ್ದಾರೆ.

Tags:    

Similar News