ಕೆಪಿಸಿಸಿ ಅಧ್ಯಕ್ಷ ಬದಲಾವಣೆ: ಸಿಎಂ ಹೈಕಮಾಂಡ್ ಭೇಟಿ ವೇಳೆ ಚರ್ಚೆ?

ಹೈಕಮಾಂಡ್‌ನ ಒತ್ತಡದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಎರಡು ಹೆಸರುಗಳನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ ಮತ್ತು ಈಶ್ವರ್ ಖಂಡ್ರೆ. ಈ ಎರಡೂ ನಾಯಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ.;

Update: 2025-06-10 08:18 GMT

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಈ ವಿಷಯವನ್ನು ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ಪಕ್ಷದ ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆಯ ಒತ್ತಡ ಹೆಚ್ಚುತ್ತಿದೆ. ಈಗಿನ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು "ಒಂದೇ ವ್ಯಕ್ತಿಗೆ ಒಂದು ಹುದ್ದೆ" ಎಂಬ ಪಕ್ಷದ ನೀತಿಗೆ ಅನುಗುಣವಾಗಿ ಈ ಸ್ಥಾನ ಬಿಟ್ಟುಕೊಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಶಿವಕುಮಾರ್ ಅವರಿಗೆ ಸಂದೇಶ ರವಾನೆಯಾಗಿದ್ದು, ಈ ವಿಷಯವು ದೆಹಲಿಯ ಭೇಟಿಯಲ್ಲಿ ಪ್ರಮುಖ ಚರ್ಚಾ ವಿಷಯವಾಗಿದೆ.

ಹೈಕಮಾಂಡ್‌ನ ಒತ್ತಡದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಎರಡು ಹೆಸರುಗಳನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ ಮತ್ತು ಈಶ್ವರ್ ಖಂಡ್ರೆ. ಈ ಎರಡೂ ನಾಯಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ರಾಜ್ಯದ ವಿವಿಧ ಸಮುದಾಯಗಳ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಅಭಿಪ್ರಾಯ ಕಡೆಗಣಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳದಿರಲು ಹೈಕಮಾಂಡ್ ಒಲವು ತೋರಿದೆ,

ಸತೀಶ್ ಜಾರಕಿಹೊಳಿಗೆ ದೆಹಲಿಗೆ

ಮಹತ್ವದ ಬೆಳವಣಿಗೆಯೊಂದರಲ್ಲಿ. ಸಚಿವ ಸತೀಶ್ ಜಾರಕಿಹೊಳಿ ಅವರೂ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನ ಆಹ್ವಾನದ ಮೇರೆಗೆ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಮುಖವಾಗಿ ಚರ್ಚೆಯಲ್ಲಿದೆ. ಜಾರಕಿಹೊಳಿ, ಎಸ್‌ಟಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಜಾರಕಿಹೊಳಿ, ಈ ಭೇಟಿಯಲ್ಲಿ ತಮ್ಮ ಆಕಾಂಕ್ಷೆಯನ್ನು ಸ್ಪಷ್ಟಪಡಿಸುವ ಸಾಧ್ಯತೆ ಇದೆ.

ಡಿ.ಕೆ. ಶಿವಕುಮಾರ್ ಷರತ್ತು

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ದ ಆದರೆ ಸಿಎಂ ಬದಲಾವಣೆ ಆದಾಗ ಬಿಟ್ಟುಕೊಡುತ್ತೇನೆ ಎನ್ನುತ್ತಿರುವ ಡಿ.ಕೆ. ಶಿವಕುಮಾರ್. ಆದರೆ ಈಗಾಗಲೇ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಬಣದವವರು ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಅಂಶದ ಜೊತೆಗೆ ಕೆ.ಸಿ. ವೇಣುಗೋಪಾಲ್ ಹೇಳಿದಂತೆ ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಪಟ್ಟು. ಈ ಹಿನ್ನಲೆಯಲ್ಲಿ ಈಗ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆ ಡಿ. ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಇದೀಗ ಸಿದ್ದರಾಮಯ್ಯ ಜೊತೆ ಚರ್ಚೆ ಬಳಿಕ ಸ್ಪಷ್ಟ ತಿರ್ಮಾನ ಹೊರ ಬೀಳಲಿದೆ. 

Tags:    

Similar News