KMF Employees Protest | ಫೆ.1ರಿಂದ ಕೆಎಂಎಫ್‌ ನೌಕರರ ಮುಷ್ಕರ; ಹಾಲು ಪೂರೈಕೆ ವ್ಯತ್ಯಯ

ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ, ನೌಕರರು ಕೆಎಂಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಏಳನೇ ವೇತನ ಜಾರಿಗೆ ಒತ್ತಾಯಿಸಿ ಫೆ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.;

Update: 2025-01-28 13:37 GMT
ನಂದಿನಿ ಹಾಲಿನ ಪಾರ್ಲರ್‌

ರಾಜ್ಯಾದ್ಯಂತ ಫೆ.1 ರಿಂದ ಹಾಲು, ಮೊಸರು ಮಾರಾಟ ಸ್ಥಗಿತಗೊಳ್ಳಲಿದೆ. ವೇತನ ತಾರತಮ್ಯ ನಿವಾರಣೆ, ಪರಿಷ್ಕೃತ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಅಧಿಕಾರಿಗಳು ಹಾಗೂ ನೌಕರರ ಸಂಘ ಫೆ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದು, ಹಾಲು, ಮೊಸಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

7ನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ ಮಾಡುವಂತೆ ಪಟ್ಟು ಹಿಡಿದಿದ್ದು, ಹೈನೋದ್ಯಮದ ಎಲ್ಲ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್‌ ಹಾಗೂ ಎಲ್ಲಾ ಒಕ್ಕೂಟಗಳ ಅಧಿಕಾರಿಗಳು, ಸಿಬ್ಬಂದಿ ನಿರ್ಧರಿಸಿದ್ದಾರೆ. ಈ ಬಗ್ಗೆ ಕೆಎಂಎಫ್‌ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿದ್ದು, ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಏಳನೇ ವೇತನ ಜಾರಿ ಮಾಡುವಂತೆ ಎರಡು ಮೂರು ತಿಂಗಳಿಂದ ಕೆಎಂಎಫ್ ಮಂಡಳಿ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ, ಆದರೆ, ಕೆಎಂಎಫ್‌ ಆಡಳಿತ ಮಂಡಳಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ ಎಂಬುದು ಅಧಿಕಾರಿಗಳು ಹಾಗೂ ನೌಕರರ ಆರೋಪವಾಗಿದೆ.

ಸಾರ್ವಜನಿಕರ ಆತಂಕ

ತಾಂತ್ರಿಕ ಅಡೆ-ತಡೆ ನೆಪದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ, 7ನೇ ವೇತನ ಆಯೋಗದ ವರದಿ ಜಾರಿಯಿಂದ ಹಾಲು ಒಕ್ಕೂಟಗಳಿಗೆ ಹೊರೆಯಾಗುವುದಿಲ್ಲ, ಆದರೂ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಮುಷ್ಕರದಿಂದಾಗಿ ರಾಜ್ಯದ ಹೈನು ಉದ್ಯಮಕ್ಕೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಇದು ನಿಂತರೆ ಪರಿಸ್ಥಿತಿ ದುಸ್ತರವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್‌ ಮತ್ತು ಒಕ್ಕೂಟಗಳು ಕಳೆದ ಹಲವು ವರ್ಷಗಳಿಂದ ಶೇ.10ರಷ್ಟು ವಹಿವಾಟು ವೃದ್ಧಿಸಿಕೊಂಡಿವೆ. ಆದರೆ ಆಡಳಿತ ವೆಚ್ಚವನ್ನು ಶೇ.2ರೊಳಗೆ ಇರಿಸಲು ಪ್ರಯತ್ನಿಸುತ್ತಿವೆ. ಸದ್ಯ ಬೆಲೆ ಏರಿಕೆಯ ಕಾರಣದಿಂದಾಗಿ ವಾರ್ಷಿಕ ವೆಚ್ಚವನ್ನು ಶೇ.4 ರಿಂದ 5ಕ್ಕೆ ಹೆಚ್ಚಿಸುವಂತೆ ಕಳುಹಿಸಿದ ಪ್ರಸ್ತಾವನೆಗೆ ಸಹಕಾರ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಕಳೆದ 2024 ಅಕ್ಟೋಬರ್‌ 1ರಿಂದ 7ನೇ ವೇತನ ಆಯೋಗ ವರದಿ ಜಾರಿಗೊಳಿಸಲು ಆದೇಶಿಸಿದ್ದರೂ ತಾಂತ್ರಿಕ ನೆಪವೊಡ್ಡಿ ನಿಲ್ಲಿಸಲಾಗಿದೆ. ನಾವು ಕಳೆದ ಎರಡು- ಮೂರು ತಿಂಗಳಿನಿಂದ ಇದರ ಬಗ್ಗೆ ಮನವಿ ಮಾಡುತ್ತಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವೇತನ ಪರಿಷ್ಕರಣೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Tags:    

Similar News