Brand Nandini | ರಾಷ್ಟ್ರ ರಾಜಧಾನಿಯಲ್ಲಿʼನಮ್ಮ ನಂದಿನಿʼ: ಉತ್ಪನ್ನಗಳ ಮಾರಾಟಕ್ಕೆ ಸಿಎಂ ಚಾಲನೆ
ರಾಷ್ಟ್ರ ರಾಜಧಾನಿ ದೆಹಲಿಗೆ ತನ್ನ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿರುವ ಕನ್ನಡಿಗರ ಹೆಮ್ಮೆಯ ಕೆಎಂಎಫ್(ಕರ್ನಾಟಕ ಹಾಲು ಒಕ್ಕೂಟ)ನ ನಂದಿನ ಬ್ರಾಂಡ್ ಉತ್ಪನ್ನಗಳ ಮಾರಾಟಕ್ಕೆ ಗುರುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ದೆಹಲಿಗೆ ಭೇಟಿ ನೀಡಿರುವ ಅವರು ನವದೆಹಲಿಯ ಅಶೋಕ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು. ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕದ ನಂದಿನಿಯ ಹವಾಕ್ಕೆ ಅಧಿಕೃತವಾಗಿ ಗುರುವಾರದಿಂದ ಚಾಲನೆ ನೀಡಿದರು. ಅಮುಲ್ ಮತ್ತು ಮದರ್ ಡೇರಿಯಂತಹ ಪ್ರಮುಖ ಬ್ರಾಂಡ್ಗಳ ನಡುವೆ ರಾಜ್ಯದ ನಂದಿನಿ ಇನ್ನು ಮುಂದೆ ದೆಹಲಿಯಲ್ಲಿ ತನ್ನ ಜಾಲ ವಿಸ್ತರಿಸಿಕೊಳ್ಳಲಿದೆ.
ನಾಲ್ಕು ಲಕ್ಷ ಹಾಲು ಮಾರಾಟ ಗುರಿ
ನವದೆಹಲಿಯಲ್ಲಿ ನಿತ್ಯ ಇನ್ನು ಮುಂದೆ 3 ರಿಂದ 4 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಹಾಗೇ, ದೆಹಲಿಯ ಜನರಿಗೆ ಇನ್ನು ಮುಂದೆ ಪರಿಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿಯ, ಶೇ 100 ರಷ್ಟು ಪರಿಶುದ್ಧ ಹಾಲು ಸಿಗಲಿದೆ. ಶುದ್ಧ ಹಸುವಿನ ಹಾಲನ್ನು ದೆಹಲಿ ಜನರಿಗೆ ನೀಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಈ ಸಂದರ್ಭದಲ್ಲಿ ಹೇಳಿದರು.
ಜಾಗತಿಕ ಮಟ್ಟದಲ್ಲಿ ನಂದಿನಿ ಹವಾ
ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವವನ್ನು ಕೆಎಂಎಫ್ ವಹಿಸಿತ್ತು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ‘ನಂದಿನಿ’ ಬ್ರ್ಯಾಂಡ್ ಹೆಸರು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಶ್ವಕಪ್ ವೇಳೆ ನಂದಿನಿ ಉತ್ಪನ್ನಗಳನ್ನೂ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಗಮನ ಸೆಳೆದಿದ್ದವು.
ವಿಶ್ವಕಪ್ ವೇಳೆ ನಂದಿನಿ ಬ್ರ್ಯಾಂಡ್ನ ಫ್ರೋಝನ್ ಸಿಹಿತಿಂಡಿಗಳು, ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್ ನಂದಿನಿ ಸ್ಪ್ಲಾಶ್ ಅನ್ನು ಕೆಎಂಎಫ್ ಅಮೆರಿಕಕ್ಕೆ ಪೂರೈಕೆ ಮಾಡಿತ್ತು. ಆ ಮೂಲಕ ಕನ್ನಡಗಿರ ನಂದಿನಿ ಬ್ರಾಂಡ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು.
ಇದೀಗ ಐವತ್ತನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕೆಎಂಎಫ್, ತನ್ನ ಈ ಮೈಲಿಗಲ್ಲಿನ ಸಾಧನೆಯ ಜೊತೆಗೇ ತನ್ನ ವಹಿವಾಟು ವಿಸ್ತರಿಸಿಕೊಳ್ಳುತ್ತಾ, ದೇಶ- ವಿದೇಶಗಳ ಗ್ರಾಹಕರಿಗೆ ತಲುಪುವ ಯತ್ನಗಳನ್ನು ಯಶಸ್ವಿಯಾಗಿ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಮಾರಾಟ ಜಾಲ ವಿಸ್ತರಣೆ ಕೂಡ ಗುರುವಾರ ಆರಂಭವಾಗಿದೆ.