ಸಸ್ಯಕಾಶಿಯ ವಿವಿಧ ಹೂಗಳಿಂದ ಅರಳಿದ ಕಿತ್ತೂರು ಕೋಟೆ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ
ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನವು ಗುರುವಾರದಿಂದ ಆ.18 ರವರೆಗೆ ನಡೆಯಲಿದ್ದು, 12 ದಿನಗಳ ಕಾಲ ಲಾಲ್‍ಬಾಗ್ ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನ ಜರುಗಲಿದೆ.;
ಲಾಲ್‌ಬಾಗ್‌ನಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು.
ಲಾಲ್‌ಬಾಗ್‌ನಲ್ಲಿ ನಡೆಯಲಿರುವ ʼವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವʼನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಗುರುವಾರ ಬೆಳಿಗ್ಗೆ ಲಾಲ್‌ಬಾಗ್‌ಗೆ ಆಗಮಿಸಿದ್ದ ಅವರು, ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಸ್ವಾತಂತ್ರ್ಯ ಸೇನಾನಿಗಳಿಗೆ ನಮಿಸಿದರು. ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನವು ಇಂದಿನಿಂದ ಆ.18 ರವರೆಗೆ ನಡೆಯಲಿದ್ದು, 12 ದಿನಗಳ ಕಾಲ ಲಾಲ್‍ಬಾಗ್ ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನ ಜರುಗಲಿದೆ ಎಂದರು.
1.75 ಲಕ್ಷಕ್ಕೂ ಹೆಚ್ಚು ಹೂ, ಗಿಡಗಳ ಪ್ರದರ್ಶನ
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಇಂಡೋ - ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂ ಜೋಡಣೆ ಹಲವು ವಿನೂತನ ಪರಿಕಲ್ಪನೆಯಡಿ ಪ್ರದರ್ಶಿಸಲಾಗಿದ್ದು, 1.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗಿದೆ. ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಹೂಕುಂಡಗಳ ಆಕರ್ಷಕ ಜೋಡಣೆಯ ನಡುವೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಎದೆಮಟ್ಟದ ಪುತ್ಥಳಿಗಳನ್ನು ಪ್ರದರ್ಶಿಸಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ಕೋಟೆಯ ಪುಷ್ಪ ಮಾದರಿಯ ಮುಂದೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡದರು.
ಹತ್ತು ಲಕ್ಷ ಜನ ಆಗಮಿಸುವ ನಿರೀಕ್ಷೆ
ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಜೋಡಣೆಯ ಕಲೆಗಳ ಸ್ಫರ್ಧೆಗಳನ್ನು ಲಾಲ್‍ಬಾಗ್‍ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಆ. 9 ರಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿಕೃಷ್ಣ ಉದ್ಘಾಟಿಸಲಿದ್ದಾರೆ. ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆ.16 ರಂದು ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 9 ಲಕ್ಷದಿಂದ 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ
ಲಾಲ್‍ಬಾಗ್ ಒಳಾಂಗಣದಲ್ಲಿ ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಕ್ಯಾಮರಾಗಳನ್ನು ಗಾಜಿನ ಮನೆ ಒಳಗೊಂಡಂತೆ ಲಾಲ್‍ಬಾಗ್‍ನ ಎಲ್ಲಾ ಆಯ್ದ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಲಾಲ್‍ಬಾಗ್‍ನ ಯಾವುದೇ ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ
1ರಿಂದ 10ನೇ ತರಗತಿವರೆಗಿನ ಶಾಲಾ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ರಜಾದಿನಗಳನ್ನು ಹೊರತುಪಡಿಸಿ ಪ್ರದರ್ಶನದ ಪೂರ್ಣ ಸಮಯದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.