ಸ್ವಂತ ಖರ್ಚಿನಲ್ಲೇ ರಸ್ತೆ ದುರಸ್ತಿಗೆ ಮುಂದಾದ ಉದ್ಯಮಿ ಕಿರಣ್ ಮಜುಂದಾರ್ ಶಾ
ರಸ್ತೆ ಗುಂಡಿ, ಡಾಂಬರೀಕರಣ ಮತ್ತು ಮೋರಿಗಳನ್ನು ತಮ್ಮ ಸ್ವಂತ ಹಣದಲ್ಲಿಯೇ ದುರಸ್ತಿ ಮಾಡಿಸಲು ಉದ್ಯಮಿ ಕಿರಣ್ ಮಜುಂದಾರ್ ಶಾ ನಿರ್ಧರಿಸಿದ್ದು, ಹೆಬ್ಬಗೋಡಿ ಭಾಗದ 10 ಕ್ಕೂ ಹೆಚ್ಚು ರಸ್ತೆಗಳನ್ನು ಕೊಡುವಂತೆ ಕೇಳಿದ್ದಾರೆ.
ಮಜುಂದಾರ್-ಶಾ
ಸಿಲಿಕಾನ್ ಸಿಟಿ ರಸ್ತೆ ಗುಂಡಿಗಳ ಕುರಿತು ಸರ್ಕಾರವನ್ನು ಪದೇ ಪದೇ ಟ್ವೀಟ್ ಮೂಲಕ ಟೀಕಿಸಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಇದೀಗ ತಮ್ಮ ಸ್ವಂತ ಖರ್ಚಿನಲ್ಲೇ 10 ಕ್ಕೂ ಹೆಚ್ಚು ರಸ್ತೆಗಳ ದುರಸ್ತಿಗೆ ಮುಂದಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಭಾಗದ ರಸ್ತೆಗಳ ಪಟ್ಟಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ರಸ್ತೆ ಗುಂಡಿ, ಡಾಂಬರೀಕರಣ ಮತ್ತು ಮೋರಿಗಳ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಿರಣ್ ಮಜುಮ್ದಾರ್ ಶಾ ವಿರುದ್ಧ ಸರ್ಕಾರದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಕಿರಣ್ ಮಜುಮ್ದಾರ್ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಉದ್ಯಮಿಗಳ ತಮ್ಮ ಸಿಎಸ್‌ಆರ್ ಅನುದಾನವನ್ನು ಎಲ್ಲಿ ಬಳಸುತ್ತಿವೆ ಎಂದು ಪ್ರಶ್ನಿಸಿದ್ದರು.
ಸರ್ಕಾರದ ನಡೆಗೆ ಬೇಸರ
ರಸ್ತೆ ಗುಂಡಿಗಳ ವಿಚಾರ ಪ್ರಸ್ತಾಪಿಸಿದ ಉದ್ಯಮಿಗಳನ್ನು ಸರ್ಕಾರ ಟೀಕಿಸುತ್ತಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೋಹನ್‌ದಾಸ್ ಪೈ ಅವರು ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಘಟನೆಯನ್ನು ನೆನಪಿಸಿದ್ದಾರೆ. ಈ ಮಧ್ಯೆ, ಕಿರಣ್ ಮಜುಮ್ದಾರ್ ಶಾ ಅವರು, ಸರ್ಕಾರ ಮಾಡದಿದ್ದರೆ ಏನಂತೆ, ನಾನೇ ರಸ್ತೆಗಳನ್ನು ದುರಸ್ತಿ ಮಾಡಿಸುತ್ತೇನೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಜೊತೆ ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ. ಬಯೋಕಾನ್ ಸಂಸ್ಥೆ ಇರುವ ಭಾಗದ ರಸ್ತೆಗಳ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಿರಣ್ ಮಜುಮ್ದಾರ್ ಶಾ ಅವರು ವಿದೇಶಿ ಉದ್ಯಮಿಯೊಬ್ಬರ ಹೇಳಿಕೆ ಉಲ್ಲೇಖಿಸಿ, ಬೆಂಗಳೂರಿನ ರಸ್ತೆಗಳ ದುಸ್ಥಿತಿ ಮತ್ತು ಎಲ್ಲೆಡೆ ಕಸ ತುಂಬಿರುವ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೂಡಿಕೆಗೆ ಸರ್ಕಾರವು ಬೆಂಬಲ ನೀಡುತ್ತಿಲ್ಲವೇ ಎಂದು ಆ ವಿದೇಶಿ ಉದ್ಯಮಿಯೊಬ್ಬರು ಪ್ರಶ್ನಿಸಿದ್ದಾಗಿ ಹೇಳಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು "ನಿರಂತರ ಟೀಕೆಯ ಬದಲು ಸಾಮೂಹಿಕ ಪ್ರಯತ್ನ" ಅಗತ್ಯ ಎಂದು ಹೇಳಿದ್ದರು.
ರಸ್ತೆಗಳ ದುರಸ್ತಿಗೆ 1,100 ಕೋಟಿ ರೂ. ಮಂಜೂರಾಗಿದೆ, ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿದೆ. ತಮ್ಮ ಯಶಸ್ಸಿಗೆ ಕಾರಣವಾದ ರಾಜ್ಯ ಮತ್ತು ನಗರಕ್ಕೆ ಶಾ ಅವರು ಧಕ್ಕೆ ತರುತ್ತಿದ್ದಾರೆ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದರು. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ ಸಾರ್ವಜನಿಕವಾಗಿ ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದರು.