Before criticizing the citys roads and waste, businessmen should remember the governments support
x

ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಉದ್ಯಮಿ ಕಿರಣ್ ಮಜುಂದಾರ್ ಶಾ

ಟೀಕಿಸುವ ಮುನ್ನ ಸರ್ಕಾರದ ನೆರವು ಮರೆಯಬೇಡಿ; ಉದ್ಯಮಿಗಳಿಗೆ ಡಿಕೆಶಿ ತಿರುಗೇಟು

ರಸ್ತೆ ಗುಂಡಿ ಮುಚ್ಚಲು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕು. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ಬೆದರಿಸುವುದೇ ನಿಮಗೆ ಮುಖ್ಯವಾದರೆ, ಅದನ್ನೇ ಮಾಡಿ ಎಂದು ಡಿಸಿಎಂ ಡಿ.ಕೆ..ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.


Click the Play button to hear this message in audio format

ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಮೂಲಸೌಕರ್ಯಗಳ ಬಗ್ಗೆ ಟೀಕಿಸುವ ಮೂಲಕ ಐಟಿಬಿಟಿ ಉದ್ಯಮಿಗಳು ಸರ್ಕಾರದ ನೆರವು ಮರೆಯುತ್ತಿದ್ದಾರೆ. ಬೆಂಗಳೂರು ಹಾಗೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಹಾಗೂ ತ್ಯಾಜ್ಯದ ಬಗ್ಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್'ನಲ್ಲಿ ಸಂದೇಶ ಹಾಕುವ ಮೂಲಕ, ಅವರ ಉದ್ಯಮಕ್ಕೆ ನೆಲೆ ಕಲ್ಪಿಸಿರುವ ದೇಶ ಹಾಗೂ ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ. 25 ವರ್ಷಗಳ ಹಿಂದೆ ಅವರು ಎಲ್ಲಿದ್ದರು? ಅವರ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ಇರುವುದು ಬೆಂಗಳೂರಿನದ್ದು. ನಮ್ಮ ನೆರವು ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿ, ಉದ್ಯಮಿಗಳನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಈಗ ನಗರವನ್ನು ಟೀಕಿಸುತ್ತಿರುವವರಿಗೆ ಸರ್ಕಾರಗಳು ಎಷ್ಟು ಜಾಗ ನೀಡಿವೆ ಮತ್ತು ಎಷ್ಟು ನೆರವು ನೀಡಿವೆ ಎಂಬುದನ್ನು ಸ್ಮರಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಗರಿಷ್ಠ ಪ್ರಮಾಣದ ಕೆಲಸ

ರಸ್ತೆ ಗುಂಡಿ ಮುಚ್ಚಲು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕು. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ಬೆದರಿಸುವುದೇ ನಿಮಗೆ ಮುಖ್ಯವಾದರೆ, ಅದನ್ನೇ ಮಾಡಿ. ನಾನು ಯಾರನ್ನೂ ಪ್ರಶ್ನಿಸುವುದಿಲ್ಲ, ಟೀಕಿಸುವುದಿಲ್ಲ. ಪ್ರಧಾನಿ ಮೋದಿಯವರೇ ಬೆಂಗಳೂರನ್ನು ಹೊಗಳಿದ್ದಾರೆ. ಆದರೆ, ಇವರು ಪ್ರಧಾನಿಯವರ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಏನು ಹೇಳುವುದು ಎಂದು ಪ್ರಶ್ನಿಸಿದ್ದಾರೆ.

ಸಿಎಸ್‌ಆರ್‌ ನಿಧಿ ಏನಾಗುತ್ತಿದೆ ?

ಬೆಂಗಳೂರಿನಿಂದ ಇಷ್ಟೆಲ್ಲಾ ಪಡೆದುಕೊಂಡಿರುವ ಈ ಕಂಪನಿಗಳು, ತಮ್ಮ ಸಿಎಸ್‌ಆರ್ ನಿಧಿಯನ್ನು ಏನು ಮಾಡುತ್ತಿವೆ? ಎಲ್ಲಿ ವೆಚ್ಚ ಮಾಡುತ್ತಿವೆ? ರಸ್ತೆ ವಿಸ್ತರಣೆಗೆ ಇವರು ತಮ್ಮ ಜಾಗ ಕೊಡುತ್ತಾರಾ? ಯಾರೊಬ್ಬರೂ ನೀಡುವುದಿಲ್ಲ. ಎಲ್ಲದಕ್ಕೂ ತನ್ನದೇ ಆದ ಇತಿಮಿತಿಗಳಿರುತ್ತವೆ. ಅವರು ಎಲ್ಲಿ ಬೆಳೆದಿದ್ದಾರೆ, ಎಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಕಿಡಿಕಾರಿದ್ದಾರೆ.

ಎಲ್ಲರಿಗೂ ಬೆಂಗಳೂರು ಟಾರ್ಗೆಟ್‌

ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಸಹ ಇದನ್ನೇ ಮಾಡುತ್ತಿದ್ದಾರೆ ಎಂದಿದ್ದಾರೆ.

ದೇಶದ ಪ್ರಗತಿಗೆ ನಗರದ ಕೊಡುಗೆ ಅಪಾರ

'ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಯರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಕೇಂದ್ರ ಸರ್ಕಾರಕ್ಕೆ ಸುಮಾರು ಶೇ.40 ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಏನಿದು ವಿವಾದ?

ಉದ್ಯಮಿ ಕಿರಣ್‌ ಮಜುಂದಾರ್ ಶಾ ಅ.13ರಂದು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ, "ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು, ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಸುತ್ತಲೂ ಇಷ್ಟೊಂದು ಕಸ ಏಕೆ ಇದೆ? ಇಲ್ಲಿನ ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ, ಗಾಳಿ ಅನುಕೂಲಕರವಾಗಿದ್ದಾಗ ಭಾರತವು ಏಕೆ ಉತ್ತಮ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ?" ಎಂದು ಕೇಳಿದರು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದರು. ಇದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಹಲವು ಸಚಿವರು ಉದ್ಯಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

Read More
Next Story