KIADB SCAM | ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ: ವಿವರಣೆ ಕೇಳಿದ ರಾಜ್ಯಪಾಲರು

Update: 2024-09-02 08:15 GMT

ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಮರ ಮುಂದುವರಿದಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಎಂ ಬಿ ಪಾಟೀಲ್ ಬಳಿಕ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕರಣದಲ್ಲಿ ರಾಜ್ಯಪಾಲರು ವಿವರಣೆ ಕೇಳಿ ಪತ್ರ ಬರೆದಿದ್ದಾರೆ.

ಕೆಐಎಡಿಬಿ (KIADB) ಯಿಂದ ತಮ್ಮ ಕುಟುಂಬದ ಟ್ರಸ್ಟ್ಗೆ ಸಿಎ ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ, ರಾಜ್ಯಪಾಲ ತಾವರ್‌ ಚಂದ್‌ ಗೆಹಲೋಟ್‌ ವಿವರಣೆ ಕೇಳಿ ಪತ್ರ ಬರೆದಿದ್ದಾರೆ.

ಸಚಿವರಾಗಿ ತಮ್ಮ ಪ್ರಭಾವ ಬಳಸಿ ಕೆಐಎಡಿಬಿಯಿಂದ ತಮ್ಮ ಕುಟುಂಬದ ಸಿದ್ದಾರ್ಥ ಟ್ರಸ್ಟ್ಗೆ ಸಿಎ ನಿವೇಶನ ಮಂಜೂರು ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಕೇಳಿಬಂದಿತ್ತು.

ಈ ಆರೋಪದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸೂಚಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಏನಿದು ಕೆಐಎಡಿಬಿ ಪ್ರಕರಣ?

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ವರ್ಗ ಟ್ರಸ್ಟಿಗಳಾಗಿರವ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬೆಂಗಳೂರಿನಲ್ಲಿ ಕೆಐಎಡಿಬಿಯಿಂದ ಐದು ಎಕರೆ ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ.

ಪ್ರಿಯಾಂಕ್ ಖರ್ಗೆ ಸಚಿವರಾಗಿ ತಮ್ಮ ಪ್ರಭಾವ ಬಳಸಿ ಹೀಗೆ ಸರ್ಕಾರಿ ಸೌಲಭ್ಯ ಪಡೆದಿದ್ದು ಸರಿಯೇ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದರು.

ಆ ದೂರಿನ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ತಮ್ಮ ವಿರುದ್ಧ ದೂರು ದಾಖಲಾಗಿರುವುದು ಮತ್ತು ಅದಕ್ಕೆ ರಾಜ್ಯಪಾಲರು ವಿವರಣೆ ಕೋರಿ ಪತ್ರ ಬರೆದಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರು ಎರಡೆರಡು ಸಂವಿಧಾನ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

“ರಾಜ್ಯಪಾಲರಿಗೆ ಎರಡು ಸಂವಿಧಾನಗಳು ಇವೆ. ಬಿಜೆಪಿ, ಜೆಡಿಎಸ್ನದ್ದು ಒಂದು ಸಂವಿಧಾನವಾದರೆ, ಕಾಂಗ್ರೆಸ್ನದ್ದು ಒಂದು ಸಂವಿಧಾನ. ನಮ್ಮ ಕುಟುಂಬದ ವಿಚಾರದಲ್ಲಿ ಬಿಜೆಪಿ ಈ ಮೊದಲು ಹತ್ತಾರು ಆರೋಪ ಮಾಡುತ್ತಿತ್ತು. ಬಳಿಕ ಎರಡನೇ ದಿನ ಐದು ಆರೋಪಕ್ಕೆ ಕುಸಿಯಿತು. ಈಗ ಅವರೆಲ್ಲ ಸುಮ್ಮನಿದ್ದಾರೆ. ಛಲವಾದಿ ನಾರಾಯಣಸ್ವಾಮಿಯನ್ನು ಬಿಟ್ಟು ಬೇರೆ ಯಾರೂ ಏಕೆ ಮಾತನಾಡುತ್ತಿಲ್ಲ?” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

“ನಾನೂ ಕೆಳಮನೆ ಸದಸ್ಯ ಅಲ್ವಾ, ಹಾಗಾದರೆ ಬಿವೈ ವಿಜಯೇಂದ್ರ, ಆರ್.ಅಶೋಕ್ ಅವರು ನನ್ನ ವಿಚಾರದಲ್ಲಿ ಮಾತನಾಡುತ್ತಿಲ್ಲ ಏಕೆ? ಅವರೆಲ್ಲ ಸುಮ್ಮನಿದ್ದು ನಾರಾಯಣಸ್ವಾಮಿಯನ್ನೇ ಮುಂದೆ ಬಿಟ್ಟಿರುವುದು ಯಾಕೆ? ಯಾಕೆಂದರೆ ದಲಿತರ ಮೇಲೆ ದಲಿತರನ್ನೇ ಬಿಟ್ಟು ಬಡಿದಾಡಿಕೊಳ್ಳುವಂತೆ ಮಾಡುವುದು, ಕೋಮುವಾದ ಸೃಷ್ಟಿಸುವುದು, ಇದೆಲ್ಲ ಆರ್ಎಸ್ಎಸ್, ಬಿಜೆಪಿ ಸಂಚು” ಎಂದು ವಾಗ್ದಾಳಿ ಮಾಡಿದರು.

Tags:    

Similar News