The Federal Explainer | ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೇತಗಾನಹಳ್ಳಿ ಭೂಕಂಟಕ; ಹೈಕೋರ್ಟ್ ಛಡಿಯೇಟಿಗೆ ಎಚ್ಚೆತ್ತ ಸರ್ಕಾರ
ಕೇತಗಾನಹಳ್ಳಿ ಗೋಮಾಳ ಜಮೀನು ಒತ್ತುವರಿ ವಿಚಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕೇತಗಾನಹಳ್ಳಿ ಭೂಮಿ ವಿವಾದ ಏನು, ಎತ್ತ ಎಂಬ ಕುರಿತಾದ ಸಮಗ್ರ ವರದಿ ಇಲ್ಲಿದೆ.;
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಭೂ ಒತ್ತುವರಿ ವಿವಾದ ಸುತ್ತಿಕೊಂಡಿದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪವಿರುವ ಕೇತಗಾನಹಳ್ಳಿ ಗ್ರಾಮದಲ್ಲಿ 14 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡಿರುವ ಆರೋಪ ಸಂಬಂಧ ನ್ಯಾಯಾಲಯದ ಆದೇಶದಂತೆ ಕಾರ್ಯಾಚರಣೆ ನಡೆಸಿ, ಒತ್ತುವರಿ ತೆರವಿಗೆ ಗಡಿ ಗುರುತಿಸಲಾಗಿದೆ. ಆದರೆ, ಎಚ್‌ಡಿಕೆ ವಿರುದ್ಧದ ಭೂ ಕಂಟಕವು ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳಿಗೂ ಎಡೆಮಾಡಿಕೊಟ್ಟಿದೆ.
ಒತ್ತುವರಿ ಭೂಮಿ ತೆರವಿಗೆ ಲೋಕಾಯುಕ್ತ ಹೊರಡಿಸಿದ ಆದೇಶದ ನಂತರವೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್,ಒಂದಿಂಚೂ ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡದಂತೆ ಆದೇಶಿಸಿತ್ತು. ಅದರನ್ವಯ ಕಾರ್ಯಾಚರಣೆಗೆ ಇಳಿದ ಕಂದಾಯ ಇಲಾಖೆ ಅಧಿಕಾರಿಗಳು, ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆ ಹಾಗೂ ಸುತ್ತಲಿನ ಜಮೀನುಗಳಲ್ಲಿ ಒತ್ತುವರಿಯಾಗಿದ್ದ ಸುಮಾರು 14ರಿಂದ 18ಎಕರೆ ಗೋಮಾಳವನ್ನು ತೆರವು ಮಾಡಿದೆ. ಕೇತಗಾನಹಳ್ಳಿ ಭೂಮಿ ವಿವಾದ ಕುರಿತ ಸಮಗ್ರ ವರದಿ ಇಲ್ಲಿದೆ.
ಏನಿದು ಭೂವಿವಾದ?
1979 ರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ಬಿಡದಿಯ ಕೇತಗಾನಹಳ್ಳಿ ಸಮೀಪದ ಸುಮಾರು 40ಎಕರೆ ಜಮೀನು ಖರೀದಿಸಿದ್ದರು. ಆ ಜಮೀನಿನಲ್ಲಿ ತೋಟದ ಮನೆ ನಿರ್ಮಿಸಿದ್ದು, ಅಡಿಕೆ, ತೆಂಗು ಇತರ ಬೆಳೆಗಳನ್ನು ಬೆಳೆಯಲಾಗಿದೆ.
ಕೆಲವರು ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡಿದ್ದು, ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಖರೀದಿಸಿದ್ದಾರೆ. ಗೋಮಾಳ ಭೂಮಿಯನ್ನು ತೆರವು ಮಾಡಬೇಕು ಎಂದು 2012-13 ರಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಒತ್ತುವರಿ ಭೂಮಿಯು ಪ್ರಸ್ತುತ ಎಕರೆಗೆ 75 ಲಕ್ಷದಿಂದ 1 ಕೋಟಿ ರೂ. ಮೌಲ್ಯ ಹೊಂದಿದೆ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಎಕರೆಗೆ ಕೇವಲ 5,000 ರೂ. ನೀಡಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.
ತೆರವಿಗೆ ಆದೇಶಿಸಿದ ಲೋಕಾಯಕ್ತ, ಹೈಕೋರ್ಟ್
2014 ಆಗಸ್ಟ್ 5 ರಂದು ಲೋಕಾಯುಕ್ತರು ಕೇತಗಾನಹಳ್ಳಿ ವ್ಯಾಪ್ತಿಯ ಸರ್ವೇ ನಂ. 7, 8, 9, 10, 16, 17 ಮತ್ತು 79 ರಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವು ಮಾಡುವಂತೆ ಆದೇಶಿಸಿದ್ದರು. ಆದರೆ, ಆದೇಶ ಜಾರಿಗೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ 2020 ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಒತ್ತುವರಿಯಾಗಿರುವ ಭೂಮಿಯ ಮಾರುಕಟ್ಟೆ ದರ ಹೆಚ್ಚಿರುವುದರಿಂದ ಕೂಡಲೇ ತೆರವು ಮಾಡಿ, ಸ್ವಾಧೀನಕ್ಕೆ ಪಡೆಯಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು. 2020 ಜನವರಿ 14 ರಂದು ಆಗಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ವಿಭಾಗೀಯ ಪೀಠ, ಲೋಕಾಯುಕ್ತ ಆದೇಶವನ್ನು ಮೂರು ತಿಂಗಳೊಳಗೆ ಜಾರಿಗೆ ತರಲಾಗುವುದು ಎಂಬ ಆಗಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹೇಳಿಕೆ ದಾಖಲಿಸಿಕೊಂಡ ನಂತರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡಿತ್ತು.
ತೆರವಿಗೆ ವಿಳಂಬ; ನ್ಯಾಯಾಂಗ ನಿಂದನೆ ಅರ್ಜಿ
ಹೈಕೋರ್ಟ್ ಪರಿಪಾಲನಾ ಹೇಳಿಕೆ ನಂತರವೂ ರಾಜ್ಯ ಸರ್ಕಾರ ಒತ್ತುವರಿ ಭೂಮಿ ತೆರವು ಮಾಡಿರಲಿಲ್ಲ. ಇದರ ವಿರುದ್ಧ ಮತ್ತೆ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. 2020 ಡಿಸೆಂಬರ್ 21 ರಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಅರ್ಜಿ ಪುರಸ್ಕರಿಸಿತು. ಇದಾದ ಬಳಿಕವೂ ನ್ಯಾಯಾಲಯ ಸಾಕಷ್ಟು ಬಾರಿ ಒತ್ತುವರಿ ತೆರವಿಗೆ ಸಮಯಾವಕಾಶ ನೀಡಿದ್ದರೂ ತೆರವಾಗಿರಲಿಲ್ಲ. ಇದು ನ್ಯಾಯಾಲಯವನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತ್ತು.
ವಿಶೇಷ ತನಿಖಾ ತಂಡ ರಚನೆ
2025 ಜನವರಿ 29 ರಂದು ಕೇತಗಾನಹಳ್ಳಿ ಗ್ರಾಮದ ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಐವರು ಸದಸ್ಯರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿತ್ತು. ಆದರೆ, ಅದೇ ದಿನ ಹೈಕೋರ್ಟ್ ವಿಭಾಗೀಯ ಪೀಠವು, ಕೇತಗಾನಹಳ್ಳಿ ಗ್ರಾಮದ ಗೋಮಾಳವನ್ನು ಕೊನೆಯದಾಗಿ ಮಾರಾಟ ಮಾಡಿದವರು ಹಾಗೂ ಈಗ ಸ್ವಾಧೀನದಲ್ಲಿರುವವರಿಗೆ ಯಾವ ರೂಪದಲ್ಲಿ ಲಭ್ಯವಾಯಿತು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು.
ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಬೇಕು. ಅತಿಕ್ರಮಣದಾರರು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಾಲ್ಕು ತಿಂಗಳೊಳಗೆ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ಜ.29 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಭೂ ಒತ್ತುವರಿ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂಬ ಪ್ರತಿಕ್ರಿಯೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಎಸ್ಐಟಿ ರಚಿಸುವಂತೆ ನಿಮಗೆ ಹೇಳಿದವರು ಯಾರು, ಸರ್ಕಾರ ಸಂವಿಧಾನಕ್ಕಿಂತಲೂ ದೊಡ್ಡದಾ ಎಂದು ಪ್ರಶ್ನಿಸಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ನಿಮ್ಮಿಂದ ಆದರೆ ತೆರವು ಮಾಡಿ, ಇಲ್ಲವೇ ಬಿಟ್ಟುಬಿಡಿ ಎಂದು ಕಟುವಾದ ಶಬ್ದಗಳಲ್ಲಿ ಹೇಳಿತ್ತು.
ಭೂವಿವಾದ ಕುರಿತು ಎಚ್‌ಡಿಕೆ ಹೇಳುವುದೇನು?
"ನಾನು ಯಾವುದೇ ಅಕ್ರಮ ಎಸಗಿಲ್ಲ. ನಲವತ್ತು ವರ್ಷಗಳ ಹಿಂದೆ ಖರೀದಿ ಮಾಡಿರುವ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರ ನನ್ನ ವಿರುದ್ಧ ಷಡ್ಯಂತ್ರ್ಯ ರೂಪಿಸಿದ್ದು, ಇದರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿಯೇ ಹೋರಾಟ ನಡೆಸುತ್ತೇನೆ" ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
"ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ . ಒಬ್ಬ ರೈತನಾಗಿ ಬದುಕಲು 40 ವರ್ಷಗಳ ಹಿಂದೆಯೇ ಜಮೀನು ಖರೀದಿಸಿದ್ದೇನೆ. ಒತ್ತುವರಿ ತೆರವು ಮಾಡಬೇಕಾದರೆ ಕಾನೂನು ಪ್ರಕಾರ ಹದಿನೈದು ದಿನಗಳ ಮೊದಲೇ ನೋಟಿಸ್ ನೀಡಬೇಕು. ಆದರೆ, ರಾಜ್ಯ ಸರ್ಕಾರ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡದೇ ತೆರವಿಗೆ ಮುಂದಾಗಿದೆ. ಸರ್ಕಾರದ ದಬ್ಬಾಳಿಕೆ ಎಲ್ಲರಿಗೂ ಗೊತ್ತಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ಪ್ರಕರಣಕ್ಕೂ ಎಸ್ ಐಟಿ ರಚಿಸಿದೆ. ಇಂತಹ ನಡವಳಿಕೆಗಳಿಗೆ ಬೇರೆ ರೀತಿಯಲ್ಲಿ ಉತ್ತರ ನೀಡುತ್ತೇನೆ" ಎಂದು ಕಿಡಿಕಾರಿದ್ದಾರೆ.
"ನಾನು ಖರೀದಿ ಮಾಡಿರುವ ಭೂಮಿಯ ಬಗ್ಗೆ ನೂರು ಬಾರಿ ತನಿಖೆಯಾಗಿದೆ. 40 ವರ್ಷದಿಂದಲೂ ತನಿಖೆ ನಡೆಯುತ್ತಲೇ ಇದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು" ಎಂದು ಹೇಳಿದ್ದರು.
ಭೂ ಒತ್ತುವರಿಯಲ್ಲಿ ಯಾರ ಹೆಸರಿದೆ?
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಬಂಧಿಕರಾದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಹೆಸರಲ್ಲಿ ಕೇತಗಾನಹಳ್ಳಿ ಜಮೀನಿನಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಂದಾಯ, ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ, ಒತ್ತುವರಿ ತೆರವು ಮಾಡಿದ್ದಾರೆ.
ಎಚ್‌ಡಿಕೆ ವಿರುದ್ಧ ರೈತರಿಂದಲೂ ಆರೋಪ
ಕೇತನಗಾನಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ತೋಟದಲ್ಲಿ ರೈತರ ಜಮೀನು ಕೂಡ ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿತ್ತು. ವಿವಾದಿತ ಭೂಮಿಯಲ್ಲಿ ಕಂದಾಯ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದ ವೇಳೆ ರೈತರು ನೇರವಾಗಿಯೇ ಈ ಕುರಿತು ಅಧಿಕಾರಿಗಳ ಬಳಿ ಹೇಳಿದ್ದರು. ನಮ್ಮ ಭೂಮಿಯೂ ಕುಮಾರಸ್ವಾಮಿ ತೋಟದಲ್ಲಿ ಒತ್ತುವರಿಯಾಗಿದೆ. ಹಾಗಾಗಿ ನಮ್ಮ ಸಮ್ಮುಖದಲ್ಲಿಯೇ ಮರು ಸರ್ವೆ ನಡೆಸಬೇಕು ಎಂದು ಕೇತಗಾನಹಳ್ಳಿ ರೈತ ರುದ್ರಯ್ಯ, ಇತರರು ಆಗ್ರಹಿಸಿದ್ದರು.
ಸಂಸದ ಮಂಜುನಾಥ್ ಪ್ರತಿಕ್ರಿಯೆ ಏನು?
1996ರಲ್ಲಿ ಕೇತಗಾನಹಳ್ಳಿಯಲ್ಲಿ 3 ಎಕರೆ 25 ಗುಂಟೆ ಜಮೀನನ್ನು ನಮ್ಮ ತಂದೆ ಖರೀದಿಸಿದ್ದು, ಅವರ ನಿಧನರಾದ ಬಳಿಕ ನನ್ನ ಹೆಸರಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡೆವಿಟ್‌ನಲ್ಲೂ ಮಾಹಿತಿ ಒದಗಿಸಿದ್ದೇನೆ. ರೈತ ಕುಟುಂಬದವರಾದ ನಮಗೆ ಒತ್ತುವರಿ ಅಗತ್ಯವಿಲ್ಲ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳುತ್ತಾರೆ.
ಕುಮಾರಸ್ವಾಮಿ ಸೇರಿ 11ಮಂದಿಗೆ ನೋಟಿಸ್
ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿ 11ಜನರಿಗೆ ರಾಮನಗರ ಜಿಲ್ಲಾಡಳಿತ ಭೂ ಒತ್ತುವರಿ ಸಂಬಂಧ ನೋಟಿಸ್ ಜಾರಿ ಮಾಡಿದೆ. 1964ರ ಕಂದಾಯ ಕಾಯಿದೆಯ ಕಲಂ 104ರಡಿ ಒತ್ತುವರಿ ತೆರವು ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರಿಸದೇ ಹೋದರೆ ಕಾನೂನಿನ ಪ್ರಕಾರ ತೆರವು ಕಾರ್ಯಾಚರಣೆ ನಡೆಸಿ, ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಸದ್ಯ ಕುಮಾರಸ್ವಾಮಿ ಅವರ ತೋಟದಲ್ಲೂ ಒತ್ತುವರಿ ಜಾಗದ ಗಡಿ ಗುರುತಿಸಲಾಗಿದೆ.
ಕೇತಗಾನಹಳ್ಳಿಯ ಸರ್ವೆ ನಂಬರ್ 7, 8, 9, 16/32 ಹಾಗೂ 79ರಲ್ಲಿರುವ ಜಮೀನಿನಲ್ಲಿ ಅನಧಿಕೃತ ಒತ್ತುವರಿ ಮಾಡಿಕೊಳ್ಳಲಾಗಿದೆ. ಸದ್ಯ ಆ ಜಮೀನಿನಲ್ಲಿ ನೀವೇ ಸ್ವಾಧೀನದಲ್ಲಿರುವುದರಿಂದ ನಿಮ್ಮಿಂದಲೇ ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ದಂಡ ವಸೂಲಿ, ಕ್ರಿಮಿನಲ್ ಕೇಸ್ ಏಕೆ ದಾಖಲಿಸಬಾರದು ಎಂಬುದಕ್ಕೆ ಸಮಜಾಯಿಷಿ ನೀಡುವಂತೆ ಸೂಚಿಸಿದೆ.
ಡಿಕೆಶಿ-ಎಚ್‌ಡಿಕೆ ನಡುವೆ ವಾಕ್ಸಮರ
ಕೇತನಗಾನಹಳ್ಳಿ ಭೂವಿವಾದ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಅವರೇ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕೇತಗಾನಹಳ್ಳಿಯ ಭೂಮಿ ಒತ್ತುವರಿ ತೆರವು ಹಿಂದೆ ಸರ್ಕಾರದ ಪಾತ್ರ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಸರ್ಕಾರೇತರ ಸಂಸ್ಥೆಯ ವೈಯಕ್ತಿಕವಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆ. ಅದರಂತೆ ವಿಚಾರಣೆ ನಡೆದಿದೆ. ಒತ್ತುವರಿ ನಡೆದಿಲ್ಲ ಎನ್ನುವುದಾದರೆ ಕುಮಾರಸ್ವಾಮಿ ಅವರಿಗೆ ಭೂಮಿ ವಾಪಸ್ ಬರಲಿದೆ ಎಂದಿದ್ದಾರೆ.
ದೂರುದಾರ ಹಿರೇಮಠ್ ಹೇಳುವುದೇನು?
2012 ರಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅವರು ಬಿಡದಿಯ ಕೇತಗಾನಹಳ್ಳಿಯಲ್ಲಿ ನೂರಾರು ಎಕರೆ ಸರ್ಕಾರಿ ಗೋಮಾಳ ಒತ್ತುವರಿಯಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ನೆರವಾಗುವಂತೆ ಕೋರಿದ್ದರು. ಬಳ್ಳಾರಿ ಗಣಿಗಾರಿಕೆ ವಿರುದ್ಧ ಸಮರ ಸಾರಿ ಭ್ರಷ್ಟರನ್ನು ಜೈಲಿಗೆ ಕಳುಹಿಸಿದ್ದ ಹಿನ್ನೆಲೆಯಲ್ಲಿ ನಮ್ಮನ್ನು ಮಾದೇಗೌಡ ಅವರು ಸಂಪರ್ಕಿಸಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರು. ಆಗ ನಾವು ಲೋಕಾಯುಕ್ತರಿಗೆ ದೂರು ನೀಡಿದೆವು. ಆದೇಶ ನಮ್ಮ ಪರವಾಗಿಯೇ ಬಂದರೂ ಒತ್ತುವರಿ ತೆರವು ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದರು. ಅನಿವಾರ್ಯವಾಗಿ ಹೈಕೋರ್ಟ್‌ನಲ್ಲಿ 2020 ರಲ್ಲಿ ಪಿಐಎಲ್ ಸಲ್ಲಿಸಬೇಕಾಯಿತು. ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿ ತೆರವಿಗೆ ಮುಂದಾಗಿರುವುದು 13ವರ್ಷಗಳ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಎಸ್.ಆರ್. ಹಿರೇಮಠ್ ತಿಳಿಸಿದ್ದಾರೆ.