Cauvery Water Dispute| ತಮಿಳುನಾಡಿಗೆ 1 ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲು ಸರ್ವಪಕ್ಷ ಸಭೆ ತೀರ್ಮಾನ

ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, CWRC ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು CWMC ಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ ಎಂದು ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

Update: 2024-07-14 14:33 GMT

ತಮಿಳುನಾಡಿಗೆ ನಿತ್ಯ  ಒಂದು ಟಿಎಂಸಿ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿಯಂತ್ರಣ ಮಂಡಳಿ (CWRC) ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಕ್ಕೆ ಮೇಲ್ಮನವಿ ಸಲ್ಲಿಸಲು ಮತ್ತು ಕಾನೂನಾತ್ಮಕವಾಗಿ ಹೋರಾಟ ಮಾಡಲು 11,000 ಕ್ಯೂಸೆಕ್ (1 TMC)​ ಬದಲಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲು‌ ಬೆಂಗಳೂರಿನಲ್ಲಿ ಸರ್ಕಾರ ನಡೆಸಿದ ಸರ್ವ ಪಕ್ಷ ಸಭೆ ನಿರ್ಧರಿಸಿದೆ.

ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಕೊರತೆ ನಡುವೆಯೂ ನೆರೆಯ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಮುಖಂಡ ಸಭೆ ವಿಧಾನಸೌಧದಲ್ಲಿ ನಡೆಯಿತು.

ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, CWRC ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು CWMC ಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ ಎಂದು ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಸಭೆ ಬಳಿಕ  ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ʻʻಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಸಹಮತ ಸೂಚಿಸಿದ್ದಾರೆ.ನಿತ್ಯ 11,000 ಕ್ಯೂಸೆಕ್‌ ನೀರು ಬದಲು 8000 ಕ್ಯೂಸೆಕ್‌ ಬಿಡುಗಡೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ. ಸಿಡಬ್ಲ್ಯುಆರ್‌ಸಿ ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸುತ್ತೇವೆ. ಮಳೆ ಕಡಿಮೆಯಾದರೆ 8000 ಕ್ಯೂಸೆಕ್‌ಗಿಂತ ಕಡಿಮೆ ಬಿಡುತ್ತೇವೆ. ಒಂದು ವೇಳೆ ಮಳೆ ಹೆಚ್ಚಾದರೆ ಸಿಡಬ್ಲ್ಯುಆರ್‌ಸಿ ಶಿಫಾರಸಿನಂತೆ ನೀರು ಬಿಡುಗಡೆ ಮಾಡುತ್ತೇವೆʼʼ ಎಂದು ಸ್ಪಷ್ಟಪಡಿಸಿದ್ದಾರೆ.

ʻʻಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. 31.24 ಟಿಎಂಸಿ ನೀರು ಜುಲೈ ತಿಂಗಳಲ್ಲಿ ಬಿಡಬೇಕು. ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆʼʼ ಎಂದು ತಿಳಿಸಿದರು.

ಇನ್ನು ಸರ್ವಪಕ್ಷಗಳ ಸಭೆಯ ಆರಂಭದಲ್ಲಿ ವಿಕ್ಷಗಳ ನಾಯಕರು ಮಾತನಾಡಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಈ ವೇಳೆ ಲೀಗಲ್ ಟೀಮ್‌ನ ಮೋಹನ್ ಕಾತರಕಿ ಮಾತನಾಡಿ, 1 ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್​ ನೀರು ಬಿಡುವುದು ಸೂಕ್ತ ಎಂದು ಸಲಹೆ ನೀಡಿದರು. ನಂತರ ಇವರ ಸಲಹೆಗೆ ಸರ್ವಪಕ್ಷಗಳ ನಾಯಕರು ಸಹ ಒಪ್ಪಿಗೆ ಸೂಚಿಸಿದರು.

"ಜುಲೈ 11 ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ 3 ನೇ ಸಭೆ ನಡೆದು, ಜುಲೈ 12 ನೇ ದಿನಾಂಕದಿಂದ ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ 1 tmc ಯಂತೆ 20 tmc ನೀರು ಬಿಡಲು ಆದೇಶಿಸಿದ್ದಾರೆ. ಸಾಮಾನ್ಯ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.4 tmc, July ನಲ್ಲಿ 31.24tmc ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 tmc ಬಿಡಬೇಕಾಗಿದೆ. ಇಲ್ಲಿಯವರೆಗೂ 5 tmc ಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ," ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜು12 ರಂದು ಸಭೆ ನಡೆಸಿ ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು, CWMA ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು.  ಈ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಅವರು ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ 63 % ಮಾತ್ರ ಭರ್ತಿ ನೀರು ಆಗಿದೆ. ಕಬಿನಿ ಜಲಾಶಯ ಭರ್ತಿ ಯಾಗಿದ್ದು, ಕಳೆದ ಎರಡು ದಿನ 20 ಸಾವಿರ, 19 ಸಾವಿರ ಹಾಗೂ ಇಂದು 13 ಸಾವಿರ ಕ್ಯೂಸೆಕ್ಸ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿದುಹೋಗಿದೆ. ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, CWMC ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು CWMC ಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ ಎಂದರು.

ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ವಕೀಲ ಮೋಹನ್ ಕಾತರಗಿ, ಮಾಜಿ ಸಿಎಂ ಸದಾನಂದಗೌಡ, ಎಂಎಲ್‌ಸಿ ರವಿ ಕುಮಾರ್‌, ಸುರೇಶ್ ಬಾಬು, ನಾಗರಾಜ್ ಯಾದವ್, ಎಜಿ ಶಶಿಕಿರಣ್ ಶೆಟ್ಟಿ, ಮಂಜೇಗೌಡ, ಜಿಟಿ ದೇವೇಗೌಡ, ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಯದವೀರ್ ಒಡೆಯರ್‌, ದರ್ಶನ ಪುಟ್ಟಣ್ಣಯ್ಯ ಹಾಗೂ ಜಲ ಸಂಪನ್ಮೂಲಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಮಿಳುನಾಡಿನ ವಾದ ಏನಿತ್ತು?

ಹಿಂದಿನ ಜಲ ವರ್ಷದಲ್ಲಿ, ಫೆಬ್ರವರಿ 2024 ರಿಂದ ಮೇ 2024 ರ ಅವಧಿಗೆ ಕರ್ನಾಟಕವು ಪರಿಸರದ ಹರಿವನ್ನು ಬಿಡುಗಡೆ ಮಾಡಿರುವುದಿಲ್ಲ. ಪ್ರಸಕ್ತ ಜಲ ವರ್ಷದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ಕರ್ನಾಟಕವು ಸಾಮಾನ್ಯ ಒಳಹರಿವನ್ನು ಪಡೆದಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಆದೇಶದಂತೆ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ವಾದ ಮಂಡಿಸಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಜೂನ್ 1 ರಿಂದ ಆಗಸ್ಟ್ 9 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 41.651 ಟಿ.ಎಂ.ಸಿ ಇರುತ್ತದೆ. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 28.71% ಇರುತ್ತದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇರುತ್ತದೆ ಎಂದು ಕರ್ನಾಟಕ ವಿವರಣೆ ನೀಡಿತ್ತು.

ನೀರು ಬಿಡುಗಡೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25, 2024 ರವರೆಗೆ ಕಾಯುವುದು ಸೂಕ್ತವೆಂದು ಕರ್ನಾಟಕವು ಅಭಿಪ್ರಾಯಿಸಿತು. ತದನಂತರ, ಕರ್ನಾಟಕದ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ಪ್ರಾಧಿಕಾರವು ವಸ್ತಸ್ಥಿತಿಯನ್ನು ಸಮಂಜಸವಾಗಿ ಪರಿಗಣಿಸಬಹುದು ಎಂದೂ ತಮ್ಮ ವಾದವನ್ನು ರಾಜ್ಯ ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಮಂಡಿಸಿತ್ತು. ಹಾಗಿದ್ದರೂ ಜುಲೈ 12 ರಿಂದ ಜುಲೈ 31 ರ ಅವಧಿಯಲ್ಲಿ ಪ್ರತಿನಿತ್ಯ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ಸಭೆ ನಡೆಸಿದರು.

Tags:    

Similar News