ಸಿಎಂ ಟೀಕೆಗೆ ತೇಜಸ್ವಿ ಸೂರ್ಯ ತಿರುಗೇಟು: ಅಮಾವಾಸ್ಯೆ, ಹುಣ್ಣಿಮೆ ವ್ಯತ್ಯಾಸ ತಿಳಿದುಕೊಳ್ಳಿ ಎಂದು ಟಾಂಗ್

ರಾಜ್ಯದ ಆದಾಯವೆಲ್ಲ ಕಾಂಗ್ರೆಸ್ ಚುನಾವಣಾ ಫಂಡ್‌ಗೆ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿ ನಿಧಿ ಖಾಲಿಯಾಗಿದೆ. ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದೆ, ಸರ್ಕಾರಿ ನೌಕರರ ವೇತನಕ್ಕೂ ತೊಂದರೆಯಾಗಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.

Update: 2025-10-23 14:57 GMT

ತಮ್ಮನ್ನು ʼಅಮಾವಾಸ್ಯೆʼ ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಅದು ಅವರ ಸ್ಥಾನಕ್ಕೆ ತಕ್ಕುದಲ್ಲ, ಅಮಾವಾಸ್ಯೆಯಲ್ಲೂ ಸೂರ್ಯ ಇರುತ್ತಾನೆ, ಹುಣ್ಣಿಮೆಯಲ್ಲೂ ಸೂರ್ಯ ಇರುತ್ತಾನೆ, ಚಂದ್ರ ಇರುವುದಿಲ್ಲ. ಈ ಬೇಸಿಕ್ಸ್ ತಿಳ್ಕೊಂಡು ಸಿಎಂ ಮಾತಾಡಲಿ ಎಂದು ಕಿಡಿಕಾರಿದದರು.

ಸರ್ಕಾರದ ಆಡಳಿತಕ್ಕೆ ಗ್ರಹಣ

ಸಿಎಂ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಗ್ರಹಣ ಹಿಡಿದಿದೆ. ಬೆಂಗಳೂರಿನಲ್ಲಿ ಒಂದು ಕಿ.ಮೀ. ರಸ್ತೆ ಸರಿಯಿಲ್ಲ, ಅರ್ಧ ಕಿ.ಮೀ ಫುಟ್ಪಾತ್ ಸರಿಯಿಲ್ಲ. ನಗರದಲ್ಲಿ ಕೊಲೆ, ಅತ್ಯಾಚಾರ, ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಗೃಹ ಸಚಿವರು ಮಾತ್ರ ಬೆಟ್ಟಿಂಗ್ನಲ್ಲಿ ಬ್ಯುಸಿ, ಐಟಿ ಸಚಿವರು ಆರ್ಎಸ್ಎಸ್ ನಿಷೇಧ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಆದಾಯವೆಲ್ಲ ಕಾಂಗ್ರೆಸ್ ಚುನಾವಣಾ ಫಂಡ್‌ಗೆ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿ ನಿಧಿ ಖಾಲಿಯಾಗಿದೆ. ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದೆ, ಸರ್ಕಾರಿ ನೌಕರರ ವೇತನಕ್ಕೂ ತೊಂದರೆಯಾಗಿದೆ ಎಂದರು.

ಟನೆಲ್ ಯೋಜನೆಗೆ ತೇಜಸ್ವಿ ವಿರೋಧ

ಟನೆಲ್ ಯೋಜನೆ ಶ್ರೀಮಂತರಿಗೆ ಮಾತ್ರ. ಲಾಲ್ಬಾಗ್ನ ಕೋಟ್ಯಂತರ ವರ್ಷಗಳ ಹಳೆಯ ಶಿಲೆಯನ್ನು ಒಡೆಯಲು ಸರ್ಕಾರ ಮುಂದಾಗಿದೆ. ನಗರಾಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯು ಡಿಪಿಆರ್ ಸರಿಯಿಲ್ಲ ಎಂದಿದೆ. ನಾವು ವಿಷಯಾಧಾರಿತವಾಗಿ ವಿರೋಧ ಮಾಡುತ್ತಿದ್ದೇವೆ. ಲಾಲ್ಬಾಗ್ನ ಆರು ಎಕರೆ ಅಲ್ಲ, ಆರು ಇಂಚು ಜಾಗವನ್ನೂ ಬಿಡುವುದಿಲ್ಲ, ಒಂದು ವೇಳೆ ಯೋಜನೆ ಜಾರಿಗೆ ಮುಂದಾದರೆ ಸಾರ್ವಜನಿಕ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಟನಲ್‌ ಯೋಜನೆ ವಿರೋಧಿಸಿ ಈಗಾಗಲೇ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದೆ. ಆನ್‌ಲೈನ್‌ ಸಹಿ ಸಂಗ್ರಹದ ಅಭಿಯಾನದಲ್ಲಿ ಯೋಜನೆ ವಿರೋಧಿಸಿ ಒಂದು ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಪಥ ಸಂಚಲನ: ಹೈಕೋರ್ಟ್ ನಿರ್ಧಾರಕ್ಕೆ ಬದ್ಧ

ನ. 2ರಂದು ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಪ್ರತಿಯಾಗಿ ಭೀಮ್ ಆರ್ಮಿ ಕೂಡ ಭೀಮ ಪಥ ಸಂಚಲನಕ್ಕೆ ಅನುಮತಿ ಕೋರಿರುವ ಕುರಿತು ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ಯಾರು ಬೇಕಾದರೂ ಪಥ ಸಂಚಲನ ಮಾಡಲು ಸಂವಿಧಾನ ಅವಕಾಶ ನೀಡಿದೆ. ಹೈಕೋರ್ಟ್ ಹೇಳಿದಂತೆ ಎಲ್ಲರೂ ಸಂವಿಧಾನಬದ್ಧರಾಗಿ ನಡೆಯಬೇಕು. ಹುಕುಂ ಆಧಾರದಿಂದ ಅಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಎಷ್ಟು ಸಾಲ, ಎಷ್ಟು ಬಡ್ಡಿ, ಎಷ್ಟು ಆದಾಯ ಎಂಬ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ನಂತರ ಸರ್ಕಾರ ಚರ್ಚೆಗೆ ಬರಲಿ, ನಾವು ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು.

Tags:    

Similar News