ಸಾರಿಗೆ ಮುಷ್ಕರ: ಫ್ರೀಡಂ ಪಾರ್ಕ್‌ನಲ್ಲಿ ನೌಕರರಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ
ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರು, ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್ ಸಾರಿಗೆ ನೌಕರರಿಂದ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಪ್ರಮುಖವಾಗಿ 38 ತಿಂಗಳ ಭತ್ಯೆ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. 4 ನಿಗಮಗಳ ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಪಾವತಿಸದಿರುವುದು, ತಡೆಹಿಡಿಯಲಾಗಿರುವ ವೇತನ ಪರಿಷ್ಕರಣೆ ಜಾರಿಗೊಳಿಸದಿರುವುದು ಮುಷ್ಕರಕ್ಕೆ ಪ್ರಮುಖ ಕಾರಣ.
ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, "ಆಗಸ್ಟ್ 5 ರಂದು ನಮ್ಮ ಮುಷ್ಕರ ಶತಸಿದ್ಧ. ನಾವು ಈಗಾಗಲೇ 22 ದಿನಗಳ ಮುಂಚಿತವಾಗಿ ನೋಟಿಸ್ ನೀಡಿದ್ದೇವೆ. ಇದಕ್ಕಾಗಿ ನಮ್ಮ ಮೇಲೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ) ಜಾರಿ ಮಾಡಿದ್ದಾರೆ. ಜುಲೈ 1 ರಿಂದ ಡಿಸೆಂಬರ್ ತನಕ ಮುಷ್ಕರ ಮಾಡುವ ಹಾಗಿಲ್ಲ ಎಂದು ಎಸ್ಮಾ ಜಾರಿಗೊಳಿಸಿದ್ದರೂ, ನಾವು ಇದಕ್ಕೆ ಬಗ್ಗುವುದಿಲ್ಲ. ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಈ ಕುರಿತು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಇಂದು ರಾಜ್ಯದ ಮೂಲೆಮೂಲೆಗಳಿಂದ ಸಾರಿಗೆ ನೌಕರರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಇದು ಸರ್ಕಾರಕ್ಕೆ ನೀಡಿದ ಅಂತಿಮ ಎಚ್ಚರಿಕೆಯಾಗಿದ್ದು, ಆಗಸ್ಟ್ 4 ಸರ್ಕಾರಕ್ಕೆ ಅಂತಿಮ ಗಡುವಾಗಿದೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಬೇಡಿಕೆಗಳು ಈಡೇರದ ಪಕ್ಷದಲ್ಲಿ, ಆಗಸ್ಟ್ 5 ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದ್ದು, ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಈಗಲೂ ಸಮಯಾವಕಾಶವಿದೆ ಎಂದು ನೌಕರರು ತಿಳಿಸಿದ್ದಾರೆ.