ಆಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ ಮತ್ತೆ ಟೋಯಿಂಗ್ ಆರಂಭ: ಪರಮೇಶ್ವರ್

ಟೋಯಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರು ಮಾನವೀಯತೆ ಮತ್ತು ಶಾಂತಿಯಿಂದ ವರ್ತಿಸಬೇಕು;

Update: 2025-07-31 08:11 GMT

ಜಿ.ಪರಮೇಶ್ವರ್‌

ರಾಜ್ಯದಲ್ಲಿ ವಾಹನಗಳ ಟೋಯಿಂಗ್ ವ್ಯವಸ್ಥೆಯನ್ನು ಆಗಸ್ಟ್ ಅಂತ್ಯದಿಂದ ಮತ್ತೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ತಿಳಿಸಿದ್ದಾರೆ. 

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ "ಪಾರ್ಕಿಂಗ್ ಸಮಸ್ಯೆ ತೀವ್ರ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಸರಿಪಡಿಸಲು ಟೋಯಿಂಗ್ ಅನಿವಾರ್ಯವಾಗಿದೆ. ಈ ಬಾರಿ ಟೋಯಿಂಗ್ ಕಾರ್ಯವನ್ನು ಇಲಾಖೆಯಿಂದಲೇ ನಡೆಸಲಾಗುವುದು. ಯಾವುದೇ ಗುತ್ತಿಗೆದಾರರಿಗೆ ವಹಿಸುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು. 

ಟೋಯಿಂಗ್ ಕಾರ್ಯಾಚರಣೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರು ಮಾನವೀಯತೆ ಮತ್ತು ಶಾಂತಿಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿರುವುದಾಗಿ ಪರಮೇಶ್ವರ್ ಹೇಳಿದರು. 

ಈ ಹಿಂದೆ ಇದ್ದ ಟೋಯಿಂಗ್‌ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಫೆಬ್ರವರಿ 2022ರಲ್ಲಿ ನಿಲ್ಲಿಸಲಾಗಿತ್ತು. ʻಟೈಗ‌ರ್ʼ ಹೆಸರಿನಲ್ಲಿ ಇದುವರೆಗೂ ಖಾಸಗಿ ಗುತ್ತಿಗೆದಾರರು ಟೋಯಿಂಗ್ ವ್ಯವಸ್ಥೆ ನಿಭಾಯಿಸುತ್ತಿದ್ದರು. ಇನ್ನು ಮುಂದೆ ಪೊಲೀಸ್ ಇಲಾಖೆಯೇ ಟೋಯಿಂಗ್ ವ್ಯವಸ್ಥೆ ನಿರ್ವಹಿಸಲಿದೆ. ವಾಹನ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್ ನಿಯಂತ್ರಿಸಲು ಟೋಯಿಂಗ್ ವ್ಯವಸ್ಥೆ ಮರಳಿ ತರಲಾಗುತ್ತಿದೆ ಎಂದು ಹೇಳಿದರು.

ಟೋಯಿಂಗ್ ಶುಲ್ಕ ನಿಗದಿ

ಪ್ರಸ್ತುತ ನೋ ಪಾರ್ಕಿಂಗ್‌ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ,1000 ರೂಪಾಯಿ ದಂಡ ನಿಗದಿಪಡಿಸಲಾಗಿತ್ತು. ಇದೀಗ ಟೋಯಿಂಗ್ ಜಾರಿಯಾದರೆ ಟೋಯಿಂಗ್ ಶುಲ್ಕ ಸೇರಿ 1,500 ರೂಪಾಯಿಯಿಂದ 1,750 ರೂ ಸಂಗ್ರಹಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದ 16 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Tags:    

Similar News