ಮುಟ್ಟಿನ ರಜೆ | ಮಹಿಳಾ ಉದ್ಯೋಗಿಗಳಿಗೆ ಹೊಸ ಅವಕಾಶ
ಕರ್ನಾಟಕ ಸರ್ಕಾರವು ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವರ್ಷಕ್ಕೆ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ಮುಂದಾಗಿದೆ.;
ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವರ್ಷಕ್ಕೆ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮುಟ್ಟಿನ ರಜೆ ಸಾದ್ಯಾಸಾಧ್ಯತೆ ಪರಿಶೀಲಿಸಲು ರಚಿಸಲಾದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.
ವರದಿ ಸಿದ್ಧಪಡಿಸಲು ರಚಿಸಲಾಗಿದ್ದ ಡಾ ಸಪ್ನಾ ಮುಖರ್ಜಿ ನೇತೃತ್ವದ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಚರ್ಚೆ ನಡೆಸುತ್ತೇವೆ. ಅನುಮೋದನೆಗಾಗಿ ಶಾಸಕಾಂಗದ ಮುಂದೆ ಪ್ರಸ್ತಾಪಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆರಂಭದಲ್ಲಿ ಖಾಸಗಿ ವಲಯಕ್ಕೆ ಮುಟ್ಟಿನ ರಜೆ ನೀತಿ ಪರಿಚಯಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪೂರ್ಣ ಪ್ರಮಾಣದಲ್ಲಿ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೊಹ್ಸಿನ್ ಹೇಳಿದ್ದಾರೆ. ಮುಟ್ಟಿನ ರಜೆ ವಿಚಾರವಾಗಿ ಒಂದು ನೀತಿಯನ್ನು ಹೊಂದುವ ಅಗತ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಅನುಗುಣವಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡುವುದರ ಸಾಧ್ಯಾಸಾಧ್ಯತೆ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈ ವರ್ಷದ ಜುಲೈನಲ್ಲಿ ನಿರ್ದೇಶನ ನೀಡಿತ್ತು. ಉದ್ಯೋಗದಾತರು ಮುಟ್ಟಿನ ರಜೆ ನೀಡುವುದನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರಿಗೆ ಅನುಕೂಲವಾಗಬೇಕು. ಅದರ ಬದಲಿಗೆ ಮುಟ್ಟಿನ ರಜೆ ನೀಡುವುದರಿಂದ ಉದ್ಯೋಗಗಳಲ್ಲಿ ಅವರ ಭಾಗವಹಿಸುವಿಕೆಗೆ ಪ್ರತಿಕೂಲವಾಗದಂತೆ ಗಮನಹರಿಸಬೇಕು ಎಂದೂ ಕೋರ್ಟ್ ಹೇಳಿತ್ತು. ಮುಟ್ಟಿನ ರಜೆಯಿಂದ ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಿಬಿಟ್ಟರೆ ಎಂಬ ಆತಂಕವನ್ನೂ ಕೋರ್ಟ್ ವ್ಯಕ್ತಪಡಿಸಿತ್ತು.